ರಾಯಚೂರು: ಬಿಜೆಪಿಯವರಿಗೆ ನೈತಿಕತೆ ಇಲ್ಲ ಎನ್ನುವ ಕಾಂಗ್ರೆಸ್ ನವರದ್ದು ಗರತಿ ರಾಜಕಾರಣವಾ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು ಪಕ್ಷದಲ್ಲಿ ಮಾತ್ರ ಗರತಿಯರು ಇರೋದು. ಸಿಎಂ ಇಬ್ರಾಹಿಂಗಿಂತ ಗರತಿ ಬೇಕಾ? ಡಿಸಿಎಂ ಆಗಿದ್ದಾಗಲೇ ಅದೇ ಪಕ್ಷದ ವಿರುದ್ಧ ಬಂಡಾಯ ಸಾರಿದ್ದು ಗರತಿ ರಾಜಕಾರಣವೇ ಎಂದು ಪರೋಕ್ಷವಾಗಿ ಸಿದ್ದಾರಮಯ್ಯರನ್ನು ವ್ಯಂಗ್ಯವಾಡಿದರು.
ಹಿಂದೆ ಜನತಾದಳದ ಆರು ಜನ ಶಾಸಕರನ್ನು, ಜೆಡಿಎಸ್ ನ ಅನೇಕರನ್ನು ತಮ್ಮ ಪಕ್ಷಕ್ಕೆ ಕರೆಕೊಂಡಿದ್ದು ಯಾವ ಸೀಮೆ ರಾಜಕಾರಣ. ಚಲುವರಾಯ ಸ್ವಾಮಿ, ಮಾಗಡಿ ಬಾಲಕೃಷ್ಣ, ಅಖಂಡ ಶ್ರೀನಿವಾಸ, ಜಮೀರ್ ಅಹ್ಮದ್, ಶ್ರೀನಿವಾಸ ಪ್ರಸಾದ ಯಾವ ಪಕ್ಷದಲ್ಲಿದ್ದರು. ಭೂತದ ಬಾಯಲ್ಲಿ ಭಗವದ್ಗೀತೆ ಅನ್ನೋದು ಕಾಂಗ್ರೆಸ್ ಗೆ ಹೇಳಿದ್ದು ಎಂದು ಟೀಕಿಸಿದರು.
ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಬಂದಾಗ ವೀರಪ್ಪ ಮೊಯ್ಲಿ ಸಿ.ಬೈರೆಗೌಡರ ಆಡಿಯೋ ಕ್ಯಾಸೆಟ್ ಬಿಡುಗಡೆಯಾಗಿತ್ತು. ಕಾಂಗ್ರೆಸ್ ಅವಧಿಯಲ್ಲಿ ಸರ್ಕಾರ ಉರುಳಿಸಲು ಏನೇನು ಮಾಡಿದ್ದರು ಎಂಬ ಸಂಗತಿ ಬಿಚ್ಚಿಡಬೇಕಾದ ಪ್ರಸಂಗ ಬಂದರೆ ಅದನ್ನೂ ಮಾಡುತ್ತೇವೆ ಎಂದರು.
ನಮ್ಮ ಸರ್ಕಾರ ಬೀಳಿಸುವ ಪ್ರಯತ್ನ ನನಸಾಗದು. ಈ ವಿಚಾರದಲ್ಲಿ ದೇವೆಗೌಡರ ಹೇಳಿಕೆ ಸ್ವಾಗತಾರ್ಹ. ದೇವೆಗೌಡರು ಅನುಭವಿ ರಾಜಕಾರಣಿ. ಯಾವ ಹಿನ್ನೆಲೆಯಲ್ಲಿ ಹಾಗೆ ಹೇಳಿದ್ದಾರೋ ಅದನ್ನು ಅನುಮಾನದಿಂದ ನೋಡುವುದಿಲ್ಲ ಎಂದರು.
ಅನರ್ಹರ ಪ್ರಕರಣ ಸುಪ್ರೀಂ ಅಂಗಳದಲ್ಲಿದೆ . ತೀರ್ಪು ಬರುವವರೆಗೆ ಕಾಯಬೇಕು. ನಮ್ಮ ಸರ್ಕಾರ ಸುಭದ್ರವಾಗಿದೆ. ಉಪ ಚುನಾವಣೆ ನಡೆದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೆ. ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಮುಂದುವರಿಯಲಿದೆ. ಪ್ರಧಾನಿ ಮೋದಿ ದೇಶದ ಹಿತಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಬಹುಶ ಈ ಸ್ಥಾನದಲ್ಲಿ ನೆಹರು ಇದ್ದಿದ್ದರೆ ಅಂತಾರಾಷ್ಟ್ರೀಯ ಖ್ಯಾತಿಗಾಗಿ ಆರ್ ಸಿಇಪಿಗೆ ಸಹಿ ಹಾಕುತ್ತಿದ್ದರೇನೋ. ಆದರೆ, ಮೋದಿಯವರಿಗೆ ಖ್ಯಾತಿಗಿಂತ ದೇಶದ ಹಿತ ಮುಖ್ಯ ಎಂದರು.