ಚಿಕ್ಕಮಗಳೂರು: ಮಲೆನಾಡಿನಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್‌ನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮಂಗಳವಾರ ಸಂಜೆ ಮಿನಿ ಬಸ್‌ನ ಪ್ರಾಯೋಗಿಕ ಸಂಚಾರ ನಡೆಸಿದರು.
ಕೊಟ್ಟಿಗೆಹಾರದಿಂದ ಚಾರ್ಮಾಡಿ ಗ್ರಾಮದವರೆಗೂ ಮಿನಿ ಬಸ್ ಸಂಚರಿಸಿದ್ದು ಕಡಿದಾದ ತಿರುವುಗಳಿರುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸುಗಮ ಬಸ್ ಸಂಚಾರ ಸಾಧ್ಯವೇ ಎಂಬುದನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿದರು.
ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಚಾರ್ಮಾಡಿ ಘಾಟ್‌ನ ಕೆಲ ತಿರುವುಗಳಲ್ಲಿ ಅಲ್ಲಲ್ಲಿ ಗುಡ್ಡ ಕುಸಿತವಾಗಿತ್ತು. ಕೆಲ ಕಡೆಗಳಲ್ಲಿ ರಸ್ತೆ ಕುಸಿದಿತ್ತು. ಒಂದು ತಿಂಗಳ ಕಾಲ ಎಲ್ಲಾ ವಾಹನ ಸಂಚಾರ ಸ್ಥಗಿತಗೊಳಿಸಿ ತಡೆಗೋಡೆ ಮತ್ತು ತಾತ್ಕಾಲಿಕವಾಗಿ ರಸ್ತೆ ದುರಸ್ತಿಗೊಳಿಸಲಾಗಿತ್ತು. ನಂತರ ಹಗಲು ವೇಳೆಯಲ್ಲಿ ಮಾತ್ರ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಬಸ್ ಸಂಚಾರ ಇಲ್ಲದೇ ಈ ಮಾರ್ಗದಲ್ಲಿ ಸಂಚರಿಸುವ ವಿದ್ಯಾರ್ಥಿಗಳು ಮತ್ತು ನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ತೊಂದರೆಯಾಗಿದ್ದು, ಮಿನಿ ಬಸ್ ಸಂಚರಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಅದರಂತೆ ಮಂಗಳವಾರ ಸಂಜೆ ಅಧಿಕಾರಿಗಳು ಚಾರ್ಮಾಡಿ ಘಾಟ್ ನಲ್ಲಿ ಮಿನಿ ಬಸ್ ಪ್ರಾಯೋಗಿಕ ಸಂಚಾರ ನಡೆಸಿದ್ದಾರೆ.
ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮಿನಿ ಬಸ್ ಸಂಚಾರಕ್ಕೆ ಸುರಕ್ಷಿತವಾಗಿದ್ದು, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಚಾರ್ಮಾಡಿ ಘಾಟ್‌ನಲ್ಲಿ ಮಿನಿ ಬಸ್ ಸಂಚಾರ ಆರಂಭಿಸುವ ಬಗ್ಗೆ ಮೇಲಾಧಿಕಾರಿಗಳು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ|ಬಗಾದಿ ಗೌತಮ್, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಮಿನಿಬಸ್ ಅನ್ನು ಘಾಟಿ ರಸ್ತೆಯಲ್ಲಿ ಓಡಿಸಿ ವರದಿ ಸಲ್ಲಿಸುವಂತೆ ತಿಳಿಸಲಾಗಿತ್ತು. ಅದರಂತೆ ಎರಡೂ ಇಲಾಖೆಯವರು ಸೇರಿ ಮಿನಿ ಬಸ್ ಅನ್ನು ಪ್ರಾಯೋಗಿಕವಾಗಿ ಓಡಿಸಿದ್ದಾರೆ. ಅವರು ವರದಿ ಸಲ್ಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.