Advertisement

H. D. Kumaraswamy ಗಣಿ ಗುತ್ತಿಗೆ ದಾಖಲೆ ಸುಳ್ಳು,ವಿಚಾರಣೆ ಬೇಕಿಲ್ಲ

01:55 AM Aug 22, 2024 | Team Udayavani |

ಬೆಂಗಳೂರು: ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಕಂಪೆನಿಗೆ ನಾನು ಸಹಾಯ ಮಾಡಿಲ್ಲ. ಅಲ್ಲಿ ಗಣಿಗಾರಿಕೆಯೇ ನಡೆದಿಲ್ಲ. ನನ್ನಿಂದ ರಾಜ್ಯದ ಬೊಕ್ಕಸಕ್ಕೆ ನಯಾಪೈಸೆ ನಷ್ಟ ಆಗಿಲ್ಲ. 2017ರ ಈ ಪ್ರಕರಣದಲ್ಲಿ 3 ತಿಂಗಳಲ್ಲಿ ಸುಪ್ರೀಂ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಬೇಕಿದ್ದ ಎಸ್‌ಐಟಿ ಇದುವರೆಗೆ ಸಲ್ಲಿಸಿಲ್ಲ. ಈಗ ಪ್ರಾಸಿಕ್ಯೂಷನ್‌ಗೆ ಕೇಳುತ್ತಿರುವುದೇಕೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

Advertisement

ತಮ್ಮ ವಿರುದ್ಧದ ಆರೋಪಗಳಿಗೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, 2006ರಲ್ಲಿ ಸಿಎಂ ಆದ 2 ತಿಂಗಳಿಗೆ ನನ್ನ ವಿರುದ್ಧ 150 ಕೋಟಿ ರೂ.ಗಳ ಅಕ್ರಮ ಹಾಗೂ ಗಣಿ ಕಂಪೆನಿಗಳಿಗೆ ಸಹಾಯ ಮಾಡಿದ್ದೇನೆಂದು ಆರೋಪಿಸ ಲಾಗಿತ್ತು. ನಾನೇ ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೆ. ಆದರೆ ನನ್ನ ವಿರುದ್ಧ ಆರೋಪಿಸಿದ್ದ ಬಿಜೆಪಿ ಶಾಸಕರೂ ಸೇರಿದಂತೆ ಯಾರೊಬ್ಬರೂ ನ್ಯಾಯಾಂಗ ತನಿಖಾ ಸಂಸ್ಥೆಗೆ ದಾಖಲೆ ಸಲ್ಲಿಸಿರಲಿಲ್ಲ. ಹಾಗಾಗಿ ನಾನೇ ಲೋಕಾಯುಕ್ತ ತನಿಖೆಗೆ ಒಪ್ಪಿಸಿದ್ದೆ. ಅಂದು ನನಗಿದ್ದ ಶಾಸಕರ ಸಂಖ್ಯೆಯಿಂದ ರಕ್ಷಣೆಪಡೆಯದೆ ಇಂದಿನವರೆಗೆ ಏಕಾಂಗಿ ಹೋರಾಟ ಮಾಡುಕೊಂಡು ಬಂದಿ ದ್ದೇನೆ ಎಂದರು.

ಕೃಷ್ಣ, ಧರಂಸಿಂಗ್‌, ನನ್ನ ಬಗ್ಗೆ ಉಲ್ಲೇಖ
2009-10ರಲ್ಲಿ 2-3 ಟ್ರಂಕ್‌ಗಳಲ್ಲಿ ಲೋಕಾಯುಕ್ತ ವರದಿ ಸಲ್ಲಿಸಿತ್ತು. ಅದರಲ್ಲಿ ಎಸ್‌.ಎಂ. ಕೃಷ್ಣ, ಧರಂಸಿಂಗ್‌ ಹಾಗೂ ನನ್ನ ಅವಧಿಗೆ ಸಂಬಂಧಿಸಿದ ಉಲ್ಲೇಖಗಳಿದ್ದವು. ಪ್ರಮುಖವಾಗಿ ಜಂತಕಲ್‌ ಗಣಿ ಕಂಪೆನಿ ಹಾಗೂ ಶ್ರೀಸಾಯಿ ವೆಂಕಟೇಶ್ವರ ಮಿನರಲ್ಸ್‌ ಬಗ್ಗೆ ಯು.ವಿ. ಸಿಂಗ್‌ ವರದಿಯಲ್ಲೂ ಉಲ್ಲೇಖವಿತ್ತು. “ಮುಖ್ಯಮಂತ್ರಿಗಳು ತೆಗೆದುಕೊಂಡ ತೀರ್ಮಾನವು ದುರಾಚಾರದಿಂದ ಕೂಡಿದೆ ಎಂದರು.

