Advertisement

ಉಪ ಸಮರದಲ್ಲಿ ಪ್ರತಿಷ್ಠೆಯ ಪಣ : ನಾಯಕತ್ವ ಸಾಮರ್ಥ್ಯಕ್ಕೆ ಸವಾಲು

12:22 AM Oct 12, 2020 | sudhir |

ರಾಜ್ಯ ರಾಜಕೀಯ ಇತಿಹಾಸದಲ್ಲಿ ಉಪ ಚುನಾವಣೆಗಳು ಸರಕಾರ ಹಾಗೂ ಪಕ್ಷಗಳಿಗೆ ಶಕ್ತಿ ತುಂಬಿದ ಜತೆಗೆ ರಾಜಕೀಯ ದಿಕ್ಕನ್ನೇ ಬದಲಿಸಿದ ಉದಾಹರಣೆಗಳೂ ಇವೆ. ಹಲವು ನಾಯಕರಿಗೆ ರಾಜಕೀಯ ಪುನರ್‌ಜನ್ಮ ದೊರೆತದ್ದೂ ಇದೆ. ಕೆಲವರು ಮೂಲೆ ಗುಂಪಾದದ್ದೂ ಇದೆ.

Advertisement

ಇದೀಗ ಮೂರೂ ರಾಜಕೀಯ ಪಕ್ಷಗಳ ಅಸ್ತಿತ್ವ ಸಾಬೀತುಪಡಿ­ಸುವ ಸವಾಲಿನ ಅನಿವಾರ್ಯವನ್ನು ಸೃಷ್ಟಿಸಿರುವ ಶಿರಾ ಹಾಗೂ ರಾಜರಾಜೇಶ್ವರಿ ಉಪ ಚುನಾವಣೆಗೆ “ಅಖಾಡ’ ಸಜ್ಜುಗೊಂಡಿದ್ದು ಸದ್ಯದಲ್ಲೇ ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯೂ ಎದುರಾಗ ಬಹುದು. ಸಂಖ್ಯಾಬಲದ ವಿಚಾರದಲ್ಲಿ ಈ ಚುನಾ ವಣೆಗಳ ಫ‌ಲಿತಾಂಶ ಕೇಂದ್ರ ಅಥವಾ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಗೆ ತೀರಾ ಮಹತ್ವದ್ದೇನೂ ಅಲ್ಲ. ಆದರೂ ಕೊರೊನಾ ಸಂದರ್ಭದಲ್ಲಿ ಎದು ರಾಗಿರುವ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಮೂರೂ ಪಕ್ಷಗಳಿಗೆ ರಾಜಕೀಯವಾಗಿ ಪ್ರತಿಷ್ಠೆಯ ವಿಚಾರವೇ.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಅನಂತರ ನಡೆದ ಹದಿನೈದು ಕ್ಷೇತ್ರಗಳ ಉಪ ಚುನಾವಣೆ­ಯಲ್ಲಿ 12 ಸ್ಥಾನಗಳನ್ನು ಗೆದ್ದು ಸರಕಾರ ಭದ್ರಪಡಿಸಿಕೊಳ್ಳಲಾಗಿದೆ­ಯಾದರೂ ಇದೀಗ ಎದುರಾಗಿರುವ ಎರಡು ಕ್ಷೇತ್ರಗಳ ಚುನಾ ವಣೆಯಲ್ಲಿ ಗೆಲ್ಲುವುದು ಯಡಿಯೂರಪ್ಪ ಅವರಿಗೆ ಮುಖ್ಯವಾಗಿದೆ. ಏಕೆಂದರೆ ಕೊರೊನಾ, ಪ್ರವಾಹ, ಆರ್ಥಿಕ ಸಂಕಷ್ಟದ ನಡುವೆಯೂ ಉತ್ತಮ ಆಡಳಿತ ನೀಡಿದ್ದೇವೆ ಎಂದು ಹೇಳುತ್ತಿರುವ ಅವರು ತಮ್ಮ ಆಡಳಿತಕ್ಕೆ ಮತದಾರರ ಮೆಚ್ಚುಗೆಯ ಮುದ್ರೆ ಒತ್ತಿಸಿಕೊಂಡು ಬೀಗಿಕೊಳ್ಳಲು ಚುನಾ­ವಣೆ ಗೆಲ್ಲಬೇಕಿದೆ. ವಿಧಾನಪರಿಷತ್‌ನಲ್ಲಿ ಬಹುಮತ ಇಲ್ಲದೆ ಹಿನ್ನೆಡೆ ಅನುಭವಿಸುತ್ತಿರುವ ಬಿಜೆಪಿಗೆ ಪರಿಷತ್‌ನ ನಾಲ್ಕು ಕ್ಷೇತ್ರಗಳ ಚುನಾವಣೆಯಂತೂ ಬಲವೃದ್ಧಿಗೆ ಅವಕಾಶ.

