Advertisement

ಪ್ಲಾಸ್ಟಿಕ್‌ ಬಳಕೆ ಮಿತಗೊಳಿಸಿ, ಪರಿಸರ ಸಂರಕ್ಷಿಸಿ

09:01 PM Nov 24, 2019 | Lakshmi GovindaRaj |

ಹಾಸನ: ಪ್ಲಾಸ್ಟಿಕ್‌ ಬಳಕೆಯನ್ನು ಮಿತಗೊಳಿಸಿ ಪರಿಸರವನ್ನು ಸಂರಕ್ಷಿಸಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ಹೇಳಿದರು. ಸಾಮಾಜಿಕ ಅರಣ್ಯ ವಿಭಾಗ, ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಹಾಸನ ಶಾಖೆ ಹಾಗೂ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಹೊಳೆನರಸೀಪುರದ ಗುಂಜೇವು ಅರಣ್ಯ ಪ್ರದೇಶದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಪ್ರಕೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಅರಣ್ಯ ಸಂರಕ್ಷಣೆ ಮಾಡಿ: ಅರಣ್ಯದಲ್ಲಿ ಜೀವ ವೈಧ್ಯತೆಯಿರುತ್ತದೆ. ಕಾಡ್ಗಿಚ್ಚಿಗೆ ಸಿಲುಕಿ ಹಲವು ಪ್ರಬೇಧಗಳು ನಾಶವಾಗುತ್ತದೆ, ಹಾಗಾಗಿ ಅರಣ್ಯವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅರಣ್ಯದಲ್ಲಿನ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಸಹಾಯವಾಣಿ 1926 ಕ್ಕೆ ಕರೆ ಮಾಡಿ ತಿಳಿಸಬಹುದು. ಪ್ರಕೃತಿಗೆ ನಾವು ಒಳಿತನ್ನು ಮಾಡಿದರೆ ಪರಿಸರವೂ ನಮ್ಮನ್ನು ಕಾಪಾಡುತ್ತದೆ. ಆದ್ದರಿಂದ ಪರಿಸರವನ್ನು ಸ್ವಚ್ಛ, ಸುಂದರವಾಗಿಟ್ಟುಕೊಳ್ಳೋಣ ಆಶಿಸಿದರು.

ವಿವಿಧ ಬೆಳೆಗಳ ಮಾಹಿತಿ: ಗುಂಜೇವು ಕೃಷಿ ಸಂಶೋಧನಾ ಕೇಂದ್ರದ ಡಾ.ನಾಗರಾಜ್‌ ಮಾತನಾಡಿ, ವಿವಿಧ ಬೆಳೆಗಳಲ್ಲಿ ಉಂಟಾಗಿರುವ ತೊಂದರೆ ಹಾಗೂ ಅವುಗಳ ನಿವಾರಣೆ ಕುರಿತು ಸಂಶೋಧನೆ ನಡೆಸಿ ರೈತರಿಗೆ ಮಾಹಿತಿ ನೀಡಲಾಗುತ್ತದೆ. ಒಟ್ಟು 352 ಎಕರೆ ಪ್ರದೇಶ ಹೊಂದಿರುವ ಸಂಶೋಧನಾ ಕೇಂದ್ರದಲ್ಲಿ ಬೆಳೆದಿರುವ ವಿವಿಧ ತಳಿಯ ರಾಗಿ, ಸೂರ್ಯಕಾಂತಿ, ಮಾವು, ಗೋಡಂಬಿಗಳ ಮಾಹಿತಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ಬೀಜ ಉತ್ಪಾದನೆ ಮೂಲಕ ಗುಣಮಟ್ಟದ ಬಿತ್ತನೆ ಬೀಜ ವಿತರಣೆಯನ್ನೂ ಮಾಡುತ್ತಿರುವುದಾಗಿ ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಸುಬ್ಬುಸ್ವಾಮಿ ಅವರು ಮಾತನಾಡಿ, ಕರೆಗಳ ಸಂರಕ್ಷಣೆ, ನೀರಿನ ಮಿತಬಳಕೆ ಕುರಿತು ಮಾಹಿತಿ ನೀಡಿದರು. ಮತ್ತೂಬ್ಬ ಸಂಪನ್ಮೂಲ ವ್ಯಕ್ತಿ ಚಂದನ್‌ ಮಾತನಾಡಿ ಪಠ್ಯ ಓದುವುದಕ್ಕಿಂತ ಅರಣ್ಯ ಪ್ರಾತ್ಯಕ್ಷಿಕೆ ಮುಖ್ಯ. ಪಕ್ಷಿಗಳು ಅಳಿವಿನಂಚಿನಲ್ಲಿವೆ. ಅವುಗಳನ್ನು ಉಳಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಕೇವಲ ಚಿತ್ರಗಳಲ್ಲಿ ಕಾಣಬೇಕಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಉಳಿಸೋಣ ಎಂದರು.

ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಹಾಸನ ಶಾಖೆ ಅಧ್ಯಕ್ಷ ಎಚ್‌.ಪಿ. ಮೋಹನ್‌, ಅರಸೀಕೆರೆ ಸಾಮಾಜಿಕ ವಲಯ ಅರಣ್ಯಾಧಿಕಾರಿ ಸುರೇಶ್‌, ರೆಡ್‌ಕ್ರಾಸ್‌ ಸಂಸ್ಥೆ ಹಾಸನ ಶಾಖೆ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ, ನಿರ್ದೇಶಕರಾದ ಎಸ್‌.ಎಸ್‌. ಪಾಷ, ಆಮ್ಜದ್‌ ಖಾನ್‌, ಕೆ.ಟಿ.ಜಯಶ್ರೀ, ನಿರ್ಮಲಾ, ನಾರಯಣಸ್ವಾಮಿ, ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿವರ್ಗ ಮತ್ತು ದೇವರ ಮುದ್ದನಹಳ್ಳಿಯ ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು. ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Advertisement

ಪರಿಸರಕ್ಕೆ ಪ್ಲಾಸ್ಟಿಕ್‌ ಮಾರಕ: ಪ್ಲಾಸ್ಟಿಕ್‌ ಕವರ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ಕಸದ ತೊಟ್ಟಿಗೆ ಹಾಕಬೇಕು. ಪ್ರಾಣಿಗಳು ಅವುಗಳನ್ನು ಸೇವಿಸಿದರೆ ಅವುಗಳ ಜೀರ್ಣಾಂಗವ್ಯೂಹಕ್ಕೆ ಅಡ್ಡಿ ಉಂಟಾಗಿ ಸಾವನ್ನಪ್ಪುತ್ತವೆ. ಹಾಗಾಗಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಅತಿ ಮುಖ್ಯ. ಆದಷ್ಟು ಮಣ್ಣಿನೊಳಗಿನ ಸೂಕ್ಷ್ಮಾಣುಗಳಿಂದಾಗಿ ಮಣ್ಣು ಫ‌ಲವತ್ತತೆ ಕಾಯ್ದುಕೊಂಡಿರುತ್ತದೆ. ಆದರೆ ಪ್ಲಾಸ್ಟಿಕ್‌ನಲ್ಲಿರುವ ಟಾಕ್ಸಿಕ್‌ ಅಂಶ ಭೂಮಿಯೊಳಗೆ ಸೇರಿದಾಗ ಮಣ್ಣಿನ ಫ‌ಲವತ್ತತೆ ನಾಶವಾಗುತ್ತದೆ. ಸಮುದ್ರದೊಳಗಿನ ಜೀವಿಗಳಿಗೂ ಈಗ ಆಪತ್ತು ಉಂಟಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next