ಯಾದಗಿರಿ: ಸದಾಶಿವ ಆಯೋಗದ ವರದಿ ವಿರುದ್ಧ ಆಕ್ರೋಶದ ಮಾತುಗಳನ್ನಾಡಿದ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಮಾದಿಗ ದಂಡೋರ ಸಮಿತಿ ಯಾದಗಿರಿ ಜಿಲ್ಲಾ ಘಟಕದಿಂದ ಜಿಲ್ಲಾಧಿ ಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಜಿಲ್ಲಾಧ್ಯಕ್ಷ ರಾಜು ದಾಸನಕೇರಿ ಮಾತನಾಡಿ, ಉಪಜಾತಿಗಳ ಎಳ್ಗೆಗಾಗಿ ನ್ಯಾ| ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೊಂಡರೆ ಸಮಾಜದಲ್ಲಿ ಸಮತೋಲನ ಉಂಟಾಗಲಿದೆ. ಮಾದಿಗ ಮತ್ತು ಮಾದಿಗ ಉಪಜಾತಿಗಳ ಸ್ಥಿತಿಗತಿಗಳ ಅಧ್ಯಯನದ ಆಧಾರದ ಮೇಲೆ ವರದಿ ತಯಾರಿಸಿ ವರದಿ ಜಾರಿ ಮಾಡಬೇಕೆಂದು ಆಗ್ರಹಿಸಿದರು.
ಮಾದಿಗ ಸಮುದಾಯದ ವಿರುದ್ಧ ಮತ್ತು ಸದಾಶಿವ ಆಯೋಗದ ವರದಿ ವಿರುದ್ಧ ಬಂಜಾರ ಸಮುದಾಯವನ್ನು ಎತ್ತಿ ಕಟ್ಟುವ ಕೆಲಸ ಸಚಿವ ಪ್ರಭು ಚವ್ಹಾಣರಿಂದ ನಡೆಯುತ್ತಿದೆ. ಕರ್ನಾಟಕಕ್ಕೆ ವಲಸೆ ಬಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ರಾಜ್ಯದ ಔರಾದ್ ಮೀಸಲಾತಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಲ್ಲದೇ ತಮ್ಮ ಮಕ್ಕಳಿಗೂ ಮಹಾರಾಷ್ಟ್ರದಲ್ಲಿ ಎಸ್‌ಟಿ ಸೌಲಭ್ಯ ಪಡೆಯುತ್ತ ರಾಜ್ಯದ ಮೂಲ ಅಸ್ಪೃಶ್ಯರಿಗೆ ವಂಚನೆ ಮಾಡುತ್ತಿದ್ದಾರೆ. ಪರಿಶಿಷ್ಟರ ಸಬಲೀಕರಣಕ್ಕಾಗಿ ರಚಿತಗೊಂಡ ಸದಾಶಿವ ವರದಿ ಅಂಗೀಕರಿಸಲು ಅಡ್ಡಿಪಡಿಸುತ್ತಿರುವ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ: ಕಟೀಲ್ ವಿಶ್ವಾಸ
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ರಾಯಚೂರಕರ್, ಬಸವರಾಜ ಮೈತ್ರಿ, ಜಗದೀಶ ದಾಸನಕೇರಿ, ಆನಂದ ಗೋಡಿಹಾಳ, ಸಂಗಪ್ಪ ಹಾಲಗೇರಾ, ಮಲ್ಲಿಕಾರ್ಜುನ, ನಾಗರಾಜ ಸುರಪುರ ಇದ್ದರು.