ಬೆಂಗಳೂರು: ರಾಜ್ಯದ್ಲಲಿ ಪೊಲೀಸರ ಕಾರ್ಯವೈಖರಿ ವಿರುದ್ಧ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಸಿಎಎ ವಿರುದ್ಧದ ಹೋರಾಟಗಳು ಹಾಗೂ ರಾಜ್ಯ ಕಾನೂನು ಸುವ್ಯವಸ್ಥೆ ಕುರಿತು ಭಾನುವಾರ ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
ಸ್ವಾತಂತ್ರ್ಯ ಉದ್ಯಾನದಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಯಾರೆಲ್ಲ ಭಾಗವಹಿಸುತ್ತಿದ್ದರು ಎಂಬುದರ ಬಗ್ಗೆ ತಮಗೆ ಮಾಹಿತಿ ಇರಲಿಲ್ಲವೆ? ಅಮೂಲ್ಯಳನ್ನು ಆಯೋಜಕರು ಆಹ್ವಾನಿಸಿದ್ದರೆ? ಅವರಿಗೆ ವಿಐಪಿ ಬ್ಯಾಡ್ಜ್ ಹೇಗೆ ಬಂತು? ವೇದಿಕೆ ಏರಿ ಮಾತನಾಡಲು ಮೈಕ್ ಕೊಟ್ಟವರು ಯಾರು? ಎಂಬೆಲ್ಲ ಮಾಹಿತಿ ಸಿಕ್ಕಿದೆಯೇ ಎಂದು ಅಧಿಕಾರಿಗಳನ್ನು ಸಚಿವರು ಪ್ರಶ್ನಿಸಿದ್ದಾರೆ.
ಹೋರಾಟದ ಸಮಾವೇಶಕ್ಕೆ ಅಮೂಲ್ಯ ಬರುತ್ತಿದ್ದಾಳೆಂಬ ಮಾಹಿತಿ ಪೊಲೀಸ್ ಅಧಿಕಾರಿಗಳಿಗೆ ಇರಲಿಲ್ಲವೇ? ಗುಪ್ತಚರ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದರೇ? ಆಕೆಯ ಪೂರ್ವಪರದ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಮಾಹಿತಿ ಲಭ್ಯವಿದೆಯೇ? ಇಲ್ಲವೇ? ಈ ಹಿಂದೆಯೂ ಆಕೆ ಕೆಲವೊಂದೆಡೆ ಪ್ರಚೋದನಾಕಾರಿ ಭಾಷಣ ಮಾಡಿದ್ದಾಳೆ ಎಂಬ ಮಾಹಿತಿ ಇದೆ. ಈ ಬಗ್ಗೆ ಗುಪ್ತಚರ ಇಲಾಖೆ ಬಳಿ ಯಾವ ಮಾಹಿತಿ ಇದೆ?.
ಮುಂದೆ ನಡೆಯುವ ಪ್ರತಿಭಟನೆ ಸಂದರ್ಭದಲ್ಲಿ ಗುಪ್ತಚರ ವಿಭಾಗದವರು ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಬೇಕು. ಪದೇ ಪದೆ ದೇಶದ ವಿರುದ್ಧ ಘೋಷಣೆ ಕೂಗುವವರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಬೇಕು. ಅದರ ಹಿಂದಿನ ಶಕ್ತಿಗಳು ಯಾರು? ಆಕೆ ವೇದಿಕೆ ಏರುತ್ತಿದ್ದಂತೆ ಪೊಲೀಸರು ಯಾಕೆ ತಡೆಯಲಿಲ್ಲ ಎಂಬೆಲ್ಲ ಪ್ರಶ್ನೆಗಳನ್ನು ಕೇಳುವ ಮೂಲಕ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಸೇರಿದಂತೆ ಅಧಿಕಾರಿಗಳಿಗೆ ಜೋರಾಗಿಯೇ ಬಿಸಿ ಮುಟ್ಟಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಗುಪ್ತಚರ ವಿಭಾಗದ ಮುಖ್ಯಸ್ಥ ಕಮಲ್ ಪಂಥ್, ಎಡಿಜಿಪಿ ಪ್ರತಾಪ್ ರೆಡ್ಡಿ, ಡಿಐಜಿ ಸುಬ್ರಹ್ಮಣೇಶ್ವರರಾವ್, ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಸೇರಿ ಕೆಲ ಅಧಿಕಾರಿಗಳು ಇದ್ದರು.