ಕಲಬುರಗಿ: ಎಂಆರ್ ಪಿಗಿಂತ ಹೆಚ್ವಿಗೆ ದರದಲ್ಲಿ ರಸಗೊಬ್ಬರ ಮಾರಾಟವಾಗದಂತೆ ನೋಡಿಕೊಳ್ಳಿ ಎಂದು ಕೇಂದ್ರದ ಇಂಧನ ಮೂಲ ಹಾಗೂ ರಾಸಾಯನ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ ಸಮಿತಿ (ದಿಶಾ) ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಮಾರುಕಟ್ಟೆಯಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿರುವ ದೂರುಗಳು ಬಂದಿವೆ. ಆದ್ದರಿಂದ ತಂಡವನ್ನು ರೂಪಿಸಿ ನಿಗಾ ವಹಿಸಬೇಕು. ಬಹು ಮುಖ್ಯವಾಗಿ ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಬೇಕು. ರಸಗೊಬ್ಬರ ದಾಸ್ತಾನಿದೆ. ಹೀಗಾಗಿ ಸುಗಮವಾಗಿ ಸರಬರಾಜುವಾಗುವಂತೆ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ಸಲ್ಲದು ಎಂದು ಕೇಂದ್ರದ ಸಚಿವ ಖೂಬಾ ಹಾಗೂ ಸಂಸದ ಡಾ. ಉಮೇಶ ಜಾಧವ್ ಎಚ್ಚರಿಕೆ ನೀಡಿದರು.
ಪಿಎಂ ಕಿಸಾನ ಫಲಾನಿಭವಿಗಳ ಪಟ್ಟಿ ಸಲ್ಲಿಸಿ: ಕೇಂದ್ರದ ಯೋಜನೆಗಳ ಪ್ರತಿಯೊಂದರ ಕುರಿತಾಗಿ ವರದಿ ತಮಗೆ ಸಲ್ಲಿಸಿ. ಅದರಲ್ಲೂ ಪ್ರಮುಖವಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ತಾಲೂಕಾವಾರು ಸಮಗ್ರ ವಿವರಣೆಯೊಂದಿಗೆ ಸಲ್ಲಿಸುವಂತೆ ಸೂಚಿಸಿದರು.
ವರ್ತುಲ ರಸ್ತೆ ಅತಿಕ್ರಮಣ ತೆರವುಗೊಳಿಸಿ: ಕಲಬುರಗಿ ಮಹಾನಗರದ ವರ್ತುಲ ರಸ್ತೆ ಅತಿಕ್ರಮಣ ತೆರವುಗೊಳಿಸಬೇಕು. ಕಳೆದ ಸಭೆಯಲ್ಲೇ ಸೂಚಿಸಲಾಗಿತ್ತು. ಇನ್ನೂ ಯಾಕೆ ಆಗಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ಪ್ರಶ್ನಿಸಲಾಯಿತು. ಅಧಿಕಾರಿಗಳು ಸಬೂಬು ಹೇಳಿದರು. ಇದಕ್ಕೆ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಕಳೆದ ಸಲವೂ ಹೀಗೆ ಹೇಳಿದ್ದೀರಿ, ಕೆಲಸ ಮಾಡುವ ಲಕ್ಷಣಗಳು ಕಂಡು ಬರುತ್ತಿಲ್ಲ ಎಂದರು. ಕೊನೆಗೆ ಕೇಂದ್ರ ಸಚಿವರು, ಎರಡು ದಿನದೊಳಗೆ ಡಿಸಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕಾರ್ಯಾಚರಣೆ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಶಾಸಕರಾದ ಬಸವರಾಜ ಮತ್ತಿಮಡು, ಸುನೀಲ್ ವಲ್ಲಾಪುರೆ, ಶಶೀಲ್ ನಮೋಶಿ, ಜಿಲ್ಲಾಧಿಕಾರಿ ಯಶವಂತ ಗುರುಕರ್, ಜಿಲ್ಲಾ ಪಂಚಾಯತ ಸಿಇಓ ಡಾ. ಗಿರೀಶ ಡಿ ಬದೋಲೆ, ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ದೇವಿದಾಸ ಸೇರಿದಂತೆ ಮುಂತಾದವರಿದ್ದರು.