ದಾವಣಗೆರೆ: ರಾಜ್ಯದ 10 ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮ-ಸಕ್ರಮ ಯೋಜನೆ ವಿಸ್ತರಣೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ಬಿ.ಎ. ಬಸವರಾಜ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯ ಈ ಮಾಹಿತಿ ನೀಡಿದ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾದರಿಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಮನೆಗಳಿಗೆ ಇಂತಿಷ್ಟು ದಂಡ ವಿಧಿಸಿ ಸಕ್ರಮ ಮಾಡುವುದರಿಂದ ಸರ್ಕಾರಕ್ಕೆ ಆದಾಯ ಬರುತ್ತದೆ. ಮನೆ ಕಟ್ಟಿಕೊಂಡವರಿಗೂ ನೆಮ್ಮದಿ ದೊರೆಯಲಿದೆ. ಮುಂದಿನ ಇಲ್ಲವೇ ಇನ್ನೊಂದು ಕ್ಯಾಬಿನೆಟ್ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಈಗಿರುವ ಸ್ಮಾರ್ಟ್ ಸಿಟಿ ಯೋಜನೆ ಜೊತೆಗೆ ಕಲಬುರಗಿ, ಬಳ್ಳಾರಿ, ಮೈಸೂರು ಹಾಗೂ ವಿಜಯಪುರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ನೀಡಬೇಕು ಎಂದು ಕೇಂದ್ರಕ್ಕೆ ಕೋರಲಾಗಿದೆ. ಎರಡು ಮೂರು ದಿನಗಳಲ್ಲಿ ಅನುಮತಿ ದೊರೆಯುವ ನಿರೀಕ್ಷೆಯೂ ಇದೆ ಎಂದು ತಿಳಿಸಿದರು.
14ನೇ ಹಣಕಾಸು ಯೋಜನೆಯಡಿ ಅನುದಾನ ಕಡಿತಮಾಡಿಲ್ಲ. ವಿಶೇಷನಿಧಿಯ ಮೂಲಕ ಅನುದಾನ ನೀಡುವುದರಿಂದ ನಗರಾಭಿವೃದ್ಧಿ ಇಲಾಖೆಯ ಅನುದಾನಕ್ಕೆ ಯಾವುದೇ ಕೊರತೆ ಇಲ್ಲ. ನಮ್ಮ ಇಲಾಖೆಗೆ ಬರಬೇಕಾದ ಅನುದಾನ ಬರುತ್ತಿದೆ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಚೈನ್ ಲಿಂಕ್ ಕಡಿತ ಮಾಡುವಲ್ಲಿ ಯಶಸ್ವಿಯಾಗಿ ರುವ ಜಿಲ್ಲಾಡಳಿತಕ್ಕೆ ಸರ್ಕಾರದ ಪರ ಅಭಿನಂದನೆ ಸಲ್ಲಿಸಲಾಗುವುದು. ಕಂಟೇನ್ ಮೆಂಟ್ ಝೋನ್ ಒಳಗೊಂಡಂತೆ ಎಲ್ಲಾ ಕಡೆ ಕೊರೊನಾ ಸಂಬಂಧಿಸಿದ ಪರೀಕ್ಷೆ ಹೆಚ್ಚು ನಡೆಸಲು ಕಟ್ಟೆಚ್ಚರ ನೀಡಲಾಗಿದೆ. ಚೈನ್ ಲಿಂಕ್ ಕಡಿತಗೊಳಿಸಿಯೇ ತೀರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.