ಹೊಸಪೇಟೆ: ಪಾರ್ಕಿಂಗ್ ವ್ಯವಸ್ಥೆ ಮಾಡಿದೇ ಇರುವ ನಗರದ ಕೆಲ ಬಹುಮಹಡಿ ಕಟ್ಟಡದ ಮಾಲೀಕರ ವಿರುದ್ಧ ನಗರಸಭೆ ಕಾನೂನು ಕ್ರಮ ಕೈಗೊಳ್ಳಬೇಕು ಮೂಲ ಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಸಚಿವ ಆನಂದ್ ಸಿಂಗ್ ಹೇಳಿದರು.
ನಗರಸಭೆಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ ಜಿಲ್ಲಾ ಕೇಂದ್ರವಾಗಿ ಮಾರ್ಪಟ್ಟಿದ್ದು, ಪ್ರಮುಖ ಕಾಂಪ್ಲೆಕ್ಸ್‌ಗಳಲ್ಲಿ ಪಾರ್ಕಿಂಗ್ ಶೆಲ್ಟರ್ ನಿರ್ಮಿಸಬೇಕು. ಯಾವ ಕಾಂಪ್ಲೆಕ್ಸ್‌ನಲ್ಲಿ ಪಾರ್ಕಿಂಗ್ ಗೆ ಜಾಗ ಇಲ್ಲ. ಅಂತವರ ವಿರುದ್ಧ ನಿಯಮದ ಅನ್ವಯ ಕ್ರಮವಹಿಸಬೇಕು ಎಂದು ಪೌರಾಯುಕ್ತ ಮನ್ಸೂರು ಅಲಿಗೆ ಸೂಚಿಸಿದರು.
ನಗರದ ಕಾಲೇಜ್ ರಸ್ತೆ, ಡ್ಯಾಂ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ಸಮಸ್ಯೆಯಿಂದ ಟ್ರಾಪಿಕ್ ಜಾಮ್ ಉಂಟಾಗುತ್ತಿದೆ. ಹೀಗಾಗಿ ಟ್ರಾಪಿಕ್ ಸಮಸ್ಯೆ ಹೋಗಲಾಡಿಸಲು ಕಾಂಪ್ಲೆಕ್ ಗಳಲ್ಲಿ ಪಾರ್ಕಿಂಗ್‌ಗೆ ಜಾಗ ಮೀಸಲಿಡಬೇಕು ಎಂದರು.
ಯಾವ ಕಾಂಪ್ಲೆಕ್ಸ್‌ನಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಇಲ್ಲ. ಅಂತಹ ಕಾಂಪ್ಲೆಕ್ಸ್‌ಗಳಲ್ಲಿ ನೀರು ಹಾಗೂ ವಿದ್ಯುತ್ ಕಡಿತ ಮಾಡಬೇಕು. ನಿಯಮ ಮೀರಿದರೆ ಇಂತ ಕ್ರಮ ಕೈಗೊಳ್ಳಬೇಕು. ನಗರದ ಪ್ರಮುಖ ವೃತ್ತಗಳಲ್ಲಿ ಟ್ರಾಪಿಕ್ ಸಿಗ್ನಲ್ ವ್ಯವಸ್ಥೆ ಮಾಡಬೇಕು. ಜತೆಗೆ ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮವಹಿಸಬೇಕು ಎಂದು ಸಂಚಾರ ಠಾಣೆ ಪಿಐ ಮಹಾಂತೇಶ ಸಜ್ಜನ ಅವರಿಗೆ ಸೂಚಿಸಿದರು.
ನಗರದಲ್ಲಿ ಕಳ್ಳತನ ಪ್ರಮಾಣ ತಗ್ಗಿಸಬೇಕು. ಎಪಿಎಂಸಿಯಲ್ಲಿ ಲಾರಿ ಚಾಲಕನ ಕೊಲೆ ಮಾಡಲಾಗಿದ್ದು, ಅದನ್ನು ಸರಿಯಾಗಿ ತನಿಖೆ ಮಾಡಬೇಕು. ನಗರದಲ್ಲಿ ಬೀಟ್ ವ್ಯವಸ್ಥೆ ಬಲಗೊಳಿಸಬೇಕು. ಬೀಟ್ ಮಾಡುವವರು ವಿಸಿಲ್ ಹಾಕಬೇಕು. ಬೈಕ್‌ಗಳಿಗೆ ಸೈರನ್ ವ್ಯವಸ್ಥೆ ಮಾಡಬೇಕು. ಎಸ್ಪಿ ಅನುಮತಿ ಪಡೆದರೆ, ದಾನಿಗಳಿಂದ ವ್ಯವಸ್ಥೆ ಮಾಡಿಕೊಡುವೆ ಎಂದು ಪಟ್ಟಣ ಠಾಣೆ ಪಿಐ ಶ್ರೀನಿವಾಸ್ ಅವರಿಗೆ ಹೇಳಿದರು.
ನಗರ ಬೆಳೆದಂತೆಲ್ಲ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ತಡೆಯಲು ಪೊಲೀಸ್ ಇಲಾಖೆ ಸನ್ನದ್ಧವಾಗಬೇಕು. ನಗರದ ಆದರ್ಶ ವಿದ್ಯಾಲಯಕ್ಕೆ ಸಮರ್ಪಕ ವ್ಯವಸ್ಥೆ ಮಾಡಬೇಕು ಎಂದರು.
ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಪಿಡಬ್ಲುಡಿ ಅ ಧಿಕಾರಿ ಕಿಶೋರ್‌ಕುಮಾರ್, ನಗರಸಭೆ ಅ ಧಿಕಾರಿಗಳಾದ ಸಯ್ಯದ್ ಮನ್ಸೂರ್, ಅಜಿತ್ ಸಿಂಗ್, ಕಂದಾಯ ಇಲಾಖೆಯ ಅಧಿಕಾರಿಗಳಾದ ಸುರೇಶ್, ಮಲ್ಲಿಕಾರ್ಜುನಗೌಡ,ಸಾರಿಗೆ ಇಲಾಖೆಯ ಅ ಧಿಕಾರಿ ಜಿ. ಶೀನಯ್ಯ, ಜೆಸ್ಕಾಂ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಇದ್ದರು .