Advertisement

ಕೆಆರ್‌ಎಸ್‌ ಬಳಿ ಕೇಳಿಬಂದದ್ದು ಗಣಿ ಸ್ಫೋಟ ಶಬ್ಧ!

06:00 AM Sep 28, 2018 | |

ಮಂಡ್ಯ: ಕೆಆರ್‌ಎಸ್‌ ಸುತ್ತಮುತ್ತ ಸೆ.25ರಂದು ನಡುಕ ಹುಟ್ಟಿಸಿದ ಭಾರೀ ಶಬ್ಧ ಎಲ್ಲಿಂದ ಬಂತು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಅದು ಪಾಂಡವಪುರ ತಾಲೂಕು ಬೇಬಿ ಬೆಟ್ಟದ ಕಾವಲ್‌ ಪ್ರದೇಶದಲ್ಲಿ ಆದ ಗಣಿ ಸ್ಫೋಟದಿಂದ ಎನ್ನುವುದು ಖಚಿತಪಟ್ಟಿದೆ.

Advertisement

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಂಡ್ಯ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ವರದಿಯಿಂದ ಈ ಅಂಶ ಬಹಿರಂಗಗೊಂಡಿದೆ. ಆ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಸುರಕ್ಷತೆ ಕುರಿತು ಪರಿಶೀಲನೆ ನಡೆಸಿ ಖಚಿತಪಡಿಸಿಕೊಳ್ಳುವುದು ಹಾಗೂ ಅಣೆಕಟ್ಟೆ ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಸರ್ವೆ ನಡೆಸಿ ಅಣೆಕಟ್ಟೆಗೆ ಅಪಾಯ ಸೃಷ್ಟಿಸುವ ಎಲ್ಲ ರೀತಿಯ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸ ರೆಡ್ಡಿ ನಿರ್ದೇಶನ ನೀಡಿದ್ದಾರೆ.

ಸೆ.25ರಂದು ಮಧ್ಯಾಹ್ನ 2.40ರ ಸಮಯದಲ್ಲಿ 6 ಸೆಕೆಂಡ್‌ಗಳ ಅಂತರದಲ್ಲಿ ಎರಡು ಬಾರಿ ಬೇಬಿ ಬೆಟ್ಟಲ್‌ ಕಾವಲ್‌ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ ಎಂದು ನಿಖರವಾಗಿ ಗುರುತಿಸಿರುವ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಉಪಗ್ರಹ ಚಿತ್ರಗಳು ಹಾಗೂ ಕಂಪನದ ಪ್ರಮಾಣ ದಾಖಲಾಗಿರುವ ಚಿತ್ರಗಳನ್ನು ವರದಿಯೊಂದಿಗೆ ಸಲ್ಲಿಸಿದೆ.

ಎರಡು ಗಣಿ ಸ್ಫೋಟ:
ಕೃಷ್ಣರಾಜಸಾಗರ ಜಲಾಶಯ ಸುತ್ತಮುತ್ತ ಸೆ.25ರಂದು ಯಾವುದೇ ರೀತಿಯ ಭೂಕಂಪನ ಸಂಭವಿಸಿಲ್ಲ. ಆದರೆ, ಎರಡು ಗಣಿ ಸ್ಫೋಟಗಳು  ಸಂಭವಿಸಿರುವುದು ಕೆಆರ್‌ಎಸ್‌ ಸಮೀಪ ಸ್ಥಾಪಿಸಿರುವ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ದಾಖಲಾಗಿದೆ. ಕೆಆರ್‌ಎಸ್‌ ಅಣೆಕಟ್ಟೆಯಿಂದ 10.5 ಕಿ.ಮೀ. ಅಂತರದಲ್ಲಿ ಈ ಸ್ಫೋಟ ಸಂಭವಿಸಿರುವುದಾಗಿ ತಿಳಿಸಿರುವುದಲ್ಲದೆ, ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಕಾವಲ್‌ ಪ್ರದೇಶದಲ್ಲೇ ಎರಡೂ ಸ್ಫೋಟಗಳು ಉಂಟಾಗಿದೆ ಎಂದು ನಿಖರವಾಗಿ ಗುರುತಿಸಿದೆ.
ಕೇವಲ ಆರು ಸೆಕೆಂಡ್‌ ಅಂತರದಲ್ಲಿ ಎರಡು ಗಣಿ ಸ್ಫೋಟ ಸಂಭವಿಸಿದೆ. ಒಂದು ಸ್ಫೋಟ ಮಧ್ಯಾಹ್ನ 2 ಗಂಟೆ 37 ನಿಮಿಷ 21 ಸೆಕೆಂಡ್‌ಗೆ ಸಂಭವಿಸಿದರೆ, ಮತ್ತೂಂದು ಸ್ಫೋಟ 2 ಗಂಟೆ 37 ನಿಮಿಷ 27 ಸೆಕೆಂಡ್‌ಗೆ ಸಂಭವಿಸಿದೆ. ಬದಲಾದ ತೀವ್ರತೆಯಿಂದ ಅದರ ಪ್ರಮಾಣವನ್ನು ಗಮನಿಸಲು ಸಾಧ್ಯವಾಗಿಲ್ಲ.

