ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಮಂದಗತಿ ಬಗ್ಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.
ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಬುಧವಾರ ಬೆಳಿಗ್ಗೆ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ತೋಳನಕೆರೆ, ಬೆಂಗೇರಿ, ಗಣೇಶಪೇಟೆ ಮೀನು ಮಾರುಕಟ್ಟೆ, ಮಂಟೂರು ರಸ್ತೆ, ಜನತಾ ಬಜಾರ್, ಮಹಾತ್ಮಗಾಂಧಿ ಉದ್ಯಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದರು. ಮೊದಲು ತೋಳನಕೆರೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ಬಂದಿದ್ದ ಸಂದರ್ಭದಲ್ಲಿ ಇದೇ ಸ್ಥಿತಿ ಇತ್ತು. ಯಾವ ಬದಲಾವಣೆ ಕಾಣುತ್ತಿಲ್ಲ. ಕೆರೆಯ ಸುತ್ತಲೂ ಬೆಳೆದಿರುವ ಕಳೆ ತೆಗಿಸಬೇಕು. ಚರಂಡಿ ಕೆಲಸ ಕೂಡಲೇ ಮುಗಿಸಿ ಪೇವರ್ ಹಾಕಿಸುವ ಕೆಲಸ ಆಗಬೇಕು. ಮಾನಸಗಿರಿ ಕಾಲೋನಿಗೆ ಸಂಪರ್ಕಿಸುವ ರಸ್ತೆ ಅವ್ಯವಸ್ಥೆ ಕುರಿತು ಕೂಡಲೇ ಇದನ್ನು ಸರಿ ಮಾಡಿ ಫೋಟೋ ಕಳುಹಿಸಬೇಕು ಎಂದು ತಾಕೀತು ಮಾಡಿದರು. ಗಣೇಶ ಪೇಟೆ ಮೀನು ಮಾರುಕಟ್ಟೆಯ ನಿರ್ಮಾಣ ವಿಳಂಬದ ಕುರಿತು ಸೈಟ್ ಇಂಜಿನಿಯರ್‌ನ್ನು ತರಾಟೆಗೆ ತೆಗೆದುಕೊಂಡರು. ಹಗಲು, ರಾತ್ರಿ ಕಾಮಗಾರಿ ನಡೆಸಬೇಕು. ಸಮರ್ಪಕ ಕಾರ್ಮಿಕರನ್ನು ಬಳಸಿಕೊಂಡು ಸೆಪ್ಟೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು. ನಿಗದಿತ ಸಮಯದೊಳಗೆ ಮುಗಿಯದಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮಹಾತ್ಮಗಾಂಧಿ ಉದ್ಯಾನದಲ್ಲಿನ ಕಾಮಗಾರಿ ಪೂರ್ಣಗೊಳಿಸಲು ಒಂದು ತಿಂಗಳು ಗಡುವು ನೀಡಿದರು. ವಾಯು ವಿಹಾರಕ್ಕೆ ಆಗಮಿಸಿದ ಜನರನ್ನು ಕಾಮಗಾರಿ ಕುರಿತು ಪ್ರಶ್ನಿಸಿದರು. ಕೆಲಸಗಳು ಉತ್ತಮವಾಗಿ ನಡೆಯುತ್ತಿವೆ. ಆದರೆ ಸಕಾಲದಲ್ಲಿ ಪೂರ್ಣಗೊಳ್ಳುತ್ತಿಲ್ಲ ಎಂದು ದೂರಿದರು. ಕೋವಿಡ್, ಮಳೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಸಮಯದ ಗಡುವು ನೀಡಲಾಗಿದೆ. ಆದಷ್ಟು ಬೇಗ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.
ನಿರ್ಮಾಣಕ್ಕೆ ನೀಡದ ಒತ್ತು ನಿರ್ವಹಣೆಗೆ ನೀಡಿದರೆ ಒಂದಿಷ್ಟು ವರ್ಷ ಮಾಡಿದ ಕೆಲಸ ಉಳಿಯಲಿದೆ ಎಂದು ಸಾರ್ವಜನಿಕರು ಮನವಿ ಮಾಡಿದರು. ಮಂಟೂರು ರಸ್ತೆಯಲ್ಲಿ ಪಾಲಿಕೆಯಿಂದ ನಿರ್ಮಿಸಿರುವ ಕಾಂಕ್ರೀಟ್ ರಸ್ತೆ ಪರಿಶೀಲಿಸಿದರು. ಮುಖ್ಯರಸ್ತೆಯಿಂದ ಸಂಪರ್ಕ ರಸ್ತೆಯ ಕಾಮಗಾರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಪಾಲಿಕೆ ಎಂಜಿನಿಯರ್‌ರನ್ನು ತರಾಟೆಗೆ ತೆಗೆದುಕೊಂಡರು. ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದೀರಿ?. ಏನಿದೆ ನಿಮ್ಮ ಅನುಭವ?. ಇದು ಕೆಲಸ ಅಂತಾರೆ ಏನ್ರಿ ಎಂದು ಪ್ರಶ್ನಿಸಿದರು. ಈ ರೀತಿ ರಸ್ತೆ ಇದ್ದರೆ ಜನರು ಓಡಾಡುವುದಾದರೂ ಹೇಗೆ?. ಕೂಡಲೇ ಇದನ್ನು ಸರಿಪಡಿಸಬೇಕು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸರಕಾರ ಯೋಜನೆಗಳನ್ನು ಮಾಡುತ್ತದೆ. ಸಣ್ಣಪುಟ್ಟ ಕಾಮಗಾರಿಗಳ ಬಗ್ಗೆ ನಿರ್ಲಕ್ಷ್ಯ ತೋರಿ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳಿಗೆ ಗಡುವು: ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುವ ಕಾಮಗಾರಿಗಳಿಗೆ ಬಿಲ್ ಪಾವತಿ ಸಮಸ್ಯೆಯಿಲ್ಲ. ಆದರೂ ಕಾಮಗಾರಿಗಳು ವಿಳಂಬವಾಗುತ್ತಿವೆ. ಇದರಿಂದ ಜನರು ಸಮಸ್ಯೆ ಅನುಭವಿಸುವಂತಾಗಲಿದೆ. ನೀಡಿರುವ ಸಮಯದಲ್ಲಿ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಿತ್ಯವೂ ಕಾಮಗಾರಿಗಳ ಪ್ರಗತಿ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಕೆಯುಡಿಎಫ್‌ಸಿ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀನಿವಾಸ, ನಗರ ಯೋಜನಾ ಇಲಾಖೆ ನಿರ್ದೇಶಕ ಮುರಳಿ, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ಇನ್ನಿತರರಿದ್ದರು.