ಮೈಸೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಗದ ವಿದ್ಯಾರ್ಥಿಗಳಿಗೆ ಕಾಲೇಜು ದಾಖಲಾತಿಯಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲದೆ ದಾಖಲಾಗಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ತಿಳಿಸಿದ್ದಾರೆ
ಮೈಸೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೋಷಿತ ಸಮುದಾಯದ ವಿದ್ಯಾರ್ಥಿಗಳು ಯಾವುದೇ ರೀತಿಯ ಶುಲ್ಕ ಕಟ್ಟದೆ ಕಾಲೇಜುಗಳಲ್ಲಿ ದಾಖಲಾತಿ ಪಡೆಯಬಹುದು, ವಿದ್ಯಾರ್ಥಿಗಳ ವಿದ್ಯಾರ್ಜನೆಯ ಹಿತದೃಷ್ಟಿಯಿಂದ ಈಗಾಗಲೇ ಈ ಹಿಂದೆ ಇದ್ದ ನಿಯಮಗಳನ್ನು ಸಡಿಲಿಸಿ ಇದನ್ನು ಜಾರಿಗೊಳಿಸಲಾಗಿದೆ ಎಂದರು.
ರಾಜ್ಯದಲ್ಲಿ ನೆನ್ನೆ ಉದ್ಘಾಟನೆಗೊಂಡ ಶಕ್ತಿಯೋಜನೆಗೆ ಅಭುತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಹೆಚ್ಚಾಗಿ ಮಹಿಳೆಯರು ಬಸ್ ನಲ್ಲಿ ಸಂಚರಿಸುವ ಮೂಲಕ ಈ ಯೋಜನೆಯನ್ನು ಯಶಸ್ವಿಗೊಳಿಸುತ್ತಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಹಿಳೆಯರು ಸಂಚರಿಸಿ ಸಂತಸಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ನೀಡಿರುವ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಿದ್ದೇವೆ ಎಂದು ತಿಳಿಸಿದರು.
ಜೂನ್ 23 ರಿಂದ ಆಷಾಢ ಶುಕ್ರವಾರ ಆರಂಭವಾಗಲಿದೆ. ಜುಲೈ 10 ಚಾಮುಂಡಿ ತಾಯಿಯ ವರ್ಧಂತಿ ನಡೆಯಲಿದೆ ಈ ಕುರಿತು ಮಾತನಾಡಿದ ಅವರು, ಈ ಬಾರಿ ಆಷಾಢ ಶುಕ್ರವಾರದಂದು ಬೆಟ್ಟಕ್ಕೆ ತೆರಳಲು ಕೊಡುತ್ತಿದ್ದ ವಾಹನ ಪಾಸ್ ರದ್ದು ಮಾಡಲು ಮೈಸೂರು ಜಿಲ್ಲಾಡಳಿತ ಚಿಂತನೆ ನಡೆಸಿದೆ. ವಾಹನ ಪಾಸ್ ಗಳಿಂದ ಕಳೆದ ಬಾರಿ ದೊಡ್ಡ ಮಟ್ಟದ ಗೊಂದಲ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಪಾಸ್ ರದ್ದತಿಗೆ ಜಿಲ್ಲಾಡಳಿತ ಚಿಂತನೆ ಎಂದರು.
ಅಂದು ಮಹಿಳೆಯ ಸಮಾನತೆ ವಿರೋಧಿಸಿದವರೇ ಇಂದು ಶಕ್ತಿ ಯೋಜನೆಯ ವಿರೋಧಿಗಳಾಗಿದ್ದಾರೆ. ಮನುವಾದಿಗಳು ಮಹಿಳೆಯರ ಸಮಾನತೆ ವಿರೋಧಿಸಿದರು. ಇಂದು ಮಹಿಳೆಯರಿಗಾಗಿ ಉಚಿತ ಬಸ್ ಸೌಲಭ್ಯವನ್ನು ಟೀಕಿಸುತ್ತಿದ್ದಾರೆ. ದೇಶದಲ್ಲಿ ಹಿಂದೂ ಕೋಡ್ ಬಿಲ್ ಬಂದಾಗ ಮಹಿಳೆ ಸಬಲೀಕರಣ, ಮಹಿಳೆಯರಿಗೆ ಸಮಾನ ಅವಕಾಶ, ಸಮಾನವೇತನವನ್ನು ವಿರೋಧಿಸಿದರು. ಅಂತಹ ಮನಸ್ಥಿತಿಯ ಮನುವಾದಿಗಳು ಶಕ್ತಿಯೋಜನೆಯ ಉಚಿತ ಬಸ್ ಸೌಲಭ್ಯವನ್ನು ವ್ಯಂಗ್ಯವಾಡುತ್ತಿದ್ದಾರೆ ಎಂದರು.