Advertisement

Minister Dr. MC Sudhakar: ಚಿಂತಾಮಣಿಗೆ ಸೀಮಿತವಾಯಿತೇ ಸಚಿವರ ಜನತಾ ದರ್ಶನ

11:57 AM May 27, 2024 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಉಸ್ತುವಾರಿ ಸಚಿವರಾದ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಸಚಿವರಾದ ಬಳಿಕ ಆರಂಭಿಸಿರುವ ವಾರಾಂತ್ಯದ ಜನತಾ ದರ್ಶನಕ್ಕೆ ಬರೋಬ್ಬರಿ ಒಂದು ವರ್ಷ ಸಂದಿದೆ.

Advertisement

ಹೌದು, ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಬಳಿಕ ಡಾ.ಎಂ.ಸಿ.ಸುಧಾಕರ್‌, ತಮ್ಮ ಸ್ವ ಕ್ಷೇತ್ರದಲ್ಲಿ ನಡೆಸಿರುವ ಜನತಾ ದರ್ಶನ ಬಗ್ಗೆ ಸ್ವತಃ ಸಚಿವರೇ ಮೆಲುಕು ಹಾಕಿಕೊಂಡು ವರುಷ 1 ಸಮಸ್ಯೆಗಳ ಪರಿಹಾರ ಸಾವಿರಾರು ಎಂದು ತಮ್ಮ ಫೇಸ್‌ಬುಕ್‌ ನಲ್ಲಿ ಬರೆದುಕೊಂಡು ಗಮನ ಸೆಳೆದಿದ್ದಾರೆ.

43 ಬಾರಿ ಜನತಾ ದರ್ಶನ: ಇನ್ನೂ ಸಚಿವ ಡಾ. ಎಂ.ಸಿ.ಸುಧಾಕರ್‌, ತಮ್ಮ ಸ್ವ ಕ್ಷೇತ್ರ ಚಿಂತಾಮಣಿ ತಾಲೂಕು ಒಂದರಲ್ಲಿಯೆ ಬರೋಬ್ಬರಿ 43 ಜನತಾ ದರ್ಶನಗಳನ್ನು ಹಮ್ಮಿಕೊಂಡಿರುವುದಾಗಿ ಅವರೇ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ವಾರಾಂತ್ಯದಲ್ಲಿ ಶನಿವಾರ ಅಥವಾ ಭಾನುವಾರ ಕ್ಷೇತ್ರದ ಜನರ ಸಮಸ್ಯೆಗಳ ಆಹವಾಲು ಆಲಿಸಲು ಮೀಸಲಿಟ್ಟಿರುವ ಡಾ.ಎಂ.ಸಿ.ಸುಧಾಕರ್‌, ಸಚಿವರಾಗಿ ಎಷ್ಟೇ ಕಾರ್ಯದೊತ್ತಡ ಇದ್ದರೂ ಪ್ರತಿ ಶನಿವಾರ, ಭಾನುವಾರ ಚಿಂತಾಮಣಿಗೆ ಆಗಮಿಸಿ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ 43 ಜನತಾ ದರ್ಶನ ನಡೆಸಿ ಹೊಸ ದಾಖಲೆ ಬರೆದಿದ್ದಾರೆ.

