ಗುಂಡ್ಲುಪೇಟೆ: ತಾಲೂಕಿನ ಪುರಾಣ ಪ್ರಸಿದ್ಧ ಹಿಮವದ್ ಗೋಪಾಲ ಸ್ವಾಮಿ ಬೆಟ್ಟಕ್ಕೆ ಅರಣ್ಯ ಸಚಿವ ಸಿ.ಸಿ.ಪಾಟೀಲ್ ಭೇಟಿ ನೀಡಿ, ವೇಣುಗೋಪಾಲನ ಸ್ವಾಮಿ ದರ್ಶನ ಪಡೆದರು. ಬೆಟ್ಟಕ್ಕೆ ಆಗಮಿಸಿದ ಸಚಿವರನ್ನು ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ ಪೂರ್ಣಕುಂಭಗಳೊಂದಿಗೆ ಸ್ವಾಗತಿಸಿ, ದೇವಾಲಯಕ್ಕೆ ಕರೆತಂದು, ವೇಣುಗೋಪಾಲ ಸ್ವಾಮಿಯ ದರ್ಶನ ಮಾಡಿಸಿ ನಂತರ ವಿಶೇಷ ಪೂಜೆ ಮಾಡಿಕೊಟ್ಟರು.
ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ: ನಂತರ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಫೈರ್‌ಲೈನ್ (ಬೆಂಕಿ ರೇಖೆ) ನಿರ್ಮಾಣ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಕಳೆದ ಫೆಬ್ರವರಿಯಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ಅವಘಡ ಸಂಭವಿಸಿ ಸಹಸ್ರಾರು ಎಕರೆಯಷ್ಟು ಅರಣ್ಯ ಬೆಂಕಿಗೆ ಆಹುತಿಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬೀಳದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಬೆಂಕಿ ರೇಖೆ ನಿರ್ಮಾಣ ಸೇರಿದಂತೆ ಬೆಂಕಿಯ ಅವಘಡದಿಂದ ಕಾಡನ್ನು ರಕ್ಷಿಸಲು ತೆಗೆದು ಕೊಂಡಿರುವ ಕ್ರಮ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಯಾವುದೇ ಕಾರಣಕ್ಕೂ ಬಂಡೀಪುರಕ್ಕೆ ಬೆಂಕಿ ಬೀಳದಂತೆ ಎಚ್ಚರಿಕೆವಹಿಸಬೇಕು ಎಂದು ಸೂಚಿಸಿದರು.
ರೈಲ್ವೇ ಕಂಬಿ ಅಳವಡಿಸಲು ಮನವಿ: ಹಂಗಳ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆಸಲ್ಲಿಸಿದ ಸಚಿವರು, ಗ್ರಾಮಸ್ಥರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆನೆಗಳ ಹಾವಳಿ ಹೆಚ್ಚಾಗುವುದರಿಂದ ರೈಲ್ವೇ ಕಂಬಿಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಸಚಿವರಲ್ಲಿ ಮನವಿ ಮಾಡಿದರು. ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು.
ಈ ವೇಳೆ ತಹಶೀಲ್ದಾರ್ ನಂಜುಂಡಯ್ಯ, ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಟಿ.ಬಾಲಚಂದ್ರ, ಎಸಿಎಫ್ ಎಂ.ಎಸ್.ರವಿಕುಮಾರ್, ಗೋಪಾಲಸ್ವಾಮಿ ಬೆಟ್ಟ ವಲಯಾರಣ್ಯಾಧಿಕಾರಿ ಎನ್.ಪಿ.ನವೀನ್ ಕುಮಾರ್, ಬಿಜೆಪಿ ಮುಖಂಡರಾದ ಹಂಗಳ ಪ್ರಣಯ್, ರಾಜಪ್ಪ ಸೇರಿದಂತೆ ಅನೇಕರು ಹಾಜರಿದ್ದರು.