ಶಿವಮೊಗ್ಗ: ನಗರದಲ್ಲಿ ಬಡವರಿಗೆ ಒಂದು ಸ್ವಂತ ಸೂರು ಕಲ್ಪಿಸುವುದು ನನ್ನ ಕನಸಾಗಿತ್ತು. ಅದರಂತೆ ಬೊಮ್ಮನಕಟ್ಟೆ, ವಿರುಪಿನಕೊಪ್ಪ, ಗೋವಿಂದಪುರ, ಗೋಪಿಶೆಟ್ಟಿ ಕೊಪ್ಪ ಸೇರಿದಂತೆ ಅನೇಕ ಕಡೆ ಆಶ್ರಯ ಮನೆಗಳನ್ನು ನಿರ್ಮಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಸೋಮವಾರ ಗೋವಿಂದಪುರದಲ್ಲಿ ಮಹಾನಗರ ಪಾಲಿಕೆ ಮತ್ತು ಆಶ್ರಯ ಸಮಿತಿಯ ಆಶ್ರಯ ದಲ್ಲಿ ಜಿ+2 ಫ್ಲಾಟ್ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಕಡುಬಡತನದಲ್ಲಿರುವ ವೇಳೆ ನಮ್ಮ ತಾಯಿ ಒಂದು ಸ್ವಂತ ಮನೆ ಮಾಡಬೇಕೆಂದು ತಂದೆಯವರನ್ನು ಒತ್ತಾಯಿಸುತ್ತಿದ್ದರು. ಕೊನೆಗೆ ನಮ್ಮ ತಂದೆ ಸಾಲ ಮಾಡಿ ಮನೆ ಕಟ್ಟಿದರು. ಶಾಸಕನಾದ ಕೂಡಲೆ ಹೇಗಾದರೂ ಮಾಡಿ ಬಡವರಿಗೆ ಸರ್ಕಾರದಿಂದ ಸ್ವಂತ ಸೂರು ಕೊಡಿಸುವಂತಹ ಈ ಪ್ರಯತ್ನದ ಹಿಂದೆ ನನ್ನ ತಾಯಿಯವರ ಆಶಯ ಅಡಗಿದೆ. ಅದರಂತೆ ಶಿವಮೊಗ್ಗ ನಗರದ ಎಲ್ಲಾ ಬಡವರಿಗೂ ಸ್ವಂತ ಸೂರು ಒದಗಿಸಲು ಪ್ರಯತ್ನಿಸುತ್ತಿದ್ದೇನೆ. ಈಗಾಗಲೇ ಸಾವಿರಾರು ಮನೆಗಳನ್ನು ಬಡವರಿಗಾಗಿ ಕೊಡಿಸಿದ್ದೇನೆ ಎಂದರು.
ಈಗಾಗಲೇ ಗೋವಿಂದಪುರದಲ್ಲಿ ಸುಮಾರು 3 ಸಾವಿರ ಮನೆಗಳ ಸಮುಚ್ಚಯ ನಿರ್ಮಾಣವಾಗುತ್ತಿದ್ದು, ಅದರ ಫಲಾನುಭವಿಗಳಿಗೆ ಇಂದು ಮಾಡೆಲ್ ಹೌಸ್‌ಗಳನ್ನು ತೋರಿಸಲಾಗುತ್ತಿದ್ದು, ಕೇಂದ್ರ ರಾಜ್ಯ ಸರ್ಕಾರ ಮತ್ತು ಬ್ಯಾಂಕ್‌ಗಳ ಸಹಕಾರ ದೊಂದಿಗೆ ಮನೆಗಳ ನಿರ್ಮಾಣವಾಗುತ್ತಿದ್ದು, 3 ವರ್ಷಗಳಲ್ಲಿ ಮನೆ ಸಿಗಲಿದೆ ಎಂದರು.
ಇನ್ನು ಕೆಲವೇ ದಿನಗಳಲ್ಲಿ 1836 ಕ್ಕೂ ಹೆಚ್ಚು ಮನೆಗಳನ್ನು ನೀಡಲು ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗುವುದು. ಶಿವಮೊಗ್ಗ ನಗರದಲ್ಲಿ ಈಗಾಗಲೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಅರ್ಜಿ ಸಲ್ಲಿಸುವಂತಿಲ್ಲ. ಯಾರು ಮನೆ, ನಿವೇಶನ ಹೊಂದಿಲ್ಲವೋ ಅವರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು. ಪ್ರಸ್ತುತ ನಿರ್ಮಾಣವಾಗುತ್ತಿರುವ ಅಪಾರ್ಟ್ಮೆಂಟ್‌ಗಳಲ್ಲಿ 2 ಬೆಡ್ ರೂಂ ಜೊತೆಗೆ ದೇವರ ಕೋಣೆ, ಅಡುಗೆ ಮನೆ ಸೇರಿದಂತೆ ಪಾರ್ಕ್, ಕುಡಿಯುವ ನೀರು, ಯುಜಿಡಿ ವ್ಯವಸ್ಥೆಯೂ ಇರಲಿದೆ. ಅಂಗವಿಕಲರಿಗೆ, ವಯಸ್ಸಾದವರಿಗೆ ಕೆಳ ಅಂತಸ್ತಿನಲ್ಲಿರುವ ಮನೆಗಳನ್ನು ನೀಡಲಾಗುವುದು ಎಂದರು.
ವೇದಿಕೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಮೇಯರ್ ಸುನಿತಾ ಅಣ್ಣಪ್ಪ, ಆಯುಕ್ತ ಚಿದಾನಂದ ವಠಾರೆ, ಉಪ ಮೇಯರ್ ಶಂಕರ್ ಗನ್ನಿ, ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ಆಶ್ರಯ ಸಮಿತಿ ಅಧ್ಯಕ್ಷ ಎಚ್.ಶಶಿಧರ್ ಸೇರಿದಂತೆ ಹಲವರಿದ್ದರು.