Advertisement
ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಸಮಾನ ಹುದ್ದೆಯಾದ ಅರಣ್ಯ ರಕ್ಷಕ ಹುದ್ದೆಯ ಸಂಬಳವು ಡಿ ದರ್ಜೆ ನೌಕರರ ಸಂಬಳಕ್ಕೆ ಸಮಾನವಾಗಿದೆ. ಇನ್ನು ಕಾಯಂ ಹಾಗೂ ದಿನಗೂಲಿ ಅರಣ್ಯ ವೀಕ್ಷಕರ ಸ್ಥಿತಿಯಂತೂ ಶೋಚನೀಯ. ವೇತನ ತಾರತಮ್ಯ ಒಂದು ಕಡೆಯಾದರೆ, ನಾಡು ಬಿಟ್ಟು ಕಾಡಿಗೆ ಹೋಗಿ ಅಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ವನ್ಯಜೀವಿ ಸಂರಕ್ಷಣಾ ಧಾಮಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಅರಣ್ಯ ಇಲಾಖೆ ನೀಡುತ್ತಿರುವ ಸೌಲಭ್ಯಗಳೂ ಕಡಿಮೆಯೇ. ಅದರಲ್ಲೂ ಮುಖ್ಯವಾಗಿ ವಸತಿ, ವಾಹನ, ಆಹಾರ-ಬಟ್ಟೆ ಪೂರೈಕೆಯಂತಹ ಅನೇಕ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ಇದರಿಂದಾಗಿ ಸರ್ಕಾರಿ ನೌಕರಿ ಎಂದೋಅಥವಾ ವನ್ಯ ಪ್ರಾಣಿ, ಕಾನನದ ವ್ಯಾಮೋಹದಲ್ಲಿಯೋ ಅರಣ್ಯ ಇಲಾಖೆ ಕೆಲಸಕ್ಕೆ ಸೇರಿದವರಿಗೆ ಕಾಲಕ್ರಮೇಣ ನಿರಾಸಕ್ತಿ ಮೂಡಿಸುತ್ತಿದೆ. ಸಾಕಷ್ಟು ಮಂದಿ ಅರ್ಧಕ್ಕೆ ವೃತ್ತಿ ಬಿಟ್ಟ ಅಥವಾ ಬದಲಾಯಿಸಿದ ಉದಾಹರಣೆಗಳೂ ಇವೆ. ಅರಣ್ಯ ಇಲಾಖೆಯು ಬಹುತೇಕ ವನ್ಯಜೀವಿ ಸಂರಕ್ಷಣಾಧಾಮಗಳಲ್ಲಿ ಕಾಯಂ ನೌಕರರಿಗಿಂತ ಮೂರು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ದಿನಗೂಲಿ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಎಲ್ಲಾ ಕಳ್ಳ ಬೇಟೆ ತಡೆ ಕೇಂದ್ರಗಳಂತೂ ಈ ದಿನಗೂಲಿ ಅರಣ್ಯ ವೀಕ್ಷಕರನ್ನೇ ಆಧರಿಸಿದೆ. ಸುಮಾರು 2 ಸಾವಿರ ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿರುವ ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ಸಂರಕ್ಷಣಾಧಾಮಗಳಲ್ಲಿ ನೂರಕ್ಕೂ ಕಡಿಮೆ ಕಾಯಂ ನೌಕರರಿದ್ದರೆ, 400ಕ್ಕೂ ಹೆಚ್ಚು ದಿನಗೂಲಿ ನೌಕರರಿದ್ದಾರೆ.
Related Articles
ವಾರದ ರಜೆಯನ್ನೂ ಪಡೆಯದೇ 24/7 ಕೆಲಸ ಮಾಡುವ ಅರಣ್ಯ ಸಿಬ್ಬಂದಿಗೆ ಯಾವುದೇ ವಿಶೇಷ ರಜೆ ಸೌಲಭ್ಯವಿಲ್ಲ. ಅದರಲ್ಲೂ ಚಾಮರಾಜನಗರ ವನ್ಯಜೀವಿ ಸಂರಕ್ಷಣಾಧಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಕಾಯಂ ನೌಕರರು ಉತ್ತರ ಕರ್ನಾಟಕ ಭಾಗದವರೇ ಆಗಿದ್ದು, ವಿಜಯಪುರ ಒಂದೇ ಜಿಲ್ಲೆಯ 50ಕ್ಕೂ ಹೆಚ್ಚು ಮಂದಿ ನೌಕರರು ಇದ್ದಾರೆ. 2-3 ತಿಂಗಳಿಗೊಮ್ಮೆ ಗರಿಷ್ಠ ಒಂದು ವಾರದ ಮಟ್ಟಿಗೆ ರಜೆ ಸಿಗುತ್ತದೆ. ಊರಿಗೆ ಹೋಗಲು ಬರುವ ಪ್ರಯಾಣವೇ ಮೂರು ದಿನವಾಗುತ್ತದೆ. ಸೇನಾ ಸಿಬ್ಬಂದಿಯಂತೆ ನಮಗೆ ಯಾವುದೇ ರಜೆ ಸೌಲಭ್ಯವಿಲ್ಲ ಎಂದು ಹೆಸರು ಹೇಳಲಿಚ್ಛಿಸದ ನೌಕರರೊಬ್ಬರು ಹೇಳುತ್ತಾರೆ.
Advertisement
ಸಿಬ್ಬಂದಿ ಸೌಲಭ್ಯ ಸೇರಿ ವನ್ಯಜೀವಿ ಸಂರಕ್ಷಣಾಧಾಮಗಳ ನಿರ್ವಹಣೆಗೆ ಸಾಕಷ್ಟು ಅನುದಾನ ಬೇಕಾಗುತ್ತದೆ. ಆದರೆ ನಮ್ಮಲ್ಲಿ ಅನುದಾನ ಕೊರತೆ ಇದ್ದು, ಮಳೆ ಸೇರಿ ಇತರೆ ಸಂಪನ್ಮೂಲಕ್ಕಾಗಿ ಕಾಡನ್ನು ಅವಲಂಬಿಸುವ ಸರ್ಕಾರ ಅನುದಾನ ನೀಡಲು ಹಿಂದೇಟು ಹಾಕುತ್ತಿದೆ. ಇನ್ನು ದಿನಗೂಲಿ ನೌಕರರ ವೇತನ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ಸಾಕಷ್ಟು ಬಾರಿ ತಂದಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ● ಏಡುಕೊಂಡಲು, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಲೆ ಮಹದೇಶ್ವರ ವನ್ಯಜೀವಿ ಅರಣ್ಯ ವಲಯ ● ಜಯಪ್ರಕಾಶ್ ಬಿರಾದಾರ್