ಕೆಆರ್‌ಎಸ್‌ ಬಳಿ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸ್ಥಾಪನೆಯಾದಂದಿನಿಂದ ಸ್ಫೋಟ ಸಂಭವಿಸಿದ ಸೆ.25ರವರೆಗೆ ಈ ಪ್ರಮಾಣದ ಸ್ಫೋಟದ ತೀವ್ರತೆ ಎಂದೂ ಸಹ ದಾಖಲಾಗಿರಲಿಲ್ಲ. ಇದು ಗಣಿಗಾರಿಕೆ ಪ್ರದೇಶದಲ್ಲಿ ನಡೆದ ಸ್ಫೋಟದಿಂದ ಉಂಟಾಗಿರುವ ಶಬ್ಧ. ಇದಕ್ಕಾಗಿ ತೀವ್ರ ಪ್ರಮಾಣದ ಸ್ಫೋಟಕವನ್ನು ಬಳಕೆ ಮಾಡಲಾಗಿದೆ ಎಂದು ಉಲ್ಲೇಖೀಸಲಾಗಿದೆ.

Advertisement

ಭೂಕಂಪನವಾಗಿಲ್ಲ:
ಕೃಷ್ಣರಾಜಸಾಗರ ಜಲಾಶಯದ ಸುತ್ತ ಭೂಕಂಪ ಸಂಭವಿಸಿದ್ದಲ್ಲಿ ಅದಕ್ಕೆ ಸಮೀಪದಲ್ಲಿರುವ ಕೇಂದ್ರಗಳಾದ ಗುಂಡಾಲ್‌ ಅಣೆಕಟ್ಟು, ತಿಪ್ಪಗೊಂಡನಹಳ್ಳಿ, ಹಾರಂಗಿ ಹಾಗೂ ಹೇಮಾವತಿ ಅಣೆಕಟ್ಟುಗಳಲ್ಲಿರುವ ಕೇಂದ್ರಗಳಲ್ಲೂ ಅದು ದಾಖಲಾಗಬೇಕಿತ್ತು. ಸಾಮಾನ್ಯವಾಗಿ ಭೂಕಂಪನಗಳು 10 ಕಿ.ಮೀ. ಆಳದಲ್ಲಿ ರೂಪುಗೊಳ್ಳುತ್ತವೆ.  ಬೇರೆ ಯಾವ ಕಡೆಯೂ ಭೂಕಂಪನ ಆಗದಿರುವ ಕಾರಣ ಇದು ಭೂಕಂಪನವಲ್ಲ ಗಣಿ ಸ್ಫೋಟವೆಂದು ಗುರುತಿಸಿದ್ದು, ಸ್ಫೋಟದಿಂದ ಸೃಷ್ಟಿಯಾದ ಶಬ್ಧ 12 ರಿಂದ 15 ಕಿ.ಮೀ. ವ್ಯಾಪ್ತಿಯವರೆಗೆ ಹರಡಿದೆ ಎಂದು ತಿಳಿಸಿದೆ.

ಅಣೆಕಟ್ಟೆ ಸುರಕ್ಷತೆಯ ಪರಿಶೀಲನೆ ನಡೆಸಿ:
ಕೆಆರ್‌ಎಸ್‌ ಸುತ್ತ ನಡೆಯುತ್ತಿರುವ ಗಣಿಗಾರಿಕೆ ಹಾಗೂ ಸ್ಫೋಟದಿಂದ ಅಣೆಕಟ್ಟೆಗೆ ಅಪಾಯ ಉಂಟಾಗಿದೆಯೇ ಇಲ್ಲವೇ ಎಂಬುದನ್ನು ಈಗಲೇ ಪರಿಶೀಲನೆ ನಡೆಸಿ ಖಚಿತಪಡಿಸಿಕೊಳ್ಳುವುದು ಉತ್ತಮ. 

