ರಾಯಚೂರು: ಸರ್ಕಾರದ ವಿರುದ್ಧದ ಕಮಿಷನ್ ದಂಧೆ ಆರೋಪ ಮಾಡುವವರು ಮೊದಲು ದಾಖಲೆ ಒದಗಿಸಲಿ. ಕಾಂಗ್ರೆಸ್ ನವರು ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರ ಜತೆ ಮಾತನಾಡಿದ ಅವರು, ರಾಜ್ಯದ ಎಲ್ಲ ಶಾಸಕರು ಕಮೀಷನ್ ಪಡೆದಿದ್ದೇ ಆದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ ಕೂಡ ಸೇರಿದ್ದಾರೆ ಎಂದರ್ಥ ಎಂದರು.
ಸೂಕ್ತ ದಾಖಲೆ ನೀಡಿದರೆ ಅರ್ಕಾವತಿ ಮರುತನಿಖೆ ನಡೆಸಲಾಗುವುದು. ಹಿಂದಿನ ಸರ್ಕಾರದ ಪ್ರಕರಣದ ತನಿಖೆ ಬಗ್ಗೆ ಸಂಪುಟದಲ್ಲಿ ಚರ್ಚೆಯಾಗಿಲ್ಲ. ಐದು ಸಚಿವ ಸೀಟು ಖಾಲಿ ಇದೆ ಸಂಪುಟ ವಿಸ್ತರಣೆ ಮಾಡಬಹುದು ಎಂದು ತಿಳಿಸಿದರು. ಭದ್ರಾವತಿಯಲ್ಲಿ ಕೋಮು ಗಲಭೆಗೆ ಈಶ್ವರಪ್ಪ ಕಾರಣ ಎಂಬುದು ಶುದ್ಧ ಸುಳ್ಳು ಎಂದರು.
ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ಅಲ್ಲ . ಅದು ಕಂದಾಯ ಇಲಾಖೆ ಸ್ಥಳ. ಈಗಾಗಲೇ ಸ್ವಾತಂತ್ರ್ಯ ದಿನಾಚರಣೆ ಅಲ್ಲಿ ಮಾಡಲಾಗಿದೆ. ಹೈಕೋರ್ಟ್ ನೀಡಿದ ಸೂಚನೆ ಮೇಲೆ ಸರ್ಕಾರ ತಿರ್ಮಾನ ಮಾಡಲಿದೆ ಎಂದರು.
ರಾಜ್ಯವೂ ಸೇರಿದಂತೆ ಜಿಲ್ಲೆಯಲ್ಲಿ ಬೆಳೆ ಹಾನಿಯಾಗಿದ್ದು, ಜಂಟಿ ಸಮೀಕ್ಷೆಗೆ ಸೂಚಿಸಲಾಗಿದೆ. ಸಮೀಕ್ಷೆ ನಂತರ ಪರಿಹಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಿರಿಧಾನ್ಯ ಬೆಳೆಯನ್ನು ಉತ್ತೇಜಿಸಲು ರೈತಸಿರಿ ಯೋಜನೆ ಜಾರಿಗೊಳಿಸಲಾಗಿದೆ . ಮುಂದಿನ ತಿಂಗಳ ಬೆಂಗಳೂರುನಲ್ಲಿ ಮೇಳವನ್ನು ಆಯೋಜಿಸಲಾಗಿದೆ ಎಂದರು .