Advertisement

ಮೈಂಡ್‌ಟ್ರೀ ಮತ್ತು ಐಟಿ ಇಲಾಖೆಯ ಮೈಂಡ್‌ ಗೇಮ್‌!

11:15 AM Jul 31, 2019 | Suhan S |

ಜನರಿಗೆ ನಿಶ್ಚಿಂತೆಯಿಂದ ಕಾಫಿ ಕುಡಿಯಲು ಸ್ಥಳಾವಕಾಶವನ್ನು ಕಲ್ಪಿಸಿ ಕೊಡುವ ವಿಶಿಷ್ಟ ಉದ್ಯಮವನ್ನು ಹುಟ್ಟುಹಾಕಿದ್ದ ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ಚಿಂತೆ ಹತ್ತಿಸಿಕೊಂಡಿದ್ದರು. ಒಂದೆಡೆ ಸಾಲದ ಪ್ರಮಾಣ ಏರುತ್ತಲೇ ಇತ್ತು. ಕಂಪನಿಗಳಲ್ಲಿ ತನ್ನ ಪಾಲನ್ನು ಮಾರಾಟ ಮಾಡುವ ಪ್ರಯತ್ನಗಳು ನಿರೀಕ್ಷಿತ ಯಶಸ್ಸು ಕಾಣುತ್ತಿರಲಿಲ್ಲ. ಇದರಾಚೆಗೂ ಇಡೀ ಉದ್ಯಮ ನಡೆದು ಬಂದ ರೀತಿ ಅತ್ಯಂತ ವಿಶಿಷ್ಟವಾದದ್ದು. ದೇಶದಲ್ಲಿ ಕಾಫಿ ಕುಡಿಯುವ ರೀತಿಯನ್ನು ಬದಲಿಸಿದ್ದು ಅವರು. ವಿದೇಶಗಳಲ್ಲಿ ಸ್ಟಾರ್‌ ಬಕ್ಸ್‌ ಹಾಗೂ ಇತರ ಕಾಫಿ ಕೆಫೆಗಳು ಜನಪ್ರಿಯವಾಗಿದ್ದರೂ ಭಾರತದಲ್ಲಿ ಇವೆಲ್ಲ ಕನಸು ಎಂದೇ ಹೇಳಲಾಗಿತ್ತು. ಆಗಲೇ ಬ್ರಿಗೇಡ್‌ ರೋಡ್‌ನ‌ಲ್ಲಿ ಶುರುವಾದ ಕಾಫಿ ಡೇ ದೇಶಾದ್ಯಂತ ಬೆಳೆದು ನಿಂತಿತು.

Advertisement

2017ರ ವರೆಗೂ ಸಿದ್ಧಾರ್ಥ ವಹಿವಾಟು ಅತ್ಯಂತ ಸರಾಗವಾಗಿಯೇ ನಡೆಯುತ್ತಿತ್ತು. ಒಂದೆಡೆ ಕಾಫಿ ಡೇ ಸಾಲದ ಪ್ರಮಾಣ ಹೆಚ್ಚಳವಾಗುತ್ತಿದ್ದರೆ, ಇನ್ನೊಂದೆಡೆ ಮೈಂಡ್‌ ಟ್ರೀಯಲ್ಲಿದ್ದ ಹೂಡಿಕೆ ಮೌಲ್ಯವೂ ಹೆಚ್ಚುತ್ತಿತ್ತು. ಹೀಗಾಗಿ ಒಟ್ಟು ವಹಿವಾಟು ನಿರ್ವಹಣೆಯಾಗುತ್ತಿತ್ತು. ಆದರೆ 2017ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಫಿ ಡೇಯ ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮತ್ತು ಮುಂಬೈ ಸೇರಿದಂತೆ ಹಲವೆಡೆ ಇರುವ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಆಗ ಸುಮಾರು 650 ಕೋಟಿ ರೂ. ವಹಿವಾಟಿನ ಲೆಕ್ಕವನ್ನು ಆದಾಯ ತೆರಿಗೆ ಇಲಾಖೆಗೆ ನೀಡದಿರುವುದು ಬೆಳಕಿಗೆ ಬಂದಿತ್ತು ಎನ್ನಲಾಗಿದೆ. ಆದಾಯ ತೆರಿಗೆ ಇಲಾಖೆಗೆ ನಾನು ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಒಂದು ವೇಳೆ ಬಾಕಿ ಇದ್ದರೂ, ಪಾವತಿ ಮಾಡಬೇಕಿರುವ ಎಲ್ಲ ಮೊತ್ತವನ್ನೂ ನಾನು ಪಾವತಿ ಮಾಡುತ್ತೇನೆ ಎಂದು ಸಿದ್ಧಾರ್ಥ ಹೇಳಿದ್ದರು. ಆದರೆ ಐಟಿ ಅಧಿಕಾರಿಗಳು ಮೈಂಡ್‌ ಟ್ರೀಯಲ್ಲಿನ ಶೇ. 4ರಷ್ಟು ಷೇರುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಆದರೆ ಇದೇ ವೇಳೆಗೆ ಮೈಂಡ್‌ಟ್ರೀಯಲ್ಲಿರುವ ಶೇ. 20ರಷ್ಟು ಷೇರುಗಳನ್ನು ಮಾರಾಟ ಮಾಡಲು ಸಿದ್ಧಾರ್ಥ ವಿವಿಧ ಉದ್ಯಮಗಳೊಂದಿಗೆ ಮಾತುಕತೆ ನಡೆಸುತ್ತಿದ್ದರು. ಹೀಗಾಗಿ ಬೇರೆ ಯಾವ ಸ್ವತ್ತನ್ನಾದರೂ ಮುಟ್ಟುಗೋಲು ಹಾಕಿಕೊಳ್ಳಿ. ಆದರೆ ಮೈಂಡ್‌ ಟ್ರೀಯನ್ನು ಮಾತ್ರ ಬಿಟ್ಟುಬಿಡಿ ಎಂದು ಐಟಿ ಅಧಿಕಾರಿಗಳಲ್ಲಿ ಅಲವತ್ತುಕೊಂಡಿದ್ದರು.

ನಂತರ ಐಟಿ ಅಧಿಕಾರಿಗಳು ಕೊನೆಗೂ ಸಿದ್ದಾರ