Advertisement

“ಒನ್‌ ಸ್ಟೇಟ್‌ ಒನ್‌ ಜಿಪಿಎಸ್‌’ತಂತ್ರಾಂಶ ವ್ಯವಸ್ಥೆ ಜಾರಿ

10:19 PM Mar 29, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಖನಿಜ ಅಕ್ರಮ ಸಾಗಣೆಗೆ ಬ್ರೇಕ್‌ ಹಾಕಲು “ಒನ್‌ ಸ್ಟೇಟ್‌ ಒನ್‌ ಜಿಪಿಎಸ್‌’ ವ್ಯವಸ್ಥೆ ಜಾರಿಗೊಳಿಸಲು ಸರಕಾರ ಉದ್ದೇಶಿಸಿದ್ದು, ಮುಂದಿನ ಎರಡು-ಮೂರು ತಿಂಗಳಿನಲ್ಲಿ ಈ ನೂತನ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

Advertisement

“ಒನ್‌ ಸ್ಟೇಟ್‌ ಒನ್‌ ಜಿಪಿಎಸ್‌’ ವ್ಯವಸ್ಥೆ ಮೂಲಕ ಖನಿಜ/ಉಪಖನಿಜ ಸಾಗಾಣಿಕೆ ಲಾರಿಗಳಿಗೆ ಜಿಪಿಎಸ್‌ ಅಳವಡಿಸಿ, ಖನಿಜ ಸಾಗಣೆ ಮೇಲೆ ನಿಗಾ ಇಡಲು ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಸಂಬಂಧ ದಿಲ್ಲಿಯ ಇಂಟಿಗ್ರೇಟೆಡ್‌ ಮಲ್ಟಿಮೋಡಲ್‌ ಟ್ರಾನ್ಸಿಟ್‌ ಸಿಸ್ಟ್‌ಂ ಲಿ. ಸಮಗ್ರ ಯೋಜನ ವರದಿಯ ಕರಡು ಸಿದ್ಧಪಡಿಸಿ, ಪ್ರಸ್ತಾವನೆಯನ್ನೂ ಸಲ್ಲಿಸಿದೆ. ಈ ಕುರಿತು ಟೆಂಡರ್‌ ಪ್ರಕ್ರಿಯೆ ಸರಕಾರದ ಪರಿಶೀಲನೆಯಲ್ಲಿದೆ ಎಂದವರು ಮಾಹಿತಿ ನೀಡಿದರು.

ಕೇಂದ್ರೀಕೃತ ನಿಗಾ
ಮಂಗಳವಾರ ಪ್ರಶ್ನೋತ್ತರ ವೇಳೆ ಜೆಡಿಎಸ್‌ನ ಸಿ.ಎನ್‌. ಮಂಜೇಗೌಡ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎರಡು-ಮೂರು ತಿಂಗಳಲ್ಲಿ ಒನ್‌ ಸ್ಟೇಟ್‌, ಒನ್‌ ಜಿಪಿಎಸ್‌ ವ್ಯವಸ್ಥೆ ಜಾರಿಗೊಳಿಸಲಾಗುವುದು. ಅಗತ್ಯ ಇರುವ ಕಡೆಗೆ ಕಾನೂನು ಪ್ರಕಾರ ಗಣಿಗಾರಿಕೆಗೆ ಅನುಮತಿ ನೀಡಿದ್ದೇವೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ.
ರಾಜ್ಯದಲ್ಲಿ ಖನಿಜ ಸಾಗಾಣಿಕೆ ವಾಹನಗಳ ಮೇಲೆ ನಿಗಾ ವಹಿಸಲು ಇಂಟಗ್ರೇಟೆಡ್‌ ಲೀಸ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ (ಐಎಲ್‌ಎಂಎಸ್‌) ತಂತ್ರಾಂಶ ರೂಪಿಸಲಾಗಿದೆ. ಖನಿಜ ಸಾಗಾಣಿಕೆ ವಾಹನಗಳಿಗೆ ಜಿಪಿಎಸ್‌ ಅಳವಡಿಸಿ ಕೇಂದ್ರೀಕೃತ ನಿಗಾ ವಹಿಸಲು ತಂತ್ರಾಂಶ ರೂಪಿಸಲಾಗುತ್ತಿದೆ ಎಂದರು.