ಸಾಮರ್ಥ್ಯ ಸಾಬೀತು ಸವಾಲು
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ನೇಮಕಗೊಂಡ ಅನಂತರ ಎದುರಾಗಿರುವ ಮೊದಲ ಚುನಾವಣೆ ಇದಾಗಿದ್ದರಿಂದ ಅವರಿಗೆ ತಮ್ಮ ಸಾಮರ್ಥ್ಯ ತೋರಿಸಬೇಕಾದ ಸವಾಲು. ಮತ್ತೂಂದೆಡೆ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್‌ ಉಪ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದರೆ (ಎರಡೂ ಕ್ಷೇತ್ರಗಳಲ್ಲಿ ಒಕ್ಕಲಿಗರ ಮತ ನಿರ್ಣಾಯಕವಾಗಿರುವುದರಿಂದ) ಜೆಡಿಎಸ್‌ ಅಸ್ತಿತ್ವಕ್ಕೆ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೂ ಸತ್ವ ಪರೀಕ್ಷೆ.

ಈ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್‌ ಪ್ರಮುಖವಾಗಿ ಒಕ್ಕಲಿಗ “ಅಸ್ತ್ರ’ ಬಳಸುತ್ತಿರುವುದು ಸ್ಪಷ್ಟ. ಸಿಬಿಐ ದಾಳಿ ಅನಂತರದ ವಿದ್ಯಮಾನದಲ್ಲಿ ಡಿ.ಕೆ. ಶಿವಕುಮಾರ್‌ ಸಮುದಾಯದಲ್ಲಿ ಪ್ರಭಾವಿ ಯಂತೆ ಬಿಂಬಿತರಾಗುತ್ತಿದ್ದಾರೆ. ಖುದ್ದು ಸಮುದಾ­ಯದ ಸ್ವಾಮೀಜಿಗಳು ಡಿ.ಕೆ. ಶಿವಕುಮಾರ್‌ ಅವರ ಮನೆಯವ­ರಿಗೂ ಬಂದು ಧೈರ್ಯ ತುಂಬಿದ್ದಾರೆ. ಮೇಲ್ನೋಟಕ್ಕೆ ಇದು ಒಗ್ಗಟ್ಟಿನ ಸಂದೇಶ ಸಾರಿದಂತಿದೆ. ಎರಡೂ ಕ್ಷೇತ್ರಗಳ ಉಪ ಚುನಾವಣೆ ಹಾಗೂ ಹಳೇ ಮೈಸೂರು ಭಾಗದ ವಿಧಾನ ಪರಿಷತ್‌ನ ಒಂದು ಶಿಕ್ಷಕರ ಹಾಗೂ ಒಂದು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳೇ ನಿರ್ಣಾಯಕ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಈ ಮತಗಳನ್ನೇ ನೆಚ್ಚಿ ಕೊಂಡಿವೆ. ಹೀಗಾಗಿ ಈ ಚುನಾವಣೆ ಫ‌ಲಿತಾಂಶ ಒಂದು ರೀತಿಯಲ್ಲಿ ಡಿ.ಕೆ.ಶಿವಕುಮಾರ್‌ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರ ಸಮುದಾಯದ ಮೇಲಿನ ಹಿಡಿತ ಓರೆಗೆ ಹಚ್ಚುವಂತಿದೆ.