ಆದರೆ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಸ್ವ ಕ್ಷೇತ್ರದಲ್ಲಿ ಜನತಾ ದರ್ಶನಕ್ಕೆ ಕೊಟ್ಟಿರುವ ಆದ್ಯತೆ ಬೇರೆ ಕ್ಷೇತ್ರಗಳಲ್ಲಿ ಕೊಟ್ಟಿಲ್ಲ. ಜಿಲ್ಲಾ ಮಟ್ಟದ ಜನತಾ ದರ್ಶನ ಕೂಡ ಸಮರ್ಪಕವಾಗಿ ತಿಂಗಳಗೊಮ್ಮೆ ನಡೆಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿ ಸಮಸ್ಯೆಗಳ ಆಗರ ಇದೆ. ಕಂದಾಯ ಇಲಾಖೆ ಸೇರಿದಂತೆ ಹಲವು ಮಹತ್ವದ ಇಲಾಖೆಗಳು ಇನ್ನಷ್ಟು ಚುರುಕುಗೊಳ್ಳಬೇಕಿದೆ. ಸಾರ್ವಜನಿಕರ ಸಮಸ್ಯೆಗಳು ಸಾಕಷ್ಟು ಇವೆ. ಆದರೆ ಸಚಿವರು ಜಿಲ್ಲಾ ಕೇಂದ್ರದಲ್ಲೂ ಕನಿಷ್ಠ ತಿಂಗಳಗೊಮ್ಮೆ ಜನತಾ ದರ್ಶನ ನಡೆಸಿದರೆ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು ಆನಾವರಣಗೊಳ್ಳುತ್ತೆ ಎಂಬುದು ಜಿಲ್ಲೆಯ ನಾಗರಿಕರ ಒತ್ತಾಸೆ.

Advertisement

ಜಿಲ್ಲಾ ಮಟ್ಟದ ಜನತಾ ದರ್ಶನಕ್ಕೆ ನಿರಾಸಕ್ತಿ!: ಇನ್ನೂ ಜಿಲ್ಲಾ ಮಟ್ಟದಲ್ಲಿ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಪ್ರತಿ ತಿಂಗಳು ನಡೆಯಬೇಕಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನ ಆರಂಭದಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ ಬಳಿಕ ಎರಡು ತಿಂಗಳ ನಂತರ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದ್ದು ಬಿಟ್ಟರೆ ಬೇರೆ ಎಲ್ಲೂ ನಡೆದಿಲ್ಲ. ತಮ್ಮ ಸ್ವ ಕ್ಷೇತ್ರ ಚಿಂತಾಮಣಿ ನಗರದಲ್ಲಿ ವಾರಾಂತ್ಯದಲ್ಲಿ ಜನತಾ ದರ್ಶನ ನಡೆಸುವ ಸಚಿವರಾದ ಡಾ.ಎಂ.ಸಿ.ಸುಧಾಕರ್‌, ಜಿಲ್ಲೆಯ ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟದಲ್ಲಿ ಕೂಡ ಜಿಲ್ಲಾ ಮಟ್ಟದ ಜನತಾ ದರ್ಶನಕ್ಕೂ ಇನ್ನೂ ಕಾಲ ಕೂಡಿ ಬಂದಿಲ್ಲ. ಚೇಳೂರು, ಮಂಚೇನಹಳ್ಳಿ ತಾಲೂಕುಗಳಲ್ಲಿ ಕೂಡ ಸಚಿವರ ಅಧ್ಯಕ್ಷತೆಯಲ್ಲಿ ಒಂದೇ ಒಂದು ಜನತಾ ದರ್ಶನವೂ ಇಲ್ಲಿವರೆಗೂ ಏರ್ಪಡು ಆಗಿಲ್ಲ.

ಜನರ ಸಮಸ್ಯೆಗಳ ಪರಿಹಾರಕ್ಕೆ  ಪ್ರಾಮಾಣಿಕ ಪ್ರಯತ್ನ: ಚಿಂತಾಮಣಿ ನಗರದ ಮಾಳಪಲ್ಲಿಯ ಅಂಜನಿ ನಿವಾಸದಲ್ಲಿ ಪ್ರತೀ ವಾರಾಂತ್ಯ ಸರಿ ಸುಮಾರು 43 ಜನತಾ ದರ್ಶನ ಕಾರ್ಯಕ್ರಮ ನಡೆಸಿ, ಜನಸಾಮಾನ್ಯರ ಸಮಸ್ಯೆಗಳ ಆಲಿಸಿ ಸಮಸ್ಯೆಗಳ ಪರಿಹಾರ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್‌ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next