Advertisement

Cauvery: ಕಾವೇರಿ ನೀರಿನ‌ ವಿಚಾರದಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲ: ಹೆಚ್ ಸಿ ಮಹದೇವಪ್ಪ

02:18 PM Aug 21, 2023 | Team Udayavani |

ಮೈಸೂರು : ಕಾವೇರಿ ನದಿ ನೀರಿನ‌  ವಿಚಾರದಲ್ಲಿ ಬಿಜೆಪಿ ರಾಜಕೀಯ ಬೇಳೆ ಬೇಯಿಸಿ‌‌ ಕೊಳ್ಳುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ತಮಿಳುನಾಡಿಗೆ ನೀರು ಬಿಡಲಾಗಿದೆ. ಹೀಗಾಗಿ ಬಿಜೆಪಿ ಈಗ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಸಚಿವ ಡಾ ಹೆಚ್ ಸಿ ಮಹದೇವಪ್ಪ ಹೇಳಿದರು.

Advertisement

ನಗರದಲ್ಲಿ ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗು ನ್ಯಾಯಾಲಯದ ನಿರ್ದೇಶನದಂತೆ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ಮಳೆಯಾಗದ ಸಂದರ್ಭದಲ್ಲಿ ಸಂಕಷ್ಟ ಸೂತ್ರದಡಿ ನೀರು ಹಂಚಿಕೆ ಮಾಡಿಕೊಳ್ಳಬೇಕಿದೆ. ಸಂಕಷ್ಟ ಸೂತ್ರದಂತೆ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ಆಗಸ್ಟ್ 23ರಂದು ನಡೆಯುವ ಸರ್ವ ಪಕ್ಷಗಳ ಸಭೆಯಲ್ಲಿ ಈ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗುತ್ತದೆ‌ ಎಂದು ಹೇಳಿದರು.

ಕಾವೇರಿ ಕರ್ನಾಟಕದ ಉಸಿರು. ನೂರಾರು ವರ್ಷಗಳಿಂದ, ಮದ್ರಾಸ್ ಪ್ರಾಂತ್ಯ ಇದ್ದಾಗಿನನಿಂದಲೂ ನಮಗೂ ತಮಿಳುನಾಡಿಗೂ ವ್ಯಾಜ್ಯ ನಡೆಯುತ್ತಲೇ ಇದೆ. ಸುಪ್ರೀಂ ಕೋರ್ಟ್ ನ ಆದೇಶದ ಮೇರೆಗೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿದೆ. ಯಾರು ಯಾರಿಗೆ ಎಷ್ಟೆಷ್ಟು ನೀರು ಹಂಚಿಕೆ ಆಗಬೇಕೆಂಬುದು ತೀರ್ಮಾನವಾಗಿದೆ. ಕೋರ್ಟ್ ನ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಿದ್ದೇವೆ ಎಂದರು.

ಬರದ ಪರಿಸ್ಥಿತಿಯಲ್ಲಿ ಎಲ್ಲರೂ ಸಂಕಷ್ಟವನ್ನು ಹಂಚಿಕೊಳ್ಳಬೇಕಿದೆ. ಈ ಬಾರಿ ಕಡಿಮೆ ಮಳೆ ಬಿದ್ದಿದೆ, ನಮ್ಮ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀರಾ ಕಡಿಮೆ ಇದೆ. ಕಟ್ಟು ಮಾದರಿಯಲ್ಲಿ ನೀರು ನೀಡಬೇಕೆಂದು ನೀರಾವರಿ ಸಲಹಾ ಸಮಿತಿ ತೀರ್ಮಾನಿಸಿದೆ. ವೈಯುಕ್ತಿಕ ಹಿತಾಸಕ್ತಿಯಿಂದ ಯಾವುದೇ ಸರ್ಕಾರ ಕೆಲಸ ಮಾಡುವುದಿಲ್ಲ. ರಾಜ್ಯದ ರೈತರ ಹಿತದೃಷ್ಟಿಯಿಂದಲೇ ಕೆಲಸ ಮಾಡಬೇಕು. ಇದರಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲ ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next