Advertisement

ಶಿರಾ ಜೆಡಿಎಸ್‌ ಗೆಲುವು ಸಾಧಿಸಿದ್ದ ಕ್ಷೇತ್ರ, ಅಲ್ಲಿ ಸತ್ಯನಾರಾಯಣ ಅವರ ಪತ್ನಿಗೆ ಟಿಕೆಟ್‌ ನೀಡಿ ಅನುಕಂಪದ ಮತಬ್ಯಾಂಕ್‌ಗೆ ಲಗ್ಗೆ ಹಾಕಿದೆ. ಈಗಿನ ಸನ್ನಿವೇಶದಲ್ಲಿ ಒಕ್ಕಲಿಗ ಸಮುದಾಯ ಎರಡೂ ಕಡೆ ಎಷ್ಟು ಪ್ರಮಾಣದಲ್ಲಿ ಯಾರ ಕೈ ಹಿಡಿಯಲಿದೆ ಎಂಬುದೂ ಕುತೂಹಲ ಮೂಡಿಸಿದೆ. ವಿಧಾನಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಪುಟ್ಟಣ್ಣ ಗೆದ್ದಿದ್ದರು. ಈಗ ಅವರು ಬಿಜೆಪಿ ಅಭ್ಯರ್ಥಿ. ಆಗ್ನೇಯ ಪದವೀಧರ ಕ್ಷೇತ್ರವೂ ಜೆಡಿಎಸ್‌ ಗೆಲುವು ಕಂಡಿದ್ದ ಕ್ಷೇತ್ರ. ಅಲ್ಲಿ ಜೆಡಿಎಸ್‌ ತ್ಯಜಿಸಿದ ರಮೇಶ್‌ಬಾಬು ಕಾಂಗ್ರೆಸ್‌ ಅಭ್ಯರ್ಥಿ. ಹೀಗಾಗಿ, ಎರಡೂ ಕಡೆ ಜೆಡಿಎಸ್‌ಗೆ ಮತ್ತೆ ಗೆದ್ದು, “ವ್ಯಕ್ತಿಗಳು ಹೋದರೂ ಪಕ್ಷದ ಅಸ್ತಿತ್ವ ಇದೆ’ ಎಂದು ಸಾಬೀತು ಮಾಡಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಇದೇ ಕಾರಣಕ್ಕೆ ಕುಮಾರಸ್ವಾಮಿಯವರು ಜಾತಿ ರಾಜಕಾರಣ ಬೇಡ, ನೇರ ರಾಜಕಾರಣ ಮಾಡಿ ಎಂದು ಡಿ.ಕೆ.ಶಿವಕುಮಾರ್‌ ಅವರಿಗೆ ಪರೋಕ್ಷವಾಗಿ ಸವಾಲು ಹಾಕುತ್ತಿದ್ದಾರೆ. ಜಾತಿ ಯಾಕೆ ಎಳೆದು ತರುತ್ತೀರಿ? ಹಿಂದೆಯೆಲ್ಲ ಜಾತಿ ಸಂಕಷ್ಟಕ್ಕೆ ಸಿಲುಕಿದಾಗ ಎಷ್ಟರ ಮಟ್ಟಿಗೆ ರಕ್ಷಣೆ ಮಾಡಿದ್ದೀರಿ ಎಂಬ ಪ್ರತ್ಯಸ್ತ್ರ ಪ್ರಯೋಗಿಸುತ್ತಿದ್ದಾರೆ. ಇನ್ನು, ಅಡೆjಸ್ಟ್‌ ಮೆಂಟ್‌ ರಾಜಕಾರಣದ ಪುಕಾರು ಜೋರಾಗಿಯೇ ಇದ್ದು ಚುನಾವಣೆ ಫ‌ಲಿತಾಂಶದ ಮೇಲೂ ಪರಿಣಾಮ ಬೀರಬಹುದು. ಫ‌ಲಿತಾಂಶದ ಅನಂತರ ವಷ್ಟೇ ಅದರ ಸ್ಪಷ್ಟತೆ ಸಿಗಲಿದೆ. ಆದರೆ ಅದು ಮಾಡುವ ಡ್ಯಾಮೇಜ್‌ ಕಡಿಮೆಯೇನಲ್ಲ.

