Advertisement

ಜಿಕೆವಿಕೆ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕೃಷಿ ಸಚಿವ ಬಿ.ಸಿ‌.ಪಾಟೀಲ್

10:58 AM May 11, 2021 | Team Udayavani |

ಬೆಂಗಳೂರು  : ಕೃಷಿ ಸಚಿವ ಬಿ.ಸಿ.ಪಾಟೀಲರಿಂದು ಬೆಂಗಳೂರು ಜಿಕೆವಿಕೆಗೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿನಿ ನಿಲಯದಲ್ಲಿನ ಕೋವಿಡ್ ಆರೈಕೆ ಕೇಂದ್ರವನ್ನು ಪರಿಶೀಲನೆ ನಡೆಸಿದರು. ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಪಸರಿಸುತ್ತಿದ್ದು, ಇದನ್ನು ನಿಯಂತ್ರಿಸಲು ಸರ್ಕಾರ ತನ್ನೆಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ. ಬಿಬಿಎಂಪಿಯ ಕೋರಿಕೆ ಮೇರೆಗೆ ಯಲಹಂಕ ವಲಯದಿಂದ ಕೋವಿಡ್ -19 ಆರೈಕೆ ಕೇಂದ್ರವನ್ನು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನಿಲಯದ ಕಟ್ಟಡದಲ್ಲಿ ಸ್ಥಾಪಿಸಲಾಗಿದ್ದು, ಕಟ್ಟಡವನ್ನು ಕೃಷಿ ಸಚಿವರ ಸೂಚನೆ ಮೇರೆಗೆ ಪಾಲಿಕೆಯ ಯಲಹಂಕ ವಲಯಕ್ಕೆ ಹಸ್ತಾಂತರಿಸಲಾಗಿದೆ ಎಂದರು.

Advertisement

380 ಹಾಸಿಗೆ ಸಾಮರ್ಥ್ಯವುಳ್ಳ ಕೋವಿಡ್ ಆರೈಕೆ ಕೇಂದ್ರ ಇದಾಗಿದ್ದು, ಇನ್ನು 30 ಹಾಸಿಗೆ ಸಾಮರ್ಥ್ಯವುಳ್ಳ “ಇಂಟರ್‌ ನ್ಯಾಷನಲ್ ಸ್ಟಾಫ್ ಕ್ವಾರ್ಟ್ರ್ಸಸ್‌” ಅನ್ನು ವೈದ್ಯಕೀಯ ಸಿಬ್ಬಂದಿಗಳಿಗಾಗಿ ಮೀಸಲಿಡಲಾಗಿದೆ. ಕಳೆದ ಬಾರಿಯೂ ಸಹ ಬೆಂಗಳೂರು ಜಿಕೆವಿಕೆಯಲ್ಲಿ ಕೋವಿಡ್ ಆರೈಕೆಗಾಗಿ ವಿದ್ಯಾರ್ಥಿನಿ ನಿಲಯವನ್ನು ನೀಡಲಾಗಿತ್ತು.

ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿದ ಬಿ.ಸಿ.ಪಾಟೀಲ್,ಅಲ್ಲಿನ ಸೌಲಭ್ಯಗಳು ಹಾಗೂ ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆ‌ ಪರಿಶೀಲಿಸಿದರು.ಕೋವಿಡ್ ಅನ್ನು ನಿಯಂತ್ರಿಸಲು ಸಾಮಾಜಿಕ ಕಳಕಳಿಯ ಜೊತೆಗೆ ವೈಯಕ್ತಿಕ ಸ್ವಚ್ಛತೆ ಸಾಮಾಜಿಕ ಅಂತರ ಹಾಗೂ ಜಾಗೃತಿ ಮುಖ್ಯವಾಗಿದ್ದು,ಕೋವಿಡ್ ಬಂದಾಕ್ಷಣ ಆತಂಕಕ್ಕೆ ಒಳಗಾಗದೇ ಮನೋಸ್ಥೈರ್ಯ ತಂದುಕೊಳ್ಳಬೇಕು.

ಇತ್ತೀಚಿಗೆ ಆತಂಕದಿಂದಲೇ ಹೆಚ್ಚಿನ ಅನಾಹುತಗಳು ಸಂಭವಿಸುತ್ತಿವೆ.ಹೀಗಾಗಿ ಯಾರೂ ಆತಂಕಪಡಬಾರದು.ತಮ್ಮತಮ್ಮ ವ್ಯಾಪ್ತಿಯಲ್ಲಿನ ವಾರ್ ರೂಮ್ ಕಾಲ್ ಸೆಂಟರ್ ಅನ್ನು ಸಂಪರ್ಕಿಸಿ ಮಾಹಿತಿ ಪಡೆದು ಸರ್ಕಾರದ ಸೂಚನೆಯನುಸಾರ ಪಾಲಿಸಿ‌‌ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪರಿಶೀಲನೆ ವೇಳೆ ಬೆಂಗಳೂರು ಜಿಕೆವಿಕೆ ಉಪಕುಲಪತಿ ರಾಜೇಂದ್ರಪ್ರಸಾದ್, ಬಿಬಿಎಂಪಿ ಜಂಟಿ ಆಯುಕ್ತ ಡಾ.ಅಶೋಕ್,ಜಿಕೆವಿಕೆ ಆಡಳಿತ ಮಂಡಳಿ ಸದಸ್ಯರಾದ ದಯಾನಂದ್, ಸುರೇಶ್, ರಾಮಾಂಜನೇಯಗೌಡ,ಶ್ರೀರಾಮ್ ಸೇರಿದಂತೆ ಮತ್ತಿತ್ತರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next