ದ್ವೇಷ ಸಾಧಿಸಿದ್ದ ಸಿದ್ದು
ಈ ಶಿಫಾರಸು ಇಟ್ಟುಕೊಂಡು ಟಿ.ಜೆ. ಅಬ್ರಹಾಂ 2011ರ ಡಿ. 3ರಂದು 23ನೇ ಎಸಿಸಿಎಂ ಕೋರ್ಟ್‌ ಮುಂದೆ ಖಾಸಗಿ ದೂರು ದಾಖಲಿಸಿದ್ದರು. ಇಂದು ಕಾಂಗ್ರೆಸಿಗರಿಗೆ ವಿಲನ್‌ ಆಗಿರುವ ಇದೇ ಅಬ್ರಹಾಂ ಅಂದು ಹೀರೋ ಆಗಿದ್ದರಾ? ವಾಪಸ್‌ ಲೋಕಾಯುಕ್ತಕ್ಕೆ ಹೋಗುವಂತೆ ಎಸಿಎಂಎಂ ನ್ಯಾಯಾಲಯ ಹೇಳಿದ್ದರಿಂದ 2011ರ ಡಿ. 8ರಂದು ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಿಗ್ರಹ ಹಾಗೂ ಅರಣ್ಯ ಸಂರಕ್ಷಣ ಕಾಯ್ದೆಗಳಡಿ ಮೂವರು ಮಾಜಿ ಸಿಎಂಗಳು ಹಾಗೂ ಇತರ 11 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ 2012ರ ಜ. 20ರಂದು ನಾವೆಲ್ಲರೂ ಹೈಕೋರ್ಟ್‌ಗೆ ಮೊರೆ ಹೋಗಿದ್ದೆವು. ಎಸ್‌.ಎಂ. ಕೃಷ್ಣ ಖುಲಾಸೆ ಆದರು. ಸರಕಾರಕ್ಕೆ 23 ಕೋಟಿ ರೂ. ನಷ್ಟ ಮಾಡಿದ್ದ ಆರೋಪ ಎದುರಿಸುತ್ತಿದ್ದ ಧರಂಸಿಂಗ್‌ ಈಗ ಇಲ್ಲ. ಸರಕಾರದ ಬೊಕ್ಕಸಕ್ಕೆ ಯಾವುದೇ ನಷ್ಟ ಉಂಟು ಮಾಡದ ನನ್ನ ವಿರುದ್ಧ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಕಂಪೆನಿಯ ಗಣಿ ಗುತ್ತಿಗೆ ಪ್ರಕರಣದ ತನಿಖೆ ಮುಂದುವರಿದಿತ್ತು ಎಂದರು.

ಸುಪ್ರೀಂಗೆ ಏಕೆ ವರದಿ ಸಲ್ಲಿಸಿಲ್ಲ?
ಶ್ರೀಸಾಯಿ ವೆಂಕಟೇಶ್ವರ ಮಿನರಲ್ಸ್‌ ಪ್ರಕರಣ ರದ್ದಾಗದ ಹಿನ್ನೆಲೆಯಲ್ಲಿ 2014ರಲ್ಲಿ ನಾನು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದೆ. ಆಗ ಇದೇ ಸಿದ್ದರಾಮಯ್ಯ, ಸರಕಾರದ ವಿರುದ್ಧ ಕಠಿನವಾಗಿ ಮಾತನಾಡುತ್ತಿದ್ದ ನನ್ನ ವಿರುದ್ಧದ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. 2017ರಲ್ಲಿ ಎಸ್‌ಐಟಿ ರಚನೆಯೂ ಆಯಿತು. 3 ತಿಂಗಳಲ್ಲಿ ತನಿಖಾ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. 2017ರ ಜೂ. 20 ಹಾಗೂ 2018ರ ಜನವರಿಯಲ್ಲಿ ಸುಪ್ರೀಂಗೆ ಸ್ಟೇಟಸ್‌ ರಿಪೋರ್ಟ್‌ ಸಲ್ಲಿಸಿದ್ದ ಎಸ್‌ಐಟಿ, ಇದುವರೆಗೆ ತನಿಖಾ ವರದಿ ಸಲ್ಲಿಸಿಯೇ ಇಲ್ಲ. ಅನಂತರ ನನ್ನೊಂದಿಗೇ ಸರಕಾರ ರಚಿಸಿದವರು ಸುಮ್ಮನಾಗಿದ್ದರು. 2023ರ ಜೂನ್‌-ಜುಲೈಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ವಿರುದ್ಧ ವರ್ಗಾವಣೆ ಸೇರಿದಂತೆ ಹಲವು ವಿಚಾರದಲ್ಲಿ ಜೆಡಿಎಸ್‌ ನಾಯಕನಾಗಿ ವಾಗ್ಧಾಳಿ ನಡೆಸಿದ್ದೆ. ಮೇ 14 ಹಾಗೂ ಜುಲೈ 2ನೇ ವಾರದಲ್ಲಿ ಇದೇ ಪ್ರಕರಣಗಳು ಸುಪ್ರೀಂ ಕೋರ್ಟ್‌ ಮುಂದೆ ಇದ್ದವು. ಆಗೆಲ್ಲ ತನಿಖಾ ವರದಿ ಸಲ್ಲಿಸದ ಎಸ್‌ಐಟಿ, ಈಗ ಕಳೆದ ನವೆಂಬರ್‌ನಿಂದ ಚುರುಕಾಗಿಬಿಟ್ಟಿದೆ. ಅದಕ್ಕೂ ಮುನ್ನ ಎಷ್ಟು ಬಾರಿ ವಿಚಾರಣೆ ನಡೆದಿತ್ತು? ಆಗೆಲ್ಲಾ ರಾಜ್ಯಪಾಲರ ಅನುಮತಿ ಏಕೆ ಬೇಕಿತ್ತು? ಎಂದು ಪ್ರಶ್ನಿಸಿದರು.

