Advertisement

ಸಿದ್ದರಾಮಯ್ಯನವರೇ ನಿಮ್ಮಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ RSS ಗೆ ಇಲ್ಲ: ಸಿ.ಸಿ.ಪಾಟೀಲ

04:51 PM Sep 29, 2021 | Team Udayavani |

ಬೆಂಗಳೂರು:  ಆರೆಸ್ಸೆಸ್ ಮತ್ತು ಬಿಜೆಪಿಯವರನ್ನು ತಾಲಿಬಾನಿಗಳು ಎಂದು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಟೀಕಿಸಿರುವುದು ದುರ್ದೈವದ ವಿಚಾರವಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ ಹೇಳಿದ್ದಾರೆ.

Advertisement

ಈ ಕುರಿತು ಪ್ರತಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ನಮಗೆ ಬಿಜೆಪಿ ಮತ್ತು ಆರೆಸ್ಸೆಸ್ ಎಂದರೆ ತಂದೆ-ತಾಯಿ ಇದ್ದ ಹಾಗೆ. ನಮಗೆ ಜನಪರ ಚಿಂತನೆ,  ಆಡಳಿತದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಬಿಜೆಪಿಯು ಹೇಳಿಕೊಟ್ಟಿದ್ದರೆ, ಆರೆಸ್ಸೆಸ್ ನಮಗೆ ದೇಶಭಕ್ತಿ, ಸಾಮಾಜಿಕ ಸೇವೆಯಂತಹ ಉದಾತ್ತ ಗುಣಗಳನ್ನು ಕಲಿಸಿಕೊಟ್ಟಿದೆ ಎಂದಿದ್ದಾರೆ.

ಒಬ್ಬ ವ್ಯಕ್ತಿಗೆ ಹೇಗೆ ಎರಡು ಕಣ್ಣುಗಳು ಮುಖ್ಯವೋ.. ಹಾಗೆಯೇ ನಮಗೆ ಬಿಜೆಪಿ ಮತ್ತು ಆರೆಸ್ಸೆಸ್ ಎರಡು ಕಣ್ಣುಗಳು ಇದ್ದ ಹಾಗೆ. ಆದ್ದರಿಂದ ನಮ್ಮ ತಂದೆ-ತಾಯಿಗಳಿಗೆ ಈ ರೀತಿ ಅವಹೇಳನ ಮಾಡುವವರ ಮುಂದೆ ನಾವು ಸುಮ್ಮನೆ ಕೈಕಟ್ಟಿಕೊಂಡು ಕುಳಿತುಕೊಳ್ಳಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: 2020 ಮತ್ತು 2021 ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ

ನಮ್ಮಲ್ಲೂ ಸಿದ್ದರಾಮಯ್ಯನವರ ಬಗ್ಗೆ ಅಥವಾ ಸಿದ್ದರಾಮಯ್ಯನವರ ಪಕ್ಷದವರ ಬಗ್ಗೆ ಇನ್ನಷ್ಟು ಕಟು ಶಬ್ದದಲ್ಲಿ ಮಾತನಾಡಲು ಪದ ಕೋಶಗಳು ಬೇಕಾದಷ್ಟಿವೆ . ಆದರೆ ಅವರಂತೆ ಕೀಳುಮಟ್ಟದಲ್ಲಿ ಮಾತನಾಡಲು ನಿಜಕ್ಕೂ ನಮ್ಮ ಸಂಸ್ಕಾರ ಒಪ್ಪುತ್ತಿಲ್ಲ. ಏಕೆಂದರೆ ನಮಗೆ ಉದಾತ್ತ ಸಂಸ್ಕಾರವನ್ನು ಕಲಿಸಿದ್ದೇ ಆರೆಸ್ಸೆಸ್ ಎಂದು ಹೇಳಿದ್ದಾರೆ.

Advertisement

ಬಿಜೆಪಿಯವರನ್ನು ತಾಲಿಬಾನಿಗೆ ಹೋಲಿಸಿದ ಸಿದ್ದರಾಮಯ್ಯನವರ ಧಾಟಿಯಲ್ಲೇ ಉತ್ತರ ಕೊಡಬೇಕೆಂದರೆ, ಕಾಂಗ್ರೆಸ್ಸನ್ನು ಭಯೋತ್ಪಾದಕರ ಪಕ್ಷ ಎಂದು ಕೂಡ  ಟೀಕಿಸಬಹುದು. ಆದರೆ ನಾನು ಹಾಗೆ ಹೇಳುವುದಿಲ್ಲ. ಏಕೆಂದರೆ ಕಾಂಗ್ರೆಸ್ ಒಂದು ರಾಜಕೀಯ ಪಕ್ಷ. ಈಗ ಅದರ ಅಸ್ತಿತ್ವ ಕೇವಲ ಕೆಲವೇ ರಾಜ್ಯಗಳಲ್ಲಿ ಇದ್ದರೂ, ಹಿಂದೆ ಅದು ರಾಷ್ಟ್ರೀಯ ಪಕ್ಷವಾಗಿತ್ತು. ಆದ್ದರಿಂದ ಸಿದ್ದರಾಮಯ್ಯನವರ ಮಟ್ಟದ ಭಾಷೆಯನ್ನು ನನಗೆ ಕಾಂಗ್ರೆಸ್ಸಿಗೆ ಬಳಸಲು ಮನಸ್ಸು ಒಪ್ಪುತ್ತಿಲ್ಲ.

