ರಾಮನಗರ: ಇಲ್ಲಿ ನಡೆಯುತ್ತಿರುವ ಜಿಲ್ಲಾ ಆಸ್ಪತ್ರೆಯ ಪ್ರಮುಖ ಕಾಮಗಾರಿಗಳನ್ನು ಜುಲೈ 31ರೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರ ಸಂಸ್ಥೆಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಗುರುವಾರ ಹೇಳಿದರು.
ಗುರುವಾರ ಇಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾ ಆಸ್ಪತ್ರೆ ಕಟ್ಟಡವನ್ನು ಪರಿಶೀಲನೆ ನಡೆಸಿದ ಅವರು ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ಆಸ್ಪತ್ರೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಆದರೆ, ಯಾವುದೇ ಕೆಲಸ ಬಾಕಿ ಇಲ್ಲದ ರೀತಿಯಲ್ಲಿ ಸುಸಜ್ಜಿತವಾದ ರೀತಿಯಲ್ಲಿ ಕಟ್ಟಡವನ್ನು ಸಜ್ಜುಗೊಳಿಸಲು ಸೆಪ್ಟೆಂಬರ್ 30ರವರೆಗೆ ಸಮಯ ಹಿಡಿಯುತ್ತದೆಂದು ಗುತ್ತಿಗೆದಾರರು ಹೇಳಿದ್ದಾರೆ. ಈ ಮಾತುಕತೆ ವೇಳೆ, ಆಸ್ಪತ್ರೆಯ ಪ್ರಮುಖ ಕೆಲಸಗಳನ್ನು ಜುಲೈ 31ರೊಳಗೆ ಪೂರ್ತಿಗೊಳಿಸಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಮೂಲತಃ ಈ ಆಸ್ಪತ್ರೆ ನಿರ್ಮಾಣಕ್ಕಾಗಿ ರೂ 65 ಕೋಟಿ ಮಂಜೂರಾಗಿತ್ತು. ಆದರೆ, ಆಮೇಲೆ, ಆಸ್ಪತ್ರೆಯ ಸೌಕರ್ಯಗಳನ್ನು ಹೆಚ್ಚಿಸಲಾಗಿ, ನಿರ್ಮಾಣ ಅಂದಾಜು ವೆಚ್ಚ ರೂ 100 ಕೋಟಿಗೆ ಹೆಚ್ಚಾಯಿತು. ಹೀಗಾಗಿ, ಆಸ್ಪತ್ರೆ ನಿರ್ಮಾಣ ಮೊದಲು ಅಂದುಕೊಂಡಿದ್ದಕ್ಕಿಂತ ಸ್ವಲ್ಪ ತಡವಾಯಿತು. ಮುಖ್ಯಮಂತ್ರಿಯವರನ್ನು ಕರೆಸಿ ಆದಷ್ಟು ಶೀಘ್ರವೇ ಇದರ ಉದ್ಘಾಟನೆ ಮಾಡಿಸುವ ಉದ್ದೇಶವಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿ.ವಿ. ಕ್ಯಾಂಪಸ್ ನಿರ್ಮಾಣ ಕೂಡ ತ್ವರಿತವಾಗಿ ನಡೆಯುತ್ತಿದೆ. ಇದನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವುದಾಗಿ ಸ್ವತಃ ಮುಖ್ಯಮಂತ್ರಿಯವರು ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಇಲ್ಲಿಗೆ ಕಾರ್ಯಕ್ರಮಕ್ಕೆ ಬಂದ ಸಂದರ್ಭದಲ್ಲೇ ತಿಳಿಸಿದ್ದಾರೆ. ಇದರ ಜೊತೆಗೆ, ಇಲ್ಲಿಗೆ ವೈದ್ಯಕೀಯ ಕಾಲೇಜು ಕೂಡ ಬರಬೇಕಾಗಿದೆ. ಆ ಬಗ್ಗೆಯೂ ಶೀಘ್ರವೇ ಒತ್ತು ಕೊಡಲಾಗುತ್ತದೆ ಎಂದರು.
ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ಕೊಡುವ ಕೆಲಸ ಆಗಿದೆ. ಆದರೆ ನಿರ್ಮಾಣ ವೆಚ್ಚ ರೂ 50 ಕೋಟಿಗಿಂತ ಜಾಸ್ತಿ ಇರುವುದರಿಂದ ಸರ್ಕಾರ 15 ದಿನಗಳ ಹಿಂದೆ ರಚಿಸಿರುವ ಪರಿಶೀಲನಾ ಸಮಿತಿ ಮುಂದಕ್ಕೆ ಇದು ಹೋಗಿದೆ. ಆ ಸಮಿತಿ ಅನುಮೋದಿಸಿದ ತಕ್ಷಣ ಇದರ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗುತ್ತದೆ ಎಂದು ಹೇಳಿದರು.
ನಮ್ಮ ಸರ್ಕಾರಕ್ಕೆ ಅಸ್ತಿತ್ವಕ್ಕೆ ಬಂದು 3 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭ ಇದಾಗಿದೆ. ಈ ಸಂದರ್ಭದಲ್ಲಿ ಎಲ್ಲಾ ಪ್ರಮುಖ ಕೆಲಸಗಳನ್ನು ಮಾಡಬೇಕೆಂಬುದು ನಮ್ಮ ಸರ್ಕಾರದ ದೃಢ ನಿಶ್ಚಯವಾಗಿದೆ ಎಂದು ಸಚಿವರು ಹೇಳಿದರು.