Advertisement

ಸಚಿವ ಡಿಕೆಶಿ ಭರವಸೆ ಹುಸಿ

02:00 PM Oct 22, 2018 | Team Udayavani |

ರಾಯಚೂರು: ಕೊನೆ ಭಾಗದ ರೈತರ ಕಣ್ಣೀರ ಕೋಡಿ ಈ ಬಾರಿಯೂ ನಿಲ್ಲುವ ಲಕ್ಷಣಗಳಿಲ್ಲ. ಬೆಳೆ ಒಣಗುತ್ತಿದ್ದು ಕನಿಷ್ಠ 10 ದಿನವಾದರೂ ನೀರು ಕೊಡುವಂತೆ ರೈತರು ಅಂಗಲಾಚಿದರೂ ಜಿಲ್ಲಾಡಳಿತ ಕೈ ಚೆಲ್ಲುತ್ತಿದೆ.

Advertisement

ಕೊನೆ ಭಾಗದ ರೈತರ ಸಮಸ್ಯೆಗೆ ಶೀಘ್ರದಲ್ಲೇ ಶಾಶ್ವತ ಪರಿಹಾರ ಒದಗಿಸುವುದಾಗಿ ತಿಳಿಸಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿ ತಿಂಗಳಾದರೂ ಸಮಸ್ಯೆ ಮಾತ್ರ ಬಗೆ ಹರಿಯಲಿಲ್ಲ. ಬದಲಿಗೆ ಅಂದು ಅವರು ರೈತರಿಗೆ ನೀಡಿದ ಯಾವೊಂದು ಭರವಸೆಯೂ ಈಡೇರದಿರುವುದು ವಿಪರ್ಯಾಸ. ಈ ಬಾರಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರಿಂದ ರೈತರಲ್ಲಿ ಬೆಳೆಗೆ ನೀರು ಸಿಗುವ ವಿಶ್ವಾಸ ಹೆಚ್ಚಾಗಿತ್ತು. ಅದೇ ಉತ್ಸಾಹದಲ್ಲಿ ನಾಟಿ ಮಾಡಿದ ರೈತರು ನೀರು ಬಿಡುವಂತೆ ಅಂಗಲಾಚಿದರೂ ಕೊನೆ ಭಾಗದ ಕಾಲುವೆಗೆ ಮಾತ್ರ ನೀರು ಹರಿಯಲಿಲ್ಲ. 

ಬಿಟ್ಟರೂ ಮೇಲ್ಭಾಗದ ರೈತರ ಹಾವಳಿಗೆ ಸಿಲುಕಿ ಟೇಲೆಂಡ್‌ ರೈತರು ಕೈ ಸುಟ್ಟುಕೊಳ್ಳುವಂತಾಯಿತು. ಈ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡೇ ಸಭೆ ನಡೆಸಿದ್ದ ಜಲಸಂಪನ್ಮೂಲ ಸಚಿವರು, ಸೂಕ್ತ ಪರಿಹಾರ ಕಲ್ಪಿಸುವುದಾಗಿ ತಿಳಿಸಿದ್ದರು.

ಅದರಲ್ಲಿ ಪ್ರಮುಖವಾಗಿ 40 ಇಂಜಿನಿಯರ್‌ಗಳನ್ನು ವಾರದೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಸೂಕ್ತ ಬಂದೋಬಸ್ತ್ ಕಲ್ಪಿಸಿ ಕೊನೆ ಭಾಗಕ್ಕೆ ನೀರು ತಲುಪಿಸಲು ಶ್ರಮಿಸಲಾಗುವುದು ಎಂದಿದ್ದರು. ಆದರೆ, ಅವರ ಯಾವ ಭರವಸೆಯೂ ಇಂದಿಗೂ ಈಡೇರಲಿಲ್ಲ. ಬದಲಿಗೆ ಎಲ್ಲ ಶಾಸಕರು ಲಿಖೀತವಾಗಿ ಬರೆದುಕೊಟ್ಟಲ್ಲಿ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಹೇಳಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದ್ದರು. ಆದರೆ, ನೀರಿನ ಅಕ್ರಮಕ್ಕೆ ಪ್ರಭಾವಿಗಳ ಕುಮ್ಮಕ್ಕಿರುವುದು ಮೇಲ್ನೋಟಕ್ಕೆ ಗೊತ್ತಿದ್ದೂ, ಸಚಿವರು ಈ ರೀತಿ ನೀಡಿದ ಹೇಳಿಕೆ ನೀಡಿದ್ದು, ರೈತರ ನಿರಾಸೆಗೆ ಕಾರಣವಾಯಿತು.

ಮನವಿಗೆ ಸಿಗದ ಸ್ಪಂದನೆ: ಈಚೆಗೆ ಟಿಎಲ್‌ಬಿಸಿ ಕೆಳಭಾಗದ ರೈತರು ಇಬ್ಬರು ಶಾಸಕರ ನೇತೃತ್ವದಲ್ಲಿ ಜಿಲ್ಲಾ ಧಿಕಾರಿಯನ್ನು ಭೇಟಿಯಾಗಿ ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯಿಸಿದರು. ಕನಿಷ್ಠ 10 ದಿನ ಬೆಳೆಗೆ ನೀರು ಹರಿಸಿ, ಬೆಳೆ ಉಳಿಯಲಿದೆ ಎಂದು ಮನವಿ ಮಾಡಿದರು. ಆದರೆ, ಮನವಿ ಆಲಿಸಿದ ಜಿಲ್ಲಾಧಿಕಾರಿ, ಗಣೇಕಲ್‌ ಜಲಾಶಯದಲ್ಲಿ ಈಗ 16 ಅಡಿ ಮಾತ್ರ ಇದೆ. ಅದು ಸಾಲುವುದಿಲ್ಲ. ಅಲ್ಲದೇ, ಮೇಲ್ಭಾಗದ ರೈತರ ಜತೆಗೂ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ಇದರಿಂದ ರೈತರು ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗುವಂತಾಯಿತು.

