ಶಿವಮೊಗ್ಗ: ಸದ್ಯಕ್ಕೆ ಶಾಲಾ ಸಿಲೆಬಸ್ ಕಡಿತದ ಬಗ್ಗೆ ಯೋಚನೆಯಿಲ್ಲ. ಅಗತ್ಯ ಬಿದ್ದರೇ ಮಾತ್ರ ಆ ಬಗ್ಗೆ ಚಿಂತನೆ ಮಾಡುತ್ತೇವೆ. ಇರುವ ಅವಧಿಯಲ್ಲೇ ಸಿಲೆಬಸ್ ಅನ್ನು ಪೂರ್ಣ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಶಿವಮೊಗ್ಗದ ಮಲವಗೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು ಬಳಿಕ ಸುದ್ದಿಗಾರರಂದಿಗೆ ಮಾತನಾಡಿದರು.
ಡಿಸೆಂಬರ್ ತಿಂಗಳಲ್ಲಿ ಒಂದು ಸಭೆ ಮಾಡಿ, ಅಗತ್ಯ ಬಿದ್ದರೆ ಪರೀಕ್ಷೆಗೆ ಸಿಲೆಬಸ್ ಕಡಿಮೆ ಮಾಡುತ್ತೇವೆ. ಆದರೆ, ಮಕ್ಕಳ ಬೋಧನೆ ವಿಚಾರದಲ್ಲಿ ಸಿಲೆಬಸ್ ಕಡಿತ ಮಾಡಲ್ಲ. ರಜೆ ದಿನಗಳನ್ನು ಸಹ ಬಳಸಿಕೊಂಡು ಮಕ್ಕಳಿಗೆ ಬೋಧನೆ ಮಾಡಿ, ಶಿಕ್ಷಣ ನೀಡುತ್ತೇವೆ ಎಂದರು.
ಕಳೆದ 15 ದಿನದಿಂದ ಶಾಲೆ ಯಾವಾಗ ಆರಂಭವಾಗುತ್ತದೆಂದು ಪೋಷಕರು ಕಾಯುತ್ತಿದ್ದರು. ಕಳೆದ ವಾರ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಂದಿನಿಂದ ಆರಂಭಿಸಲು ನಿರ್ಣಯಿಸಲಾಗಿತ್ತು. ಅದರಂತೆ ರಾಜ್ಯಾದ್ಯಂತ ಇಂದು ಪ್ರಾಥಮಿಕ ಶಾಲೆಗಳು ಆರಂಭವಾಗಿದೆ. ನಾನು ಕೂಡ ಶಾಲೆಗೆ ಭೇಟಿ ನೀಡಿದ್ದೇನೆ. ಮಕ್ಕಳು ಖುಷಿಯಿಂದ ಶಾಲೆಗೆ ಬಂದಿದ್ದಾರೆ. ಪೋಷಕರು, ಶಿಕ್ಷಕರು ಎಲ್ಲರೂ ಹೂ, ಸಿಹಿ ನೀಡಿ ಮಕ್ಕಳನ್ನು ಸ್ವಾಗತಿಸಿದ್ದಾರೆ ಎಂದರು.
ಇದನ್ನೂ ಓದಿ:ಇಂದಿನಿಂದ ಕಿರಿಯರೂ ಬರ್ತಾರೆ ಶಾಲೆಗೆ
ರಾಜ್ಯದಲ್ಲಿ ಹಂತಹಂತವಾಗಿ ಎಲ್ಲಾ ಶಾಲೆಗಳು ಇದೀಗ ಆರಂಭವಾಗಿದೆ. ರಾಜ್ಯದಲ್ಲಿ ಕೆಲವು ಶಾಲೆಗಳಲ್ಲಿ ಇನ್ನಷ್ಟು ವ್ಯವಸ್ಥೆಯನ್ನು ಮಾಡಬೇಕಿದೆ. ಪ್ರತಿವರ್ಷ ಮಕ್ಕಳ ಸಂಖ್ಯೆ ಆಧರಿಸಿ, ಶಾಲೆಗಳ ಮೂಲಸೌಕರ್ಯ ಹೆಚ್ಚಳ ಮಾಡುತ್ತಿದ್ದೆವೆ ಎಂದು ಸಚಿವ ನಾಗೇಶ್ ಹೇಳಿದರು.