ಚೆನ್ನೈ: ತಮಿಳುನಾಡಿನ ಅಮ್ಮಾ ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆವಾಗ ಇಡೀ ತಮಿಳುನಾಡು ಸರ್ಕಾರವೇ ಲಂಚ ಪಡೆಯುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಕರ್ನಾಟಕದ “ಡೈರಿ ಹಗರಣದ” ಮಾದರಿಯಲ್ಲೇ ತಮಿಳುನಾಡಿನಲ್ಲೂ ಡೈರಿಯೊಂದು ಹೊರಬಿದ್ದಿದ್ದು, ಇದರಲ್ಲಿ ಹೆಚ್ಚು ಕಡಿಮೆ ಸಚಿವ ಸಂಪುಟದ ಸದಸ್ಯರ ಹೆಸರುಗಳು ಉಲ್ಲೇಖವಾಗಿರುವುದು ಪತ್ತೆಯಾಗಿದೆ.
ಸದ್ಯ ಅಲ್ಲಿನ ಪೊಲೀಸರ ವಶದಲ್ಲಿರುವ ಮರಳು ಉದ್ಯಮಿ ಶೇಖರ ಜೆ. ರೆಡ್ಡಿ ಬರೆದಿಟ್ಟುಕೊಂಡಿದ್ದ ಡೈರಿಯಲ್ಲಿ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಒ. ಪನೀರ್‌ಸೆಲ್ವಂ ಹೆಸರುಗಳೂ ಇವೆ. ಅದರಲ್ಲೂ ಡಿಸಿಎಂ ಪನೀರ್‌ಸೆಲ್ವಂ ಅವರು 2.5 ಕೋಟಿ ರೂ. ಕಿಕ್‌ಬ್ಯಾಕ್ ಪಡೆದುಕೊಂಡಿದ್ದಾರೆ ಎಂಬ ಉಲ್ಲೇಖವಿದೆ.
ಶೇಖರ ಜೆ. ರೆಡ್ಡಿ ನಿವಾಸ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ ಸಂದರ್ಭದಲ್ಲಿ ವಶಪಡಿಸಿಕೊಂಡ ಡೈರಿಯಲ್ಲಿ ಈ ಸ್ಫೋಟಕ ಮಾಹಿತಿಗಳಿವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಾತ್ರವಲ್ಲದೆ ಸಂಪುಟದ ಪ್ರಮುಖ ಸಚಿವರು, ಹಿರಿಯ ಅಧಿಕಾರಿಗಳಿಗೆ ಕಿಕ್‌ಬ್ಯಾಕ್ ಸಂದಾಯವಾಗಿದೆ ಎಂದು ಚಾನೆಲ್ ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಇಷ್ಟು ಮಾತ್ರವಲ್ಲ ಎಐಎಡಿಎಂಕೆಯಿಂದ ಉಚ್ಚಾಟನೆಗೊಂಡಿರುವ ಟಿ.ಟಿ.ವಿ.ದಿನಕರನ್‌ಗೂ ಗಣನೀಯ ಪ್ರಮಾಣದಲ್ಲಿ ಹಣ ಸಂದಾಯವಾಗಿದೆ ಎಂದು ಹೇಳಲಾಗಿದೆ.
ಡಿಸಿಎಂ ಓ.ಪನ್ನೀರ್‌ಸೆಲ್ವಂಗೆ 2.5 ಕೋಟಿ ರೂ., ವಿದ್ಯುತ್ ಸಚಿವ ಪಿ.ತಂಗಮಣಿ, ಕೈಗಾರಿಕಾ ಸಚಿವ ಎಂ.ಸಿ.ಸಂಪತ್, ಇಂಧನ ಸಚಿವ ತಂಗಮಣಿ, ಅರಣ್ಯ ಸಚಿವ ದಿಂಡಿಗಲ್ ಶ್ರೀನಿವಾಸ, ಕಂದಾಯ ಸಚಿವ ಆರ್.ಬಿ.ಉದಯ ಕುಮಾರ್, ಆರೋಗ್ಯ ಸಚಿವ ವಿಜಯ ಭಾಸ್ಕರ್, ಪರಿಸರ ಸಚಿವ ಕೆ.ಸಿ.ಕರುಪ್ಪಣ್ಣಂ, ಶಾಸಕ ಕೃಷ್ಣಸ್ವಾಮಿ ಸೇರಿದಂತೆ ಪ್ರಮುಖರಿಗೆ ಹಣ ಸಂದಾಯವಾಗಿದೆ ಎಂದು ಡೈರಿಯಲ್ಲಿ ಉಲ್ಲೇಖವಾಗಿದೆ. ಡೈರಿಯಲ್ಲಿರುವ ವಿವರಗಳ ಬಗ್ಗೆ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡುವುದಾಗಿ ಡಿಎಂಕೆ ವಕ್ತಾರ ಶರವಣನ್ ಹೇಳಿದ್ದಾರೆ.