ಬೆಂಗಳೂರು: ಅಳಿಯ ಚಿಕ್ಕಪೆದ್ದಣ್ಣಗೆ ಕೋಲಾರ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರೂ ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸುವುದಾಗಿ ಹೇಳಿರುವ ಸಚಿವ ಕೆ.ಎಚ್. ಮುನಿಯಪ್ಪ, ಕಾಂಗ್ರೆಸ್ ಪಕ್ಷ ಗೆಲ್ಲುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಕೈ ತಪ್ಪಿದ್ದೇಕೆ? ತಪ್ಪಿಸಿದರ್ಯಾರು ಎನ್ನುವ ಪ್ರಶ್ನೆಗಳ ಬಗ್ಗೆ ಈಗ ಮಾತನಾಡುವುದು ಬೇಡ. ಅವರೂ ಕೆಲಸ ಮಾಡಲಿ, ನಾನೂ ಕೆಲಸ ಮಾಡುತ್ತೇನೆ. ಅಂತಿಮವಾಗಿ ಕಾಂಗ್ರೆಸ್ ಗೆಲ್ಲಬೇಕು. ಅದಕ್ಕಾಗಿ ನಾನೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗದ್ಗದಿತರಾಗಿ ನುಡಿದರು.
ನನ್ನ 30 ವರ್ಷದ ರಾಜಕಾರಣದಲ್ಲಿ 7 ಬಾರಿ ಸ್ಪರ್ಧಿಸಿ ಗೆಲ್ಲಲು ಕಾಂಗ್ರೆಸ್ ನನಗೆ ಅವಕಾಶ ಮಾಡಿಕೊಟ್ಟಿದೆ. 10 ವರ್ಷ ಮಂತ್ರಿಯಾಗಿ ಕೆಲಸ ಮಾಡಿದೆ. ಸಿಡಬ್ಲ್ಯುಸಿಯಲ್ಲಿ ಕೆಲಸ ಮಾಡಿದೆ. ಅದಾದ ಬಳಿಕ ಸೋತೆ ಎಂದು ಕಾಂಗ್ರೆಸ್ ನನ್ನನ್ನು ವಿಧಾನಸಭೆಗೆ ಕಳಿಸಿ ಮಂತ್ರಿ ಮಾಡಿದೆ. ಇನ್ನೇನು ಮಾಡಲು ಸಾಧ್ಯ ಎಂದು ಹೇಳಿದರು.
ನಮ್ಮಲ್ಲಿ ಒಗ್ಗಟ್ಟು ಬರಲಿಲ್ಲ ಅಷ್ಟೇ :
ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೆ. ನನ್ನ ಸೇವೆ ಕ್ಷೇತ್ರದಲ್ಲಿತ್ತು. ಹಾಗಾಗಿ ಗೆಲ್ಲುತ್ತೇವೆಂದು ಟಿಕೆಟ್ ಕೇಳಿದ್ದೆವು. ಕೊಡಲು ಅವರೂ ತೀರ್ಮಾನಿಸಿದ್ದರು. ಆದರೂ ನಮ್ಮಲ್ಲಿ ಒಗ್ಗಟ್ಟು ಬರಲಿಲ್ಲ. ಒಟ್ಟಭಿಪ್ರಾಯ ಬಾರದೆ ಭಿನ್ನಭಿಪ್ರಾಯ ಬಂದಿದೆ. ಗೌತಮ್ ತಂದೆ ಮೇಯರ್ ಆಗಿದ್ದರು. ಎಸ್.ಎಂ. ಕೃಷ್ಣ ಸಿಎಂ ಇದ್ದಾಗ ಅವರನ್ನು ರಾಜ್ಯಸಭೆಗೆ ಕಳುಹಿಸಲು ನಾನೂ ಪ್ರಯತ್ನಿಸಿದ್ದೆ. ಬೇಸರ ಇಲ್ಲ. ಏನೇ ಇರಲಿ. ರಾಜ್ಯದಲ್ಲಿ ಕಾಂಗ್ರೆಸ್ ಬರಬೇಕು. ಹಿರಿಯನಾಗಿ ಹೈಕಮಾಂಡ್ ಜತೆಯಲ್ಲಿದ್ದೇನೆ. ಅವರ ತೀರ್ಮಾನಕ್ಕೆ ಬದ್ಧವಾಗಿ ನಾನು ಕೆಲಸ ಮಾಡುತ್ತೇನೆ. ಕೋಲಾರದಲ್ಲಿ ಯಾವಾಗ ಪ್ರಚಾರ ಕಾರ್ಯ ಆರಂಭಿಸಿದರೂ ಸಿದ್ಧನಾಗಿ ಹೋಗುತ್ತೇನೆ ಎಂದು ಹೇಳಿದರು.
ಎರಡೂ ಬಣಗಳ ಮಧ್ಯೆ ಬೇರೆ ಏನೋ ವೈಮನಸ್ಸು ಇತ್ತು. ನನ್ನ ವಿಚಾರ ಬಂದಾಗ ಯಾರೂ ತಕರಾರು ವ್ಯಕ್ತಪಡಿಸಿಲ್ಲ. ಎಲ್ಲರೂ ನನಗೆ ಸಹಕರಿಸುತ್ತಾರೆ. ಆಶೀರ್ವದಿಸುತ್ತಾರೆ. ನಾನು ಕಾಂಗ್ರೆಸ್ ಅಭ್ಯರ್ಥಿ. 27 ವರ್ಷಗಳ ಕೆಲಸ ನೋಡಿ ಪಕ್ಷ ಸೂಕ್ತ ಅಭ್ಯರ್ಥಿ ಎಂದು ಗುರುತಿಸಿ ಕೊಟ್ಟಿದೆ. ಯಾವ ಬಣವೂ ಇಲ್ಲ. ಚಿಕ್ಕಪೆದ್ದಣ್ಣಗೆ ಮುನಿಯಪ್ಪ ಟಿಕೆಟ್ ಕೇಳಿದ್ದು ಸಹಜ. ಎಲ್ಲರನ್ನೂ ಭೇಟಿ ಮಾಡಿಯೇ ವಿಶ್ವಾಸಕ್ಕೆ ಪಡೆದೇ ಪ್ರಚಾರಕ್ಕೆ ಹೋಗುತ್ತೇನೆ.
– ಕೆ.ವಿ.ಗೌತಮ್, ಕೋಲಾರ ಕಾಂಗ್ರೆಸ್ ಅಭ್ಯರ್ಥಿ