ಬಂಟ್ವಾಳ: ಪುಂಜಾಲಕಟ್ಟೆ- ಮಡಂತ್ಯಾರು ಮೊದಲಾದ ಭಾಗಗಳಿಗೆ ತೆರಳುವ ಮಿನಿ ಪ್ಯಾಸೆಂಜರ್ ವಾಹನಕ್ಕೆ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲೇ ಅವಕಾಶ ನೀಡಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಿಲ್ದಾಣದಲ್ಲಿ ಬಸ್‌ಗಳೇ ನಿಲ್ಲುವುದಕ್ಕೆ ಸರಿಯಾದ ಅವಕಾಶ ಇಲ್ಲದೆ ಇರುವಾಗ ಇತರ ವಾಹನಗಳಿಗೆ ಯಾಕೆ ಅವಕಾಶ ಎಂದು ಪ್ರಶ್ನಿಸುತ್ತಿದ್ದಾರೆ.
ಮಂಗಳೂರಿನಿಂದ ಆಗಮಿಸಿ ಪುತ್ತೂರು, ಧರ್ಮಸ್ಥಳ, ಉಪ್ಪಿನಂಗಡಿ, ವಿಟ್ಲ ಸೇರಿದಂತೆ ಇತರ ದೂರದ ಊರುಗಳಿಗೆ ತೆರಳುವ ಬಸ್‌ಗಳು ಹೆದ್ದಾರಿ ಬದಿ ನಿಂತು ಜನರನ್ನು ಇಳಿಸಿ, ಹತ್ತಿಸಿಕೊಂಡು ಸಾಗುತ್ತಿವೆ. ಅವ್ಯವಸ್ಥೆಯಿಂದ ಕೂಡಿದ್ದ ಈ ಪ್ರದೇಶವನ್ನು ಕೆಲವು ಸಮಯಗಳ ಹಿಂದೆ ಯಷ್ಟೇ ದುರಸ್ತಿ ಮಾಡಿ ಪ್ರಯಾಣಿಕರಿಗೆ ನಿಲ್ಲುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಆದರೆ ಪ್ರಸ್ತುತ ಪ್ರಯಾಣಿಕರು ನಿಲ್ಲುವ ಪ್ರದೇಶದಲ್ಲಿ ಮಿನಿ ಪ್ಯಾಸೆಂಜರ್ ವಾಹನಗಳು ನಿಲ್ಲುತ್ತಿದ್ದು, ಬಸ್‌ಗಳಿಗೆ ಕಾಯುತ್ತಿರುವ ಪ್ರಯಾಣಿಕರಿಗೆ ತೊಂದರೆ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.
ಬಸ್‌ಗಳು ನಿಲ್ಲುವ ಸ್ಥಳದಲ್ಲಿ ಇತರ ವಾಹನಗಳು ಬಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಂತಿಲ್ಲ. ಆದರೆ ಬಿ.ಸಿ.ರೋಡ್‌ನಲ್ಲಿ ಪ್ಯಾಸೆಂಜರ್ ವಾಹನಗಳು ಬಸ್ ಗಳ ಮಧ್ಯಕ್ಕೆ ಬಂದು ಪ್ರಯಾಣಿಕರನ್ನು ಕರೆದುಕೊಂಡು ಹೋಗು ತ್ತಿರುವುದು ನಿಯಮಬಾಹಿರ ಎಂಬ ಮಾತುಗಳು ಕೇಳಿಬರುತ್ತಿದೆ.
ಅಂತಹ ಪ್ಯಾಸೆಂಜರ್ ವಾಹನಗಳು ಬಸ್ ನಿಲ್ದಾಣದ ಬಳಿ ನಿಲ್ಲದೆ ಹೆದ್ದಾರಿ ಬದಿಯಿಂದಲೇ ಪ್ರಯಾಣಿಕರನ್ನು ಹತ್ತಿಸಿ ಕೊಂಡು ಸಾಗಿದರೆ ಯಾವುದೇ ತೊಂದರೆ ಇಲ್ಲ. ಆದರೆ ಬಸ್‌ಗಳು ನಿಲ್ಲುವ ಸ್ಥಳದಲ್ಲೇ ನಿಂತು ತಾವು ತೆರಳುವ ಊರಿನ ಹೆಸರು ಹೇಳಿ ಪ್ರಯಾಣಿಕರನ್ನು ಕರೆಯುತ್ತಾರೆ. ಈ ರೀತಿ ನಿಲ್ದಾಣದ ಬಳಿ ನಿಲ್ಲುವುದಕ್ಕೆ ಅವಕಾಶ ನೀಡಬಾರದು ಎಂದು ಪ್ರಯಾಣಿಕರು ಪೊಲೀಸರಲ್ಲಿ ಆಗ್ರಹಿಸಿದ್ದಾರೆ.