Advertisement

ನಿರ್ವಹಣೆ ವೈಫಲ್ಯ: ಈಗ ಕಾಲುವೆಗೆ ನೀರು ಹರಿದರೂ ಅದು ಕೊನೆ ಭಾಗ ತಲುಪದಿರವುದಕ್ಕೆ ನಿರ್ವಹಣೆ ವೈಫಲ್ಯವೇ ಕಾರಣ. ಜಿಲ್ಲಾಡಳಿತ 144 ಕಲಂನನ್ವಯ ನಿಷೇಧಾಜ್ಞೆ ಜಾರಿ ಮಾಡಿದ್ದಾಗಿ ಹೇಳುತ್ತಿದೆಯಾದರೂ ಅದರಿಂದ ಪ್ರಯೋಜನವಿಲ್ಲ ಎನ್ನುತ್ತಾರೆ ರೈತರು. ಟಿಎಲ್‌ಬಿಸಿ ವ್ಯಾಪ್ತಿಗೆ
ಒಟ್ಟಾರೆ 6 ಲಕ್ಷಕ್ಕೂ ಅಧಿಕ ಎಕರೆ ಬಿತ್ತನೆ ಪ್ರದೇಶವಿದೆ. ಆದರೆ, ಅದರಲ್ಲಿ ಈಗ ಸಮರ್ಪಕವಾಗಿ ನೀರು ಸಿಗುತ್ತಿರುವುದು ವಡ್ಡರಹಟ್ಟಿ, ಸಿಂಧನೂರು ಭಾಗದ 1.19 ಲಕ್ಷ ಎಕರೆ ಪ್ರದೇಶಕ್ಕೆ ಮಾತ್ರ ಎಂದು ರೈತ ಮುಖಂಡರು ದೂರುತ್ತಾರೆ.

24ನೇ ಮೈಲ್‌ನಿಂದ 46ನೇ ಮೈಲ್‌ನಲ್ಲಿ ನೀರಿನ ದುರ್ಬಳಕೆ ಆಗುತ್ತಿದೆ. ನಿತ್ಯ 1200ರಿಂದ 1500 ಕ್ಯೂಸೆಕ್‌ ನೀರು ದುರ್ಬಳಕೆ ಆಗುತ್ತಿದೆ. ಅದನ್ನು ತಡೆಗಟ್ಟಿದಲ್ಲಿ ಕೆಳಭಾಗಕ್ಕೆ ಸರಾಗವಾಗಿ ನೀರು ಬರಲಿದೆ. ಅದರ ಜತೆಗೆ ಗೇಜ್‌ ನಿರ್ವಹಣೆಗೆ ಅಗತ್ಯ ಸಿಬ್ಬಂದಿಯೇ ಇಲ್ಲ. ಈಗ ರೈತರಿಗೆ ನೀರಿನ ಅಗತ್ಯವಿದೆ. ಬೆಳೆ ಉಳಿದು ರೈತರು ನಷ್ಟದಿಂದ ತಪ್ಪಿಸಿಕೊಳ್ಳಬೇಕಾದರೆ ಕನಿಷ್ಠ ಕೆಲ ದಿನಗಳಾದರೂ ನೀರು ಹರಿಸಬೇಕು. ಜಿಲ್ಲಾಡಳಿತ ಇನ್ನಾದರೂ ಕ್ರಮ ಕೈಗೊಳ್ಳಬೇಕಿ¨  

ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಕಾಟಾಚಾರಕ್ಕೆ ಸಭೆ ನಡೆಸಿದ್ದರು. ಅವರು ಹೇಳಿದಂತೆ ವಾರದೊಳಗೆ 40 ಇಂಜಿನಿಯರ್‌ ಕೆಲಸಕ್ಕೆ ಹಾಜರಾಗಬೇಕಿತ್ತು. ಆದರೆ, ಇರುವ ಒಬ್ಬ ಅಧಿಕಾರಿಯನ್ನೇ ವರ್ಗಾಯಿಸಿದ್ದಾರೆ. 24ರಿಂದ 46ನೇ ಮೈಲ್‌ನಲ್ಲಿ ಆಗುತ್ತಿರುವ ನೀರಿನ ದುರ್ಬಳಕೆ ತಡೆದರೆ ಕೊನೆ ಭಾಗಕ್ಕೆ ನೀರು ಸಿಗಲಿದೆ. ನಿಷೇಧಾಜ್ಞೆ ಬದಲಿಗೆ ಜಿಲ್ಲಾಡಳಿತ ಸಿಆರ್‌ಪಿಎಫ್‌, ಬಿಎಸ್‌ಎಫ್‌ನಂಥ ವಿಶೇಷ ಫೋರ್ಸ್‌ ಬಳಸಿ ನೀರು ಹರಿಸಲಿ. 
ಡಿ.ವೀರನಗೌಡ, ಪ್ರಾಂತ ರೈತ ಸಂಘದ ಮುಖಂಡ.

„ಸಿದ್ದಯ್ಯಸ್ವಾಮಿ ಕುಕನೂರ

Advertisement

Udayavani is now on Telegram. Click here to join our channel and stay updated with the latest news.

Next