ಪುನರ್‌ಜನ್ಮ
ರಾಜ್ಯದಲ್ಲಿ ಉಪಚುನಾವಣೆಗಳಿಗೆ ತನ್ನದೇ ಆದ ಇತಿಹಾಸವಿದೆ. ರಾಜಕೀಯ ಧ್ರುವೀಕರಣಕ್ಕೂ ಈ ಚುನಾವಣೆಗಳು ಕಾರಣವಾಗಿವೆ. ಹಲವು ರಾಜಕಾರ ಣಿಗಳ ಅದೃಷ್ಟ ಬದಲಿಸಿದ ಉದಾಹÃಣೆಗಳು ಇವೆ. 1978ರಲ್ಲಿ ಇಂದಿರಾ ಗಾಂಧಿ, 1999ರಲ್ಲಿ ಎಚ್‌.ಡಿ. ದೇವೇಗೌಡ, 2006ರಲ್ಲಿ ಸಿದ್ದರಾಮಯ್ಯ, 2008ರಲ್ಲಿ ಅನಿತಾ ಕುಮಾರಸ್ವಾಮಿ, ಪ್ರಿಯಾಕೃಷ್ಣ, 2013ರಲ್ಲಿ ಡಿ.ಕೆ. ಸುರೇಶ್‌, ರಮ್ಯಾ, 2018ರಲ್ಲಿ ವಿ.ಎಸ್‌.ಉಗ್ರಪ್ಪ, ಬಿ.ವೈ. ರಾಘವೇಂದ್ರ, ಶಿವರಾಮೇಗೌಡ, ಆನಂದ್‌ ನ್ಯಾಮಗೌಡ ಉಪಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದರು.
ಉಪ ಚುನಾವಣೆಗಳು ಆಯಾ ಕಾಲಕ್ಕೆ ಜಿದ್ದಾ ಜಿದ್ದಿ­ಯಾಗಿಯೇ ನಡೆದಿವೆ. ರಾಜಕೀಯವಾಗಿ ಒಂದೊಂದು ರೀತಿಯ ಸಂದೇಶಗಳನ್ನು ರವಾನಿ ಸಿವೆ. ಈಗಲೂ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಹಾಗೂ ವಿಧಾನಪರಿಷತ್‌ನ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರದ ಚುನಾವಣೆಯು ಒಂದು ರೀತಿಯಲ್ಲಿ ಜನಾಭಿ ಪ್ರಾಯದಂತೆ ಬಿಂಬಿತವಾಗುವುದರಿಂದ ಮೂರೂ ಪಕ್ಷಗಳು ಜಿದ್ದಿಗೆ ಬಿದ್ದಂತೆ ಹೋರಾಟಕ್ಕೆ ಇಳಿದಿವೆ.

ಅಗ್ನಿಪರೀಕ್ಷೆ ಸಮಯ
ರಾಜ್ಯ ರಾಜಕಾರಣದಲ್ಲಿ ಬಿ.ಎಸ್‌. ಯಡಿಯೂರಪ್ಪ, ಸಿದ್ದರಾಮಯ್ಯ ಎಚ್‌.ಡಿ. ಕುಮಾರಸ್ವಾಮಿ ಮೂರೂ ಪಕ್ಷಗಳಲ್ಲಿನ “ಐಕಾನ್‌’ಗಳು. ಇದೀಗ ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್‌ ಕ್ಯಾಪ್ಟನ್‌. ಕೆಪಿಸಿಸಿ ಅಧ್ಯಕ್ಷರಾದ ಅನಂತರ ಡಿ.ಕೆ. ಶಿವಕುಮಾರ್‌ ಸಹ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಿಕೊಳ್ಳುತ್ತಿ­ದ್ದಾರೆ. ಸಹಜವಾಗಿ ಈಗ ಎದುರಾಗಿರುವ ಚುನಾವಣೆ ಫ‌ಲಿತಾಂಶ ಅವರಿಗೆ ಒಂದು ರೀತಿಯಲ್ಲಿ ಅಗ್ನಿಪರೀಕ್ಷೆ. ಎಚ್‌.ಡಿ. ಕುಮಾರಸ್ವಾಮಿಯವರಿಗೂ ಸಮುದಾಯದ ಮತಬ್ಯಾಂಕ್‌ ದೃಷ್ಟಿಯಲ್ಲಿ ಈ ಚುನಾವಣೆ ಪ್ರತಿಷ್ಠೆ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಹಾಗೂ ಬಿಜೆಪಿಗೆ ಜಯದ ಓಟ ಮುಂದುವರಿಸುವ ತವಕ.
ಇವೆೆಲ್ಲದರ ನಡುವೆ, ಇಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ರಾಜಕೀಯ “ದಾಳ’ವೂ ಯಾವ ರೀತಿ ವರ್ಕ್‌ ಔಟ್‌ ಆಗಲಿದೆ ಎಂಬುದು ಕುತೂಹಲ.

– ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next