ಇದನ್ನೂ ಓದಿ:ಪಂಜಾಬ್‌: ಅಧಿಕಾರಿಗಳನ್ನು ಒತ್ತೆಯಾಳು ಮಾಡಿಕೊಂಡ ರೈತರು

ಗಣಿಗಾರಿಕೆ ಪ್ರದೇಶ ಅಭಿವೃದ್ಧಿ
ಜಿಲ್ಲಾ ಗಣಿಗಾರಿಕೆ ನಿಧಿ (ಡಿಎಂಎಫ್) ಅಡಿ ಸಂಗ್ರಹವಾಗುವ ಮೊತ್ತವನ್ನು ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಬಳಕೆಗೆ ಅವಕಾಶ ಇದ್ದು, ಇದನ್ನು ಆಯಾ ಕ್ಷೇತ್ರದ ಶಾಸಕರೇ ನಿರ್ಧಾರ ಕೈಗೊಳ್ಳಲು ಅವಕಾಶ ಇದೆ ಎಂದು ಸಚಿವ ಹಾಲಪ್ಪ ಆಚಾರ್‌ ತಿಳಿಸಿದರು. ಸುನೀಲ್‌ ವಲ್ಯಾಪುರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ಜಿಲ್ಲಾ ಟ್ರಸ್ಟ್‌ ಹಣ ಬಳಕೆ ಬಗ್ಗೆ ನಿರ್ಧರಿಸುತ್ತದೆ ಎಂದರು.

Advertisement

ಆಗ ಮಧ್ಯಪ್ರವೇಶಿಸಿದ ಸುನೀಲ್‌ ವಲ್ಯಾಪುರ, “ಹೀಗೆ ಬಳಕೆ ಮಾಡುವಾಗ ಶಾಸಕರ ಜತೆಗೆ ಆಯಾ ಜಿಲ್ಲಾ ವ್ಯಾಪ್ತಿಗೆ ಬರುವ ವಿಧಾನ ಪರಿಷತ್‌ ಸದಸ್ಯರ ಅಭಿಪ್ರಾಯಗಳನ್ನೂ ಪರಿಗಣಿಸಬೇಕು’ ಎಂದರು. ಆದರೆ, ಆಕ್ಷೇಪ ವ್ಯಕ್ತಪಡಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ, ವಿಧಾನ ಪರಿಷತ್‌ ಸದಸ್ಯರ ಅಭಿಪ್ರಾಯ ಪರಿಗಣಿಸಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

5,300 ಕೋಟಿ ರೂ. ರಾಜಧನ ಸಂಗ್ರಹ
ಕಳೆದ ವರ್ಷ ಗಣಿಗಾರಿಕೆಯಿಂದ ನಾಲ್ಕು ಸಾವಿರ ಕೋಟಿ ರೂ. ರಾಜಧನ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಇಲಾಖೆಯು ಗುರಿಗಿಂತಲೂ ಹೆಚ್ಚು ಅಂದರೆ 5,300 ಕೋಟಿ ರೂ. ರಾಜಧನ ಸಂಗ್ರಹಿಸಿದೆ. ಕಳೆದ ಮೂರು ವರ್ಷಗಳಲ್ಲಿ ಗಣಿಗಾರಿಕೆಯ ಸರಕು ಸಾಗಾಣಿಕೆ ಮಾಡುವ ವಾಹನಗಳು ನಿಗದಿಗಿಂತ ಹೆಚ್ಚಿನ ಭಾರ ಸಾಗಣೆ ಮಾಡುವ 27,763 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, 17.17 ಕೋಟಿ ರೂಪಾಯಿ ದಂಡ ವಸೂಲು ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next