ಶಿವಮೊಗ್ಗ: ಬಸ್ ಹತ್ತಿಕೊಂಡು ಕೆಲವರು ಹೋಗುತ್ತಿದ್ದಾರೆ. ಅವರು ಬಸ್ ನಲ್ಲಿ ಹಾಗೇ ಹೋಗುತ್ತಾರೆ.150 ಸ್ಥಾನಗಳನ್ನು ಗೆಲ್ಲಬೇಕು.50% ಗೂ ಅಧಿಕ ಮತ ಪಡೆಯಲು ಬಿಜೆಪಿ ಸಂಘಟನೆ ಮಾಡುತ್ತಿದೆ. ಚುನಾವಣೆ ಹಿನ್ನೆಲೆ ಬೇರೆ ಪಕ್ಷಗಳು ಪ್ರಯತ್ನ ಮಾಡುತ್ತಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಹೇಳಿಕೆ ನೀಡಿದ್ದಾರೆ.
ಅಧಿಕಾರಕ್ಕೆ ಬಂದ ಮೇಲೆ ವಿಧಾನಸೌಧ ಶುದ್ಧ ಮಾಡುತ್ತೇವೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದ ರೀತಿ ಆಗಿದೆ. ಭ್ರಷ್ಟಾಚಾರ ಅವರ ಕಣ ಕಣದಲ್ಲೂ ಅಡಗಿ ಕುಳಿತಿದೆ. ಅವರು ಗಂಗಾಜಲ, ಗೋಮೂತ್ರ ಬಳಸಿ ಸ್ನಾನ ಮಾಡಿಕೊಂಡು ಬರಲಿ. ಡಿಕೆಶಿ ತಮ್ಮನ್ನು ತಾವು ದೈಹಿಕವಾಗಿ ಅಲ್ಲ ಮಾನಸಿಕವಾಗಿಯೂ ಶುದ್ಧ ಮಾಡಿಕೊಳ್ಳಲಿ ಎಂದು ಕಿಡಿ ಕಾರಿದರು.
ಭ್ರಷ್ಟಾಚಾರವನ್ನು ಹುಟ್ಟುಹಾಕಿದ ಪಕ್ಷವೇ ಕಾಂಗ್ರೆಸ್. ಮಧ್ಯವರ್ತಿಗಳ ಹಾವಳಿ ಇತ್ತು.ಅವರ ಕಾಲದಲ್ಲಿ 100 ರೂ. ಕೊಟ್ಟರೇ 20 ರೂ. ತಲುಪುತ್ತಾ ಇರಲಿಲ್ಲ.ಆದರೆ ಬಿಜೆಪಿ ಸರ್ಕಾರ ನೂರಕ್ಕೆ ನೂರು ತಲುಪುವಂತೆ ಮಾಡಿದೆ. ಆಡಳಿತ ಸೇರಿದಂತೆ ಪ್ರತಿಯೊಂದು ಹಂತದಲ್ಲಿ ಪಾರದರ್ಶಕತೆ ತರಲಾಗುತ್ತಿದೆ. ಹಸ್ತಕ್ಷೇಪ ಇಲ್ಲದೇ, ಅಧಿಕಾರ ವಿಕೇಂದ್ರೀಕರಣವನ್ನು ಬಿಜೆಪಿ ಮಾಡುತ್ತಿದೆ ಎಂದರು.
ದೇಶದಲ್ಲಿ ಭಯೋತ್ಪಾದಕತೆ, ಭ್ರಷ್ಟಾಚಾರ ಹುಟ್ಟು ಹಾಕಿದ್ದೇ ಕಾಂಗ್ರೆಸ್.ಭಯೋತ್ಪಾದಕರಿಗೆ ಆಶ್ರಯ, ಅಧಿಕಾರ ದುರ್ಬಳಕೆ ಮಾಡಿದೆಲ್ಲವೂ ಕಾಂಗ್ರೆಸ್. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯರಿಗೆ ಮಾತನಾಡುವ ನೈತಿಕತೆ ಇಲ್ಲ. ಸಿದ್ದರಾಮಯ್ಯರಂತ ನಾಯಕರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಸಿಎಂ ಗೆ ನಾಯಿಮರಿ ಅಂತಾ ಸಿಎಂ ಸ್ಥಾನಕ್ಕೂ ಅವಮಾನ ಮಾಡಿದ್ದರು.ಅವರು ಮಾತನಾಡಿದ್ದಕ್ಕೆಲ್ಲಾ ರಾಜ್ಯದ ಜನರು ಉತ್ತರ ಕೊಡ್ತಾರೆ ಎಂದರು.
ಮುಸ್ಲಿಮರನ್ನು ಜೊತೆಗೆ ಕರೆದೊಯ್ಯಲು ಮೋದಿ ಸಲಹೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ತುಷ್ಟಿಕರಣ ಮಾಡಿ, ವಾತಾವರಣ ಹಾಳು ಮಾಡಿದೆ. ನಾವು ಆ ರೀತಿ ತುಷ್ಟಿಕರಣ ರಾಜಾಕರಣ ಮಾಡಲ್ಲ.ಮತಾಂತರ ನಿಷೇಧ ಕಾಯ್ದೆ ಬಂದಾಗ ವಿರೋಧಿಸುವುದು ಬಿಟ್ಟರೇ ಬೇರೆ ಮಾತನಾಡಲಿಲ್ಲ. ಆ ಧೈರ್ಯ ಕೂಡ ಕಾಂಗ್ರೆಸ್ ನಾಯಕರಿಗೆ ಇರಲಿಲ್ಲ.ಗೊಂದಲ ಸೃಷ್ಟಿಸುವ ಕೆಲಸ ಮಾಡಿದರು ಎಂದರು.
ವಂಶಪಾರಂಪರ್ಯ ರಾಜಕೀಯಕ್ಕೆ ಬಿಜೆಪಿ ವಿರುದ್ದವಾಗಿದೆ, ಧ್ಯೇಯೋದ್ಧೇಶ ಇದೆ, ನಮ್ಮ ಗುರಿ ಸ್ಪಷ್ಟವಾಗಿದ್ದು, ಆ ನಿಟ್ಟಿನಲ್ಲಿ ಹೆಜ್ಜೆ ಇಡಲು ತಯಾರಿದ್ದೇವೆ. ಮುಂಬರುವ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಆದ್ಯತೆ ಇಲ್ಲ. ಕ್ಷೇತ್ರದಲ್ಲಿ ಪರಿಸ್ಥಿತಿ ಅನುಗುಣವಾಗಿ ಟಿಕೆಟ್ ನೀಡಲಾಗುತ್ತದೆ. ಗೆಲ್ಲುವ ಅಭ್ಯರ್ಥಿಗಳು ಇಲ್ಲ ಅಂದಾಗ ಆ ಬಗ್ಗೆ ನಿರ್ಧಾರ ಮಾಡಬೇಕಾಗುತ್ತದೆ. ಜಾತಿ ರಾಜಕಾರಣ ದೂರ ಮಾಡುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದರು.