Advertisement

ಉದ್ದೇಶಿತ ಇ.ವಿ. ಕೈಗಾರಿಕಾ ಹಬ್‌ನಲ್ಲಿ ಸಾವಿರ ಸ್ಟಾರ್ಟಪ್‌ಗಳಿಗೆ ಸ್ಥಾನ: ಅಶ್ವತ್ಥನಾರಾಯಣ

07:30 PM Oct 13, 2022 | Team Udayavani |

ಬೆಂಗಳೂರು: ಸುಸ್ಥಿರ ಮತ್ತು ಪರಿಸರಕ್ಕೆ ಪೂರಕವಾದ ಅಭಿವೃದ್ಧಿ ಸಾಧಿಸುವ ಗುರಿ ಇಟ್ಟುಕೊಂಡಿರುವ ಕರ್ನಾಟಕವು ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆಗೆ ಒತ್ತು ಕೊಟ್ಟಿದ್ದು, ಇತ್ತೀಚೆಗೆ ‘ವಿದ್ಯುತ್‌ ಚಾಲಿಕ ಕೈಗಾರಿಕಾ ವಲಯ’ದ ಸ್ಥಾಪನೆಯನ್ನು ಘೋಷಿಸಿದೆ. ಉದ್ದೇಶಿತ ವಲಯದಲ್ಲಿ 1,000 ನವೋದ್ಯಮಗಳು ನೆಲೆಯೂರಲಿದ್ದು, ರಾಜ್ಯದ ಸಾರಿಗೆ ವಲಯದಲ್ಲಿ ಆಮೂಲಾಗ್ರ ಬದಲಾವಣೆ ಆಗಲಿದೆ ಎಂದು ಐಟಿ- ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

Advertisement

ಭಾರತೀಯ ಆಟೋಮೋಟೀವ್ ಎಂಜಿನಿಯರ್‌ಗಳ ಸಂಘಟನೆಯು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಏರ್ಪಡಿಸಿರುವ 10ನೇ ಅಂತರರಾಷ್ಟ್ರೀಯ ಮೊಬಿಲಿಟಿ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಗುರುವಾರ ಪಾಲ್ಗೊಂಡಿದ್ದರು.

ಈ ಸಮಾವೇಶದಲ್ಲಿ ‘ಸುಸ್ಥಿರ ಮತ್ತು ಬಹುಮಾದರಿ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿ’ ಕುರಿತು ಚರ್ಚೆ ನಡೆಯುತ್ತಿದ್ದು, 800ಕ್ಕೂ ಹೆಚ್ಚು ಪರಿಣತರು ಪಾಲ್ಗೊಂಡಿದ್ದಾರೆ. ಇದು ದೇಶದಲ್ಲಿ ನಡೆಯುತ್ತಿರುವ ಈ ಮಾದರಿಯ ಪ್ರಪ್ರಥಮ ಸಮಾವೇಶವಾಗಿದೆ.

ರಾಜ್ಯ ಸರಕಾರವು ಆಟೋಮೋಟಿವ್ ವಲಯಕ್ಕೆ ಉತ್ತೇಜನ ನೀಡಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಜತೆಗೆ ತರಬೇತಿ, ಸಂಶೋಧನೆ ಮತ್ತು ಅಭಿವೃದ್ಧಿ, ನಾವೀನ್ಯತೆ ಹಾಗೂ ಉದ್ಯಮಶೀಲತೆಗಳಿಗೆ ಉತ್ತೇಜನ ಕೊಡಲು ರಾಜ್ಯದಲ್ಲಿ 5 ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯವು ವಿದೇಶೀ ಮತ್ತು ದೇಶೀ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಅಗ್ರಸ್ಥಾನದಲ್ಲಿದೆ. ಈಗಾಗಲೇ ಐಟಿ, ಸೆಮಿಕಂಡಕ್ಟರ್, ಬಿಟಿ, ಎಲೆಕ್ಟ್ರಾನಿಕ್ಸ್‌ಗಳ ರಾಜಧಾನಿಯಾಗಿರುವ ಕರ್ನಾಟಕವು ಮುಂದಿನ ಒಂದೆರಡು ವರ್ಷಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಆಡುಂಬೊಲವೂ ಆಗಿ ಹೊರಹೊಮ್ಮಲಿದೆ ಎನ್ನುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

Advertisement

ಇದನ್ನೂ ಓದಿ: ಅ.15 ರಿಂದ ಅಮೃತ ಜ್ಯೋತಿ ನೋಂದಣಿ ಅಭಿಯಾನ ಪ್ರಾರಂಭ: ಸುನಿಲ್ ಕುಮಾರ್‌

ಪರಿಸರಸ್ನೇಹಿ ಇಂಧನ, ಪರಿಸರ ರಕ್ಷಣೆ, ವಿಶ್ವಸಂಸ್ಥೆಯು ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿಗಳ ಕಡೆಗೆ ರಾಜ್ಯವು ಅಗ್ರ ಗಮನ ನೀಡಿದೆ. ಅಲ್ಲದೆ, ಪರಿಸರಸ್ನೇಹಿ ಜಲಜನಕ ಉತ್ಪಾದನೆಯ ಯೋಜನೆಯನ್ನು ಸಾಕಾರಗೊಳಿಸಲು ರಾಜ್ಯ ಸರಕಾರವು ಗಂಭೀರವಾಗಿ ಆಲೋಚಿಸುತ್ತಿದೆ. ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆ ಸೇರಿದಂತೆ ಆಧುನಿಕ ಮಾದರಿಯ ಎಲ್ಲ ಉದ್ಯಮಗಳನ್ನೂ ರಾಜ್ಯವು ಸಂಪೂರ್ಣವಾಗಿ ಉತ್ತೇಜಿಸಲಿದೆ ಎಂದು ಅವರು ಭರವಸೆ ನೀಡಿದರು.

ನಿರಂತರವಾಗಿ ಬೆಳೆಯುತ್ತಿರುವ ಬೆಂಗಳೂರು ಮತ್ತು ಇತರ ಮಹಾನಗರಗಳಲ್ಲಿ ಸುಗಮ ಸಂಚಾರವು ಸವಾಲಾಗಿದೆ. ಸಂಚಾರ ದಟ್ಟಣೆಯಿಂದ ಅಮೂಲ್ಯ ಮಾನವ ಸಮಯ ವ್ಯರ್ಥವಾಗುತ್ತಿದ್ದು, ಉತ್ಪಾದನೆಯ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರುತ್ತಿದೆ. ಜತೆಗೆ ಮಿತಿ ಮೀರಿದ ಮಾಲಿನ್ಯದಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ಇವುಗಳನ್ನು ನಿವಾರಿಸಿಕೊಳ್ಳಲು ವಿದ್ಯುತ್‌ಚಾಲಿತ ವಾಹನಗಳನ್ನು ವ್ಯಾಪಕವಾಗಿ ಪರಿಚಯಿಸುವುದು ಇಂದಿನ ಜರೂರುಗಳಲ್ಲಿ ಒಂದಾಗಿದೆ ಎಂದು ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

ನಮ್ಮ ನಗರಗಳು ಧಾರಣಾಶಕ್ತಿಯನ್ನು ಉಳಿಸಿಕೊಳ್ಳಬೇಕೆಂದರೆ, ಸಂಚಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇಲ್ಲದೆ ಹೋದರೆ, ಜಾಗತಿಕ ಸ್ತರದಲ್ಲಿ ಪ್ರತಿಕೂಲ ಸಂದರ್ಭ ಸೃಷ್ಟಿಯಾಗಿ, ಅನೇಕ ಅವಕಾಶಗಳು ಕೈತಪ್ಪಿ ಹೋಗುವ ಸಂಭವ ಎದುರಾಗುತ್ತದೆ. ಆದ್ದರಿಂದ ತಂತ್ರಜ್ಞಾನಿಗಳು ಇಂತಹ ಅವಶ್ಯಕತೆಗಳ ಬಗ್ಗೆ ಗಮನ ಹರಿಸಿ, ಸ್ಪಂದಿಸಬೇಕು ಎಂದು ಅವರು ಕೋರಿದರು.

ಈ ಸಮಾವೇಶದಲ್ಲಿ 800ಕ್ಕೂ ಹೆಚ್ಚು ವಾಹನ ತಯಾರಿಕಾ ಕ್ಷೇತ್ರದ ಪರಿಣತರು ಭಾಗವಹಿಸಿದ್ದು, 250ಕ್ಕೂ ಹೆಚ್ಚು ಜನ ವಿಚಾರ ಮಂಡಿಸುತ್ತಿದ್ದಾರೆ. ಇದರ ನೆನಪಿಗೆ ಆಯೋಜಕರು 250 ಸಸಿಗಳನ್ನು ನೆಟ್ಟಿದ್ದು ವಿಶೇಷವಾಗಿತ್ತು.

ಸಮಾವೇಶದಲ್ಲಿ ಭಾರತೀಯ ಆಟೋಮೋಟಿವ್ ಎಂಜಿನಿಯರುಗಳ ಸಂಘಟನೆಯ ಉನ್ನತಾಧಿಕಾರಿ ಮತ್ತು ಸಮಾವೇಶದ ರೂವಾರಿ ಮಹೇಶ್‌ ಬಾಬು, ಫೋಕಸ್‌ ಗ್ರೂಪ್‌ನ ಸಂಸ್ಥಾಪಕ ಮುನಿರತ್ನಂ ಧನಂಜಯನ್, ಸಂಘಟನೆಯ ಉಪಾಧ್ಯಕ್ಷ ಕೆ.ವೆಂಕಟರಾಜ್‌, ಗ್ಲೋಬಲ್ ಇಂಕ್‌ ಸಿಇಒ ಸುಹಾಸ್ ಗೋಪಿನಾಥ್, ಮಾರುತಿ ಸುಜುಕಿಯ ಸಿಟಿಒ ಸಿ ವಿ ರಾಮನ್, ಎಂಆರ್‍‌ಎನ್‌ ಸಮೂಹದ ವ್ಯವಸ್ಥಾಪಕ ನಿರ್ದೇಶಕ ವಿಜಯ್‌ ನಿರಾಣಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next