Advertisement

ಅದು ನನ್ನ ಸಹಿ ಅಲ್ಲವೇ ಅಲ್ಲ
ಅಸಲಿಗೆ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಕಂಪೆನಿ ಕೋರ್ಟ್‌ಗಳನ್ನೇ ಯಾಮಾರಿಸಿದೆ. ಅದರ ಮುಖ್ಯಸ್ಥ ಎಂದು ಹೇಳಿಕೊಂಡು ಬಂದ ವಿನೋದ್‌ ಗೋಯಲ್‌ ಯಾರು? ನಾನು ಸಹಿ ಮಾಡಿದ ಪತ್ರದಲ್ಲಿ ಏನಿತ್ತು ಎಂಬುದರ ತನಿಖೆ ಆಗಿಯೇ ಇಲ್ಲ. ಗಣಿ ಇಲಾಖೆ ಕೊಟ್ಟ ಆದೇಶ ಪ್ರತಿಯಲ್ಲಿ ಏನಿತ್ತು? ಅದರ ಕರಡು ತಿದ್ದಿದವರ್ಯಾರು? ನಕಲಿ ದಾಖಲೆಗಳನ್ನು ಸೃಷ್ಟಿಸಿದವರ್ಯಾರು ಎಂಬುದೂ ಬೆಳಕಿಗೆ ಬರಲಿ. ಅದು ನನ್ನ ಸಹಿ ಅಲ್ಲವೇ ಅಲ್ಲ. ಅಧಿಕಾರಿಯೊಬ್ಬ ಮಗನ ಹೆಸರಿಗೆ 20 ಲಕ್ಷ ರೂ. ತೆಗೆದುಕೊಂಡಿದ್ದ. ಅದನ್ನು ನಾನು ಪತ್ತೆ ಮಾಡಿದ್ದೆ. ಕಡತ ಸಿದ್ಧಪಡಿಸುವುದು ತಳ ಹಂತದ ಅಧಿಕಾರಿಗಳು. ನಾನಲ್ಲ. ಅವರು ತಪ್ಪು ಮಾಡಿದ್ದರೆ ನೇಣಿಗೆ ಹಾಕುತ್ತಾರೆ. ನನಗೇನೂ ಆಗಲ್ಲ. ಈ ಪ್ರಕರಣ ಸಂಬಂಧ ಸರಕಾರದ ಬಳಿ ಈ ದಾಖಲೆಗಳೆಲ್ಲವೂ ಇದೆಯೋ ಇಲ್ಲವೋ ಗೊತ್ತಿಲ್ಲ. ನಮ್ಮಪ್ಪ ಹೇಳಿಕೊಟ್ಟಿದ್ದಾರೆ. ನನ್ನ ಬಳಿ ಭದ್ರವಾಗಿವೆ ಎಂದು ಕುಮಾರಸ್ವಾಮಿ ಹೇಳಿದರು.

ಎಚ್‌ಡಿಕೆ ಹೇಳಿದ್ದೇನು?
-2006ರಲ್ಲಿ ಸಿಎಂ ಆಗಿದ್ದಾಗ 150 ಕೋಟಿ ಲಂಚ ಸ್ವೀಕಾರ ಆರೋಪ ಬಂದಿತ್ತು.
-ಅದನ್ನು ನಾನೇ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೆ. ಯಾರೂ
ದಾಖಲೆ ನೀಡದ್ದಕ್ಕೆ ಲೋಕಾ ಯಕ್ತಕ್ಕೆ ವರ್ಗಾಯಿಸಿದ್ದೆ
-ಸಾಯಿ ವಂಕಟೇಶ್ವರ ಮಿನರಲ್ಸ್‌ ಕಂಪೆನಿಗೆ ನಾನು ನೆರವು ನೀಡಿಯೇ ಇಲ್ಲ.
-ದಾಖಲೆಗಳಲ್ಲಿ ಇರುವುದು ನನ್ನ ಸಹಿಯೇ ಅಲ್ಲ.

ಸಿದ್ದರಾಮಯ್ಯ ಯಾರಿಗೂ ಹೆದರಲ್ಲ ವಂತೆ. ಅಧಿಕಾರ ಇದೆ ಎಂದು ನನ್ನನ್ನು ಹೆದರಿಸುತ್ತೀರಾ? ಇಂತಹ ನೂರು ಸಿದ್ದರಾಮಯ್ಯ ಬಂದರೂ ನನ್ನನ್ನು ಬಂಧಿಸಲಾಗದು.
– ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next