ಏಕೆಂದರೆ. ಕೃಷ್ಣರಾಜಸಾಗರ ಜಲಾಶಯ ನಿರ್ಮಾಣಗೊಂಡು 80 ವರ್ಷ ಕಳೆದಿದೆ. ಈ ಅಣೆಕಟ್ಟೆಯಿಂದ ನೂರಾರು ನಗರಗಳಿಗೆ ನೀರು ಪೂರೈಕೆಯಾಗುತ್ತಿದೆ. ಕರ್ನಾಟಕ ಹಾಗೂ ತಮಿಳುನಾಡಿನ ರೈತರ ವ್ಯವಸಾಯಕ್ಕೆ ಅನುಕೂಲ ಕಲ್ಪಿಸಿಕೊಟ್ಟಿದೆ. ಗಣಿಗಾರಿಕೆಯಿಂದ ಆಗಬಹುದಾದ ಅನಾಹುತಗಳ ಬಗ್ಗೆ ಪರಿಶೀಲನೆ ನಡೆಸುವುದು ಉತ್ತಮ ಎಂದು ತಿಳಿಸಿದೆ.

ಕೆಆರ್‌ಎಸ್‌ ಅಣೆಕಟ್ಟು ಸುರಕ್ಷಾ ಸಮಿತಿಯನ್ನು ರಚನೆ ಮಾಡಿ ಅಣೆಕಟ್ಟು ಸುತ್ತಲಿನ 20 ಕಿ.ಮೀ. ಸುತ್ತಳತೆಯಲ್ಲಿ ವೀಕ್ಷಣೆ ನಡೆಸಿ ಸರ್ವೆ ಮಾಡುವ ಮೂಲಕ ಅಣೆಕಟ್ಟೆಗೆ ಅಪಾಯ ಉಂಟುಮಾಡುವ ಎಲ್ಲ ರೀತಿಯ ಚಟುವಟಿಕೆಗಳನ್ನು ನಿಯಂತ್ರಿಸಬೇಕು ಎಂದು ನಿರ್ದೇಶನ ನೀಡಿದೆ.

9 ತಿಂಗಳ ದಾಖಲೆಗಳ ಪರಿಶೀಲನೆ:
ಈ ವರದಿ ನೀಡುವ ಸಂದರ್ಭದಲ್ಲಿ ಜನವರಿ 2018ರಿಂದ 25 ಸೆಪ್ಟೆಂಬರ್‌ 2018ರವರೆಗೆ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ಪ್ರಾದೇಶಿಕ ಭೂಕಂಪನ ಕೇಂದ್ರದ ವರದಿಯನ್ನು ಪಡೆದು ಜಿಲ್ಲಾಧಿಕಾರಿಗೆ ಸಲ್ಲಿಸಿದೆ.

ಅದರ ಪ್ರಕಾರ ಕರ್ನಾಟಕದ ವ್ಯಾಪ್ತಿಯ 1500 ಕಿ.ಮೀ. ಪ್ರದೇಶದಲ್ಲಿ 11 ಸಣ್ಣ ಪ್ರಮಾಣದ ಭೂಕಂಪನಗಳು ಹಾಗೂ ಹೊರಗೆ 40 ಭೂಕಂಪನಗಳು ಸಂಭವಿಸಿವೆ. ಇದರ ಜೊತೆಯಲ್ಲೇ ಎರಡು ಭಾರೀ ಪ್ರಮಾಣದ ಗಣಿ ಸ್ಫೋಟ ಸಂಭವಿಸಿರುವುದನ್ನು ಉಲ್ಲೇಖೀಸಿದೆ.

ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಕಾರ್ಯನಿರ್ವಹಣೆ ಏನು?
ಇದು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಸಂಯೋಜಿಕ ನೋಂದಾಯಿತ ಸ್ವಾಯತ್ತ ಸಂಸ್ಥೆ. ಈ ಕೇಂದ್ರ ಕರ್ನಾಟಕದ ವ್ಯಾಪ್ತಿಯಲ್ಲಿ ಭೂಮಿಯೊಳಗೆ ಸಂಭವಿಸುವ ಭೂಕಂಪನ ಹಾಗೂ ಗಣಿಗಾರಿಕೆ ಚಟುವಟಿಕೆಗಳ ಉಸ್ತುವಾರಿ ಮಾಡುತ್ತಿದೆ.
ಈ ಕೇಂದ್ರವನ್ನು 2009-10ರಲ್ಲಿ ಸ್ಥಾಪಿಸಲಾಗಿದೆ. ಉಡುಪಿಯಲ್ಲಿ ಒಂದು ವೀಕ್ಷಣಾ ಕೇಂದ್ರವೂ ಸೇರಿದಂತೆ ರಾಜ್ಯದಲ್ಲಿ 14 ಶಾಶ್ವತ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಅದರ ಒಂದು ಕೇಂದ್ರವನ್ನು ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟು ಸಮೀಪ 12.5.2011ರಲ್ಲಿ ತೆರೆಯಲಾಗಿದೆ. ಇದರ ಮುಖ್ಯ ನಿಯಂತ್ರಣಾ ಕೇಂದ್ರ ಬೆಂಗಳೂರಿನಲ್ಲಿದೆ.

ಭೂಕಂಪ ಹಾಗೂ ಗಣಿ ಸ್ಫೋಟದಿಂದ ಭೂಮಿಯೊಳಗೆ ಉಂಟಾಗುವ ಬದಲಾವಣೆಗಳು, ಕಂಪನದ ಪ್ರಮಾಣದ ಮಾಹಿತಿಯನ್ನು ವಿಶ್ಲೇಷಣೆ ಮಾಡುವುದಲ್ಲದೆ, ಸೂಕ್ಷ್ಮ ಅಂಶಗಳನ್ನು ಗುರುತಿಸಿ ತಾಂತ್ರಿಕ ವರದಿಯನ್ನು ಸಿದ್ಧಪಡಿಸಿ ಸಂಬಂಧಿಸಿದವರಿಗೆ ರವಾನಿಸುವ ಕೆಲಸವನ್ನು ಮಾಡುತ್ತಿದೆ.

ಬೆಂಗಳೂರು ನೀರು ಸರಬರಾಜು ಮಂಡಳಿಯ ಮನವಿಯ ಮೇರೆಗೆ ಬೆಂಗಳೂರು ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಯಿಂದ ತಿಪ್ಪಗೊಂಡನಹಳ್ಳಿ ಜಲಾಶಯ, ಅಲ್ಲಿನ ಕುಡಿಯುವ ನೀರಿನ ಬಗ್ಗೆ ಪ್ರತಿ ತಿಂಗಳೂ ಮಾಹಿತಿ ನೀಡುತ್ತಿದೆ. ಇದಕ್ಕಾಗಿ ತಿಪ್ಪಗೊಂಡನಹಳ್ಳಿ ಸಮೀಪ  ವೀಕ್ಷಣಾ ಕೊಠಡಿಯನ್ನು ತೆರೆದು 10 ಕಿ.ಮೀ. ವ್ಯಾಪ್ತಿಯಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ವಹಿಸಿದೆ.

ಸೆ.18ರ ಉದಯವಾಣಿಯ ವರದಿ ಉಲ್ಲೇಖ
ಗಣಿಗಾರಿಕೆ ಚಟುವಟಿಕೆಯಿಂದ ಕೃಷ್ಣರಾಜಸಾಗರ ಜಲಾಶಯದ ಮೇಲೆ ಉಂಟಾಗಬಹುದಾದ ಅಪಾಯದ ಕುರಿತು ಉದಯವಾಣಿ ದಿನಪತ್ರಿಕೆ ಸೆ.18ರಂದು ವರದಿ ಮಾಡಿತ್ತು. ಗಣಿ ಚಟುವಟಿಕೆಯಿಂದ ಕೆಆರ್‌ಎಸ್‌ ಅಣೆಕಟ್ಟೆ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ವರದಿ ಸಲ್ಲಿಸುವಂತೆ ಮಂಡ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ನಾಗಭೂಷಣ್‌ ಮನವಿ ಮಾಡಿದ್ದರು.

– ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next