ಕೊಪ್ಪಳ: ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಸೂಚನೆಯ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅವರು ಗುರುವಾರ ನಗರದ ಸರ್ಕಾರಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ ಸೋಂಕಿತರ ಸಂಖ್ಯೆಯು ಏರಿಕೆಯಾಗುತ್ತಿದ್ದು ಜೊತೆಗೆ ಸಾವಿನ ಸಂಖ್ಯೆಯು ಏರಿಕೆಯಾಗುತ್ತಿದೆ. ಜೊತೆಗೆ ಆಸ್ಪತ್ರೆಯ ಬೆಡ್ ಗಳು ಭರ್ತಿಯಾಗಿವೆ. ಸೋಂಕಿತರು ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬಂದರೆ ಬೆಡ್‌ಗಳು ಭರ್ತಿಯಾಗಿವೆ ಎಂದು ವೈದ್ಯರು, ಆಸ್ಪತ್ರೆಯ ಸಿಬ್ಬಂದಿಗಳು ಹೇಳುತ್ತಿದ್ದು ಜನರು ಬೆಡ್ ಇಲ್ಲದೇ ನರಳಾಡುವಂತಾಗಿದೆ.
ನಗರದ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್‌ಗಳೂ ಸಂಪೂರ್ಣ ಭರ್ತಿಯಾಗಿವೆ. ಬಡ ಜನರು ಆಸ್ಪತ್ರೆಗೆ ಬಂದು ಬೆಡ್ ಇಲ್ಲದೇ ಪರದಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗೆ ತೆರಳಿದರೆ ಲಕ್ಷಾಂತರ ಶುಲ್ಕ ಕಟ್ಟಬೇಕಾದ ಸ್ಥಿತಿ ಎದುರಾಗುತ್ತಿರುವುದರಿಂದ ಸರ್ಕಾರಿ ಆಸ್ಪತ್ರೆಗೆ ಬಂದರೆ ಬೆಡ್‌ಗಳ ಸಮಸ್ಯೆ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಮಂತ್ರಿ ಬಿ.ಸಿ.ಪಾಟೀಲ್ ಅವರು ಭೇಟಿ ನೀಡಿ ಕೋವಿಡ್ ವಾರ್ಡ್ ಒಳಗೆ ಪಿಪಿಇ ಕಿಟ್ ಧರಿಸಿ ತೆರಳಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯೊಳಗೆ ಆಕ್ಸಿಜನ್, ಬೆಡ್, ವೆಂಟಿಲೇಟರ್ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು. ಕೋವಿಡ್ ವಾರ್ಡ್ ನಿಂದ ಹೊರ ಬರುತ್ತಿದ್ದಂತೆ ಸಚಿವರಿಗೆ ಸ್ಥಳೀಯ ಜನರು ನಮ್ಮನ್ನು ಸಂಬಂಧಿ ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸಿಕೊಳ್ಳುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಭರ್ತಿಯಾಗಿವೆ ಎಂದೆನ್ನುತ್ತಿದ್ದಾರೆ. ನಾವು ಬಡವರು ಏಲ್ಲಿ ಹೋಗಬೇಕು ಎಂದು ಸಚಿವರ ಮುಂದೆ ಅಳಲು ತೋಡಿಕೊಂಡರು.
ಇದನ್ನು ಕೆಲವೇ ನಿಮಿಷ ಆಲಿಸಿದ ಸಚಿವರು ಎಲ್ಲವನ್ನೂ ಸರಿಮಾಡುವೆವು ಎಂದೆನ್ನುತ್ತಲೇ ಜನರ ಸಮಸ್ಯೆ ಪೂರ್ತಿ ಆಲಿಸದೇ ಅಲ್ಲಿಂದ ತೆರಳಿದರು.