Advertisement

ಕೃಷಿ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಾಸವಾಗಬಾರದು: ಸಚಿವ ಬಿ.ಸಿ ಪಾಟೀಲ್ ಸೂಚನೆ

02:11 AM Apr 07, 2020 | keerthan |

ಬೆಳಗಾವಿ: ಲಾಕ್ ಡೌನ್ ಸಂದರ್ಭದಲ್ಲಿ ಕೃಷಿಯ ದೈನಂದಿನ ಚಟುವಟಿಕೆಗಳು ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳದಂತೆ ಕ್ರಮ ಕೈಗೊಳ್ಳುವುದರ ಜತೆಗೆ ಕೃಷಿ ಉತ್ಪನ್ನಗಳ ಮಾರಾಟ, ಸಾಗಾಣಿಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಬೀಜ-ಗೊಬ್ಬರ ಮತ್ತಿತರ ಸಾಮಗ್ರಿಗಳ ಪೂರೈಕೆ ವ್ಯತ್ಯಯವಾಗದಂತೆ ಎಲ್ಲ ವ್ಯವಸ್ಥೆ ಕಲ್ಪಿಸಬೇಕು ಎಂದು ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ ಸೂಚನೆ ನೀಡಿದರು.

Advertisement

ಕೋವಿಡ್ -19 ಹಿನ್ನೆಲೆಯಲ್ಲಿ ಕೃಷಿ ಸಂಬಂಧಿತ ವಿಷಯಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಮಳೆಯಾದರೆ ರೈತರಿಗೆ ಬೀಜ, ಗೊಬ್ಬರ ಮತ್ತಿತರ ಸಾಮಗ್ರಿಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.

ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತರು ಬೆಳೆದ ತರಕಾರಿ, ಹಣ್ಣುಗಳ ಮಾರಾಟ ಹಾಗೂ ಸಾಗಾಣಿಕೆಗೆ ಯಾವುದೇ ಅನಾನುಕೂಲ ಆಗಕೂಡದು. ಬಿತ್ತನೆ, ಬೀಜ-ಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ, ಸಾಗಾಣಿಕೆ ಸಮರ್ಪಕವಾಗಿ ಇರಬೇಕು. ಕೃಷಿ ಯಂತ್ರೋಪಕರಣಗಳು ಮತ್ತಿತರ ಸಾಮಗ್ರಿಗಳ ಮಾರಾಟ ವ್ಯವಸ್ಥೆಯನ್ನು ಯಥಾಪ್ರಕಾರ ಕಲ್ಪಿಸಬೇಕು ಎಂದು ಹೇಳಿದರು.

ಸರಕು ವಾಹನಗಳ ಸಂಚಾರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧಗಳಿಲ್ಲ. ಒಂದು ವೇಳೆ ಎಲ್ಲಿಯಾದರೂ ಸರಕು ಸಾಮಗ್ರಿಗಳನ್ನು ಸಾಗಿಸುವ ವಾಹನಗಳಿಗೆ ತಡೆಯೊಡ್ಡಿದರೆ ಸರ್ಕಾರ ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದರೆ ಸಮಸ್ಯೆ ಪರಿಹರಿಸಲಾಗುವುದು ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

ಹಕ್ಕಿಜ್ವರ ಕಂಡುಬಂದಿಲ್ಲ: ರಾಜ್ಯದಲ್ಲಿ ಕೋಳಿ ಅಥವಾ ಹಕ್ಕಿಜ್ವರ ವರದಿಯಾಗಿಲ್ಲ. ಆದ್ದರಿಂದ ಕೋಳಿ ಮಾಂಸ ತಿಂದರೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

Advertisement

ವ್ಯಾಪಾರ, ವಹಿವಾಟು ನಡೆಸಲು ಯಾವುದೇ ರೀತಿಯ ಸಮಯ ನಿರ್ಬಂಧ ವಿಧಿಸಬಾರದು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ ನೆರೆಯ ರಾಜ್ಯಗಳಿಗೆ ಪೂರೈಕೆಯಾಗುವ ಹಣ್ಣು-ತರಕಾರಿ ಸೇರಿದಂತೆ ಇತರೆ ಸಾಮಗ್ರಿಗಳನ್ನು ಸರಾಗವಾಗಿ ಸಾಗಿಸಲು ಆಯಾ ರಾಜ್ಯದ ಗಡಿಯ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು.

ಈ ಬಗ್ಗೆ ಈಗಾಗಲೇ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಜತೆ ಅನೇಕ ಬಾರಿ ಚರ್ಚಿಸಲಾಗಿದೆ. ಆದಾಗ್ಯೂ ಸಮಸ್ಯೆ ಉದ್ಭವಿಸಿದಾಗ ತಮ್ಮ ಗಮನಕ್ಕೆ ತಂದರೆ ಮತ್ತೆ ಮಾತನಾಡುತ್ತೇನೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಹೇಳಿದರು

ಮೇ ಕೊನೆ ಅಥವಾ ಜೂನ್ ನಲ್ಲಿ ಬಿತ್ತನೆ ಆರಂಭವಾಗಲಿದ್ದು ಶೇ.50ರಷ್ಟು ರಸಗೊಬ್ಬರ ದಾಸ್ತಾನು ಇದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ, ಮತ್ತಿತರ ಸಾಮಗ್ರಿಗಳ ಪೂರೈಕೆ ಅಥವಾ ಸಾಗಾಣಿಕೆಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ರೈತ ಸಂಪರ್ಕ ಕೇಂದ್ರಗಳು ಕೂಡ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಕಾಸಿ  ಮಾಹಿತಿ ನೀಡಿದರು.

ಹಾಪ್ ಕಾಮ್ಸ್ ಮತ್ತು ತೋಟಗಾರಿಕೆ ಇಲಾಖೆಯ ಮೂಲಕ 100 ಕ್ಕೂ ಅಧಿಕ ವಾಹನಗಳನ್ನು ಬಳಸಿಕೊಂಡು ನಗರದಲ್ಲಿರುವ ಬಡಾವಣೆಗಳಿಗೆ ಹಣ್ಣು-ತರಕಾರಿ ಪೂರೈಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಹಕಾಟಿ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next