ವಿಜಯಪುರ: ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಸಿಎಂ ಸಿದ್ದರಾಮಯ್ಯ ಕುರಿತು ಹಗುರವಾಗಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ಅವರ ಸದಸ್ಯತ್ವ ರದ್ದು ಮಾಡುವಂತೆ ಆಗ್ರಹಿಸಿ ನಗರದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ನೇತೃತ್ವದಲ್ಲಿ ಮನವಿ ಸಲ್ಲಿಸಿ ಇಬ್ಬರೂ
ಸಂಸದರ ಸದಸ್ಯತ್ವ ರದ್ದು ಮಾಡುವಂತೆ ಆಗ್ರಹಿಸಿದರು.
ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಅಧ್ಯಕ್ಷ ಹಾಸಿಂಪೀರ್ ವಾಲೀಕಾರ ಮಾತನಾಡಿ, ವಿಚಾರವಾದಿಗಳು, ಜಾತ್ಯತೀತವಾದಿಗಳು ತಂದೆ-ತಾಯಿ ಇಲ್ಲದ ವಿಳಾಸದವರು ಎಂಬ ಹಗುರ ಹಾಗೂ ಕೀಳು ಪದ ಬಳಕೆ ಮಾಡಿರುವುದು ಖಂಡನಾರ್ಹ. ಜಾತ್ಯತೀತ ತತ್ವದಲ್ಲಿ ಬದುಕುವ ದೇಶದ ಜನರಲ್ಲಿ ಸಾಮರಸ್ಯ ಕದಡುತ್ತವೆ. ವಿಶ್ವಕ್ಕೆ ಮಾದರಿ ಎನಿಸಿರುವ ಪ್ರಜಾಪ್ರಭುತ್ವ ಅತಿದೊಡ್ಡ ಲಿಖೀತ ಹಾಗೂ ಶ್ರೇಷ್ಠ ಸಂವಿಧಾನ ಎಂಬ ಹಿರಿಮೆ ಹೊಂದಿರುವ ಸಂವಿಧಾನವನ್ನೇ ಬದಲಿಸುವ ಮಾತನಾಡಿರುವುದು ಹಾಸ್ಯಸ್ಪದ ಎಂದು ಟೀಕಿಸಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ದಿಲಾವರ ಖಾಜಿ, ಸುನೀಲ ಉಕ್ಕಲಿ ಮಾತನಾಡಿ, ಜಿಹಾದಿ ಮುಸ್ಲಿಂ ಪ್ರದೇಶಗಳು ಮಾದಕ ದ್ರವ್ಯಗಳ ಪ್ರದೇಶಗಳಾಗಿವೆ ಎಂಬ ಹೇಳಿಕೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ಆರೋಪ ಅವಿವೇಕತನದ ಪರಮಾವಧಿ. ಇಸ್ಲಾಂ ಮಾದಕ ವ್ಯಸನವನ್ನು ಸಂಪೂರ್ಣ ನಿಷೇಧಿಸಿದೆ ಎಂಬ ಪರಿಜ್ಞಾನವಿಲ್ಲದೇ ಮಾತನಾಡಿರುವ ಶೋಭಾ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡ ಅಡಿವೆಪ್ಪ ಸಾಲಗಲ್ಲ ಮಾತನಾಡಿ, ಸಮಾಜದಲ್ಲಿ ಜಾತಿವಾದಕ್ಕೆ ಪ್ರೇರಣೆ ನೀಡುತ್ತ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ನಗರದಲ್ಲಿ ಜರುಗಿದ ಅಪ್ರಾಪ್ತ ಮೇಲಿನ ಕೃತ್ಯದ ಆರೋಪಿಗಳು ಯಾರೊಂದಿಗೆ ಬೆಳೆದಿದ್ದಾರೆ ಎಂದು ಪ್ರಶ್ನಿಸಿದರು.
ಹೋರಾಟದಲ್ಲಿ ಸಲೀಮ ಜಹಾಗೀರದಾರ, ಅಜೀಮ ಇನಾಮದಾರ, ಬಾಳಾಸಾಹೇಬ ಪಾಟೀಲ, ಪ್ರೊ| ರಜಪೂತ, ಶಕೀಲಾ ಹುನಗುಂದ, ಯಾಸ್ಮಿನ್ ಯಲಗಾರ, ಶಹನಾಜ್ ಇನಾಮದಾರ, ಶಾಮನ್ ಇನಾಮದಾರ, ಹುಸೇನಪಟೇಲ್ ಪಾಟೀಲ, ಹುಸೇನ್ ಬಾಗಾಯತ, ಶಹಾಪುರ ಜನಾಬ ಇದ್ದರು.