Advertisement

ಹಿಂದುಳಿದ ವರ್ಗಕ್ಕೂ ಮೀಸಲಾತಿ ಕೊಟ್ಟು ಜಿ.ಪಂ.,ತಾ.ಪಂ.ಚುನಾವಣೆ ನಡೆಸುತ್ತೇವೆ: ಈಶ್ವರಪ್ಪ

03:39 PM Apr 06, 2022 | Team Udayavani |

ಶಿವಮೊಗ್ಗ: ಮುಖ್ಯಮಂತ್ರಿಯಾಗಿ ಪೂರ್ಣಾವಧಿಗೂ ಸಿ.ಎಂ. ಆಗಿ ಬೊಮ್ಮಾಯಿಯವರೇ ಇರಲಿದ್ದಾರೆ. ಅವರ ಬದಲಾವಣೆಯ ಪ್ರಶ್ನೆಯೇ  ಇಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲೇ ಆಡಳಿತ ಮಾಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಮುಂದಿನ ಚುನಾವಣೆಯಲ್ಲೂ 150 ಕ್ಕೂ ಹೆಚ್ಚು ಸ್ಥಾನವನ್ನು ನಾವು ಗೆಲ್ಲುತ್ತೇವೆ. ಅವಧಿಗೂ ಮುನ್ನ ಯಾವುದೇ ಕಾರಣಕ್ಕೂ ಚುನಾವಣೆ ನಡೆಯಲ್ಲ. ಇಂತಹ ಸುದ್ಧಿಗಳು ಬರುತ್ತಲೇ ಇರುತ್ತೇವೆ. ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ಎದುರಿಸುತ್ತೇವೆ ಎಂದರು.

ನಮ್ಮ ಒಳ್ಳೆ ಆಡಳಿತ, ಸಂಘಟನೆ, ಒಳ್ಳೆಯ ನೇತೃತ್ವದಲ್ಲಿ ಪೂರ್ಣ ಬಹುಮತದ ಸರ್ಕಾರ ಮುಂದೆ ಬರುತ್ತದೆ. ಸಚಿವ ಸಂಪುಟದಲ್ಲಿ ನಾಲ್ಕು ಸ್ಥಾನ ಖಾಲಿ ಇದೆ. ಅದನ್ನು ತುಂಬುವ ನಿಟ್ಟಿನಲ್ಲಿ ಕೇಂದ್ರದ ನಾಯಕರು, ಮುಖ್ಯಮಂತ್ರಿಗಳು ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಸಂಪುಟ ವಿಸ್ತರಣೆಯೋ, ಪುನರಚನೆಯೋ, ನಮ್ಮ ಕೇಂದ್ರ ನಾಯಕರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಚಂದ್ರು ಕೊಲೆ : ವಿವಾದದ ಬಳಿಕ ‘ನನ್ನಿಂದ ತಪ್ಪು ಹೇಳಿಕೆ’ ಎಂದ ಆರಗ ಜ್ಞಾನೇಂದ್ರ

ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಕಾರಣಕ್ಕೂ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ. ನಮ್ಮ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರು ಪ್ರತಿ ಹಳ್ಳಿ, ಹಳ್ಳಿಗೂ ಹೋಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೂತ್ ಮಟ್ಟ ಮತ್ತು ಪೇಜ್ ಪ್ರಮುಖರನ್ನಿಟ್ಟುಕೊಂಡು ಸಧೃಢವಾಗಿ ಸಂಘಟನೆ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜಾತಿ, ಹಣ ಮೀರಿ, ಸಂಘಟನೆ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಸಂಘಟನೆ ನೇತೃತ್ವದಲ್ಲೇ, ಪೂರ್ಣ ಬಹುಮತ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಜಿ.ಪಂ., ತಾ.ಪಂ. ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಈಗಾಗಲೇ ಸರ್ವಪಕ್ಷಗಳ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗುತ್ತೆ ಎಂಬ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಿಗಲ್ಲ. ಹೀಗಾಗಿ, ಆಯೋಗ ನೇಮಕ ಮಾಡಿ, ಅದರ ವರದಿ ತರಿಸಿಕೊಂಡು ಚುನಾವಣಾ ಆಯೋಗಕ್ಕೆ ಸಲ್ಲಿಸುತ್ತೇವೆ. ಹಿಂದುಳಿದ ವರ್ಗಕ್ಕೂ ಮೀಸಲಾತಿ ಕೊಟ್ಟು ಚುನಾವಣೆ ನಡೆಸುತ್ತೇವೆ. ಅವರಿಗೆ ಅನ್ಯಾಯ ಮಾಡಿ ಚುನಾವಣೆ ನಡೆಸಲ್ಲ. ಇದನ್ನು ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್ ಗೆ ತಿಳಿಸುತ್ತೇವೆ ಎಂದರು.

ಶಿವಮೊಗ್ಗದಲ್ಲಿ ಶಾಂತಿಗೆ ಭಂಗವುಂಟಾಗಿದೆ ಎಂದು ಡಿ.ಕೆ.ಶಿ. ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟ ಅವರು, ಹರ್ಷನ ಹತ್ಯೆ ಬಳಿಕ, ಆತನ ಕೊಲೆಗಡುಕರಿಗೆ ತಕ್ಷಣವೇ ಬಂಧಿಸಲಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದೆ. ಇದಕ್ಕಾಗಿ ರಾಜ್ಯದ ಜನರು ಸರ್ಕಾರಕ್ಕೆ ಶ್ಲಾಘಿಸುತ್ತಿದ್ದಾರೆ. ನಗರದಲ್ಲಿ ಶಾಂತಿಯಿಂದ ಜನರು, ತಮ್ಮ ವ್ಯಾಪಾರ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ, ಡಿ.ಕೆ. ಶಿವಕುಮಾರ್ ಈ ಬಗ್ಗೆ ಆರೋಪ ಮಾಡುತ್ತಿರುವುದು ಸರಿಯಲ್ಲ. ಜನರು ಸಂತೃಪ್ತಿಯಿಂದ ವ್ಯವಹಾರ ಮಾಡಿಕೊಂಡು ಹೋಗುತ್ತಿರುವುದು ಡಿ.ಕೆ. ಶಿವಕುಮಾರ್ ಗೆ ಇಷ್ಟ ಇಲ್ಲ ಅನ್ಸುತ್ತದೆ. ಅವರಿಗೆ ಗೊಂದಲವೇ ಬೇಕು ಎನ್ನುವ ಅಪೇಕ್ಷೆ ಇರಬಹುದು. ಶಿವಮೊಗ್ಗದಲ್ಲಿ ಯಾವುದೇ ಗೊಂದಲವಿಲ್ಲ. ಶಾಂತಿಯಿಂದಿರಲು, ಜನರು ತೀರ್ಮಾನ ಮಾಡಿದ್ದಾರೆ ಎಂದು ಡಿ.ಕೆ.ಶಿ. ಆರೋಪಕ್ಕೆ ನಯವಾಗಿ ತಿರುಗೇಟು ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next