ದೇವನಹಳ್ಳಿ: ಸಚಿವ ಡಿಕೆ ಶಿವಕುಮಾರ್ ಸಾಹಿತಿಗಳು, ಕಲಾವಿದರು, ಕನ್ನಡ ಪರ ಸಂಘ ಸಂಸ್ಥೆಗಳನ್ನು ಕಳ್ಳರು-ಸುಳ್ಳರು ಎಂದಿರುವುದು ಖಂಡನೀಯ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ತಾಲೂಕಿನಲ್ಲಿ ಜಿಲ್ಲೆಯ ಕಲಾವಿದರ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಕಲಾವಿದರನ್ನು ಈ ವಿಷಯವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಕ್ಷಮೆ ಯಾಚಿಸಬೇಕು. ಕಲಾವಿದರು ಸಂಕಷ್ಟದಲಿದ್ದು ಸರ್ಕಾರದಿಂದ ಕೂಡಲೇ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನೆಯಲ್ಲಿ ಕಲಾವಿದರು ಆಗ್ರಹಿಸಿದರು.
ಕಲಾವಿದರ ನಿರ್ಲಕ್ಷ್ಯ: ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ನಾಗರಾಜ್ ಮಾತನಾಡಿ, ಶತಶತಮಾನಗಳಿಂದಲೂ ಕನ್ನಡ ನಾಡಿನ ಭಾಷೆ ಮತ್ತು ಸಂಸ್ಕೃತಿ ಉಳಿದಿರುವುದು. ಲಕ್ಷಾಂತರ ಕಲಾವಿದರು ಮತ್ತು ಸಾವಿರಾರು ಸಂಘ ಸಂಸ್ಥೆಗಳ ಪ್ರಾಮಾಣಿಕ ಪರಿಶ್ರಮದಿಂದ ಹೊರತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸಚಿವರಿಂದಲ್ಲ.
ಸಂಘ ಸಂಸ್ಥೆಗಳಿಗೆ ಅನುದಾನವನ್ನು ನೀಡುತ್ತಿರುವುದು ಪ್ರೋತ್ಸಾಹ ಧನವೇ ಹೊರತು ಅದೇನು ದೊಡ್ಡ ನಿಧಿಯಲ್ಲ. ಇತ್ತೀಚಿನ ದಿನಗಳಲ್ಲಿ ಅನುದಾನ ನೀಡುವ ವಿಷಯದಲ್ಲಿ ಇಲಾಖೆ ನೀತಿ ನಿಯಮಗಳು, ಕಲಾವಿದರ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ನಾಡಿನ ಕಲಾವಿದರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಚೆ„ತನ್ಯ ನೀಡುವ ಬದಲು ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ ಎಂದು ತಮ್ಮ ಬೇಸರ ವ್ಯಕ್ತಪಡಿಸಿದರು.
ನೇರವಾಗಿ ಅನುದಾನ ನೀಡಬೇಕು: ಕಲಾವಿದ ರಾಮಚಂದ್ರ ಮಾತನಾಡಿ, ಸಚಿವರು ಈ ರೀತಿ ತೆಗೆದುಕೊಂಡಿರುವ ನಿರ್ಧಾರ ಸಾಂಸ್ಕೃತಿಕ ಕ್ಷೇತ್ರವನ್ನೇ ಹಾಳುಮಾಡುವಂತಿದೆ. ಇದರಿಂದ ಕ್ರಿಯಾಶೀಲವಾಗಿರುವ ಸಂಸ್ಥೆಗಳು ಕುಗ್ಗುತ್ತವೆ. ಆದ್ದರಿಂದ ಯಾವುದೇ ಕಾರಣಕ್ಕೂ ಸಂಘ ಸಂಸ್ಥೆಗಳಿಗೆ ನೀಡುತ್ತಿರುವ ಅನುದಾನವನ್ನು ನಿಲ್ಲಿಸಬಾರದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ನೇರವಾಗಿ ಅನುದಾನ ನೀಡಬೇಕು.
ಬಡ ಮತ್ತು ಸಾಮಾನ್ಯ ಕಲಾವಿದರಿಗೆ ಆನ್‌ಲೆ„ನ್ ಮತ್ತು ಕಡತ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಅನುದಾನ ಪಡೆಯಲು ಇಲಾಖೆ ನೀಡಿರುವ ಮಾರ್ಗಸೂಚನೆಗಳನ್ನು ಸರಳೀಕರಣಗೊಳಿಸಬೇಕು ಎಂದರು. ಅಪರ ಜಿಲ್ಲಾಧಿಕಾರಿ ರಮ್ಯಾ ಮಾತನಾಡಿ, ಕಲಾವಿದರು ನೀಡಿರುವ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ತಲುಪಿಸಿ ಶೀಘ್ರವಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ದೇವನಹಳ್ಳಿಯ ಸರಸ್ವತಿ ಸಂಗೀತ ವಿದ್ಯಾಲಯ, ಪರಿವರ್ತನಾ ಟ್ರಸ್ಟ್ ಪಾಪನಹಳ್ಳಿ, ಸುಗ್ಗಿ ಸಂಸ್ಥೆ ಗಳ ಕಲಾವಿದರು, ವೀರಗಾಸೆ ಕಲಾವಿದ ನಾಗೇಶ್, ಕೀಲು ಕುದುರೆ ತಂಡದ ರಾಜಶೇಖರ್, ರಾಜೀವ್‌ಗಾಂಧಿ ಕಲಾಸಂಘದ ಕಾರ್ಯದರ್ಶಿ ರಂಗನಾಥ್, ಸ್ಪೂರ್ತಿ ಕಲಾ ಸಂಸ್ಥೆಯ ಶಿವಮ್ಮ, ಕಲಾವಿದ ಕೃಷ್ಣಪ್ಪ ಮತ್ತು ತಾಲೂಕಿನ ಹಲವು ಸಾಂಸ್ಕೃತಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.