ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯೂ ಸೇರಿದಂತೆ ರಾಜ್ಯದ ನೀರಾವರಿ ಯೋಜನೆ ಹಾಗೂ ರಾಜ್ಯಕ್ಕೆ ಹಂಚಿಕೆಯಾದ ನೀರು ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಮಾರ್ಗದರ್ಶನ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಂದೆ ಐದು ವರ್ಷ ಜಲ ಸಂಪನ್ಮೂಲ ಸಚಿವರಾಗಿದ್ದರು. ನೀರಾವರಿ ವಿಷಯದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಅವರ ಸಲಹೆ ಪಡೆದು ಕಾರ್ಯ ನಿರ್ವಹಿಸುತ್ತೇನೆ. ಅಕ್ಕ-ಪಕ್ಕದ ರಾಜ್ಯಗಳ ನೀರಾವರಿ ಸಮಸ್ಯೆ ಕಾನೂನು ಸಮಿತಿ ಸಲಹೆ ಮೇರೆಗೆ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.
ಈ ಭಾಗದ ಪ್ರಮುಖ ಯುಕೆಪಿ ಯೋಜನೆಗೆ ಹೆಚ್ಚಿನ ಅನುದಾನ ಪಡೆಯಬೇಕಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು, ಕೃಷ್ಣಾ ನದಿ ನೀರು ಹಂಚಿಕೆ ವಿಷಯದಲ್ಲಿ ನ್ಯಾಯಾಲಯ ಮೆಟ್ಟಿಲು ಹತ್ತಿವೆ. ನಮ್ಮ ಪಾಲಿನ ನೀರನ್ನು ನಾವು ಬಳಸಿಕೊಳ್ಳುತ್ತೇವೆ. ಇದಕ್ಕಾಗಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ ಬೊಮ್ಮಾಯಿ ಅವರು, ದೇವೇಗೌಡರೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂಬ ಶಾಸಕ ಪ್ರೀತಂ ಗೌಡ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಕಾರಜೋಳ, ಅವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ದೇವೇಗೌಡರು ಮಾಜಿ ಪ್ರಧಾನಿ. ಹಿರಿಯರು, ಅವರ ಸಲಹೆ ಪಡೆಯಲು ಮುಖ್ಯಮಂತ್ರಿಗಳು ಹೋಗಿದ್ದರು. ಇದರಲ್ಲಿ ಹೊಂದಾಣಿಕೆ ರಾಜಕಾರಣ ಇಲ್ಲ ಎಂದರು.
ಸರ್ಕಾರದ ವಿವಿಧ ಖಾತೆಗಳಲ್ಲಿ ಪ್ರಭಾವಿ, ಕಡೆಗಣನೆ ಎಂದಿಲ್ಲ. ಎಲ್ಲ ಖಾತೆಗಳೂ ಪ್ರಭಾವ ಇರುವ ಖಾತೆಗಳೇ ಇವೆ. ನಾನು ಆಹಾರ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಲೋಕೋಪಯೋಗಿ ಸಚಿವನಾಗಿದ್ದೆ. ಈಗ ಪಕ್ಷದ ವರಿಷ್ಟರು ಜಲ ಸಂಪನ್ಮೂಲ ಸಚಿವ ಸ್ಥಾನ ನೀಡಿದ್ದಾರೆ. ನನಗೆ ವಹಿಸಿದ ಖಾತೆಯನ್ನು ಸಮರ್ಥ ವಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.
ಮೇಕೆದಾಟು ಯೋಜನೆ ವಿರೋಧಿಸಿ ಅಣ್ಣಾಮಲೈ ಹೋರಾಟ ನಡೆಸಿದ್ದು, ಇದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕೂಡ ಬೆಂಬಲ ನೀಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಾಲಿನ ನೀರು ಬಳಸಿಕೊಳ್ಳಲು ಯಾರಪ್ಪನ ಅಪ್ಪಣೆಯೂ ಬೇಕಾಗಿಲ್ಲ. ನೀರು ಸದ್ಭಳಕೆ ಮಾಡಿಕೊಳ್ಳುತ್ತೇವೆ. ಕಾನೂನು ಪ್ರಕಾರ ಕುಡಿಯುವ ನೀರು, ವಿದ್ಯುತ್ ಉತ್ಪಾದನೆಗೆ ಬಳಸುತ್ತಿದ್ದಾರೆ. ಅಣ್ಣಾ ಮಲೈ ಹೋರಾಟದಲ್ಲಿ ಯಾವುದೇ ಅರ್ಥವಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.