ಕರಾಳವಾದ  ತುರ್ತುಪರಿಸ್ಥಿತಿಯನ್ನು ಹೇರುವ ಮೂಲಕ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕಗ್ಗೊಲೆ ಮಾಡಿ ಕಾನೂನುಬಾಹಿರವಾಗಿ ಅವಧಿ ಮುಗಿದ ನಂತರವೂ ಅಧಿಕಾರ ಚಲಾಯಿಸಿದ್ದು ಇದೇ ಸಿದ್ದರಾಮಯ್ಯನವರ ಕಾಂಗ್ರೆಸ್ಸು ಎನ್ನುವುದು ಸಿದ್ದರಾಮಯ್ಯನವರಿಗೆ ನೆನಪಿರಲಿ ಎಂದು ಕಟುವಾಗಿ ಹೇಳಿದ್ದಾರೆ.

ಬ್ರಿಟಿಷರ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ ತಂದುಕೊಟ್ಟವರು ಬಿಜೆಪಿಯವರಾ ಅಥವಾ ಆರೆಸ್ಸೆಸ್ಸಿನವರಾ ಎಂದು ತಾವು  ಕೇಳುತ್ತೀರಲ್ಲ ಸ್ವಾಮಿ… ಹಾಗಿದ್ದರೆ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದು ಇದೇ ಸಿದ್ದರಾಮಯ್ಯನವರಾ ಅಥವಾ ಸಿದ್ದರಾಮಯ್ಯನವರ ಕುಟುಂಬದವರಾ ಎಂದು ನಾವೂ ಕೇಳಬೇಕಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ

ನಿಮ್ಮಂತೆ ಆರೆಸ್ಸೆಸ್ಸಿಗೆ ಚುನಾವಣಾ ರಾಜಕಾರಣವೇ ಬಂಡವಾಳವಲ್ಲ. ದೇಶಭಕ್ತಿ, ಸಮಾಜಸೇವೆ, ಭಾರತೀಯ ಸಂಸ್ಕೃತಿಯ ರಕ್ಷಣೆಯಂತಹ  ಧ್ಯೇಯಗಳನ್ನು ಇಟ್ಟುಕೊಂಡು ಆರೆಸ್ಸೆಸ್ ಬೆಳೆದಿದೆ. ನೀವು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರಿಹೋಗಿ ಅಧಿಕಾರ ಹಿಡಿದವರು. ನೀವು  ಚುನಾವಣೆಯಲ್ಲಿ ಸೋತಾಗಲೂ ಅಷ್ಟೇ. ನಿಮ್ಮ ಕ್ಷೇತ್ರವನ್ನು ಬಿಟ್ಟು ಮತ್ತೊಂದು ಕ್ಷೇತ್ರಕ್ಕೆ ಹೋಗಿ ಆಶ್ರಯ ಪಡೆದವರು. ನಿಮ್ಮಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಆರೆಸ್ಸೆಸ್ ಗೆ ಇಲ್ಲ ಎಂದು ಹೇಳಿದ್ದಾರೆ.

ಈ ದೇಶದಲ್ಲಿ ಕಳೆದ ಒಂದು ಶತಮಾನದಲ್ಲಿ ನಡೆದ ಎಲ್ಲಾ  ನಿಸರ್ಗ ಪ್ರಕೋಪಗಳಲ್ಲಿ, ಭೂಕಂಪ, ಪ್ರವಾಹ, ಚಂಡಮಾರುತ ಮತ್ತಿತರ ರಾಷ್ಟ್ರೀಯ ವಿಪತ್ತುಗಳಲ್ಲಿ ಮೊದಲು ಸೇವೆಯ ಹಸ್ತ ಚಾಚುವ ಪರಿಪಾಠ ಬೆಳೆಸಿಕೊಂಡಿರುವುದು  ಆರೆಸ್ಸೆಸ್ ನವರೇ ಹೊರತು ಕಾಂಗ್ರೆಸ್ಸಿನವರಲ್ಲ ಎಂದು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next