ಬೆಳಗಾವಿ: ನಿಯೋಜನೆ ಮೇಲೆ ಬೋಧಕರು ಬೇರೆ ಕಡೆ ಹೋಗಿದ್ದಾಗ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅವಕಾಶ ಕಲ್ಪಿಸಿ, ಬೋಧನೆಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಪುತ್ತೂರಿನ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೋಧಕರ ಕೊರತೆ ಸಂಬಂಧ ಬಿಜೆಪಿಯ ಸಂಜೀವ ಮಠಂದೂರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಖಾಯಂ ಬೋಧಕ ಹುದ್ದೆಗೆ ನೇಮಕಗೊಂಡು ಬಳಿಕ ಎರವಲು ಸೇವೆಗೆ ತೆರಳಿದ್ದರೆ, ಅಲ್ಲಿಗೆ ಅತಿಥಿ ಉಪನ್ಯಾಸಕರ ನೇಮಕ ಇಲ್ಲವೇ ಇತರ ಕ್ರಮಗಳ ಮೂಲಕ ಬೋಧನೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್‌ನ ಶಿವಾನಂದ ಪಾಟೀಲ್ ಸಹಿತ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಖಾಯಂ ಹುದ್ದೆ ಭರ್ತಿ ಮಾಡಿ ಬಳಿಕ ಅವರನ್ನು ಎರವಲು ಸೇವೆಗೆ ಬಳಸಿಕೊಂಡರೆ ಆ ಹುದ್ದೆ ಖಾಲಿ ಎಂದು ಪರಿಗಣಿಸಲಾಗದು. ಅಂತಹ ಹುದ್ದೆಗೆ ಅತಿಥಿ ಉಪನ್ಯಾಸಕರನ್ನು ನೇಮಿಸಲು ಅವಕಾಶವಿಲ್ಲ. ಈ ತಾಂತ್ರಿಕ ಸಮಸ್ಯೆಯನ್ನು ಮೊದಲು ಸರಿಪಡಿಸಬೇಕು. ರಾಜ್ಯದ ಎಲ್ಲ ಕಾಲೇಜುಗಳಲ್ಲೂ ಇಂಥ ಸಮಸ್ಯೆಯಿದೆ ಎಂದರು.
ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೋಧಕರ ಹುದ್ದೆ ಕೊರತೆ ಇಲ್ಲದಂತೆ ಕ್ರಮ ಕೈಗೊಳ್ಳಲಾಗುವುದು. ಸದ್ಯ ಕಾಲೇಜಿನಲ್ಲಿ 11 ಖಾಯಂ ಉಪನ್ಯಾಸಕರು, 12 ಮಂದಿ ಅತಿಥಿ ಉಪನ್ಯಾಸಕರಿದ್ದಾರೆ. 4 ಬೋಧಕೇತರ ಸಿಬಂದಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಸಂಜೀವ ಮಠಂದೂರು ಮಾತನಾಡಿ, 661 ವಿದ್ಯಾರ್ಥಿನಿಯರಿದ್ದಾರೆ. ಖಾಯಂ ಬೋಧಕರಲ್ಲಿ ಕೆಲವರು ನಿಯೋಜನೆ ಮೇಲೆ ಹೋಗಿದ್ದಾರೆ. ಹೀಗಾಗಿ ವಿದ್ಯಾರ್ಥಿನಿಯರ ಕಲಿಕೆಗೆ ಸಮಸ್ಯೆಯಾಗುತ್ತಿದೆ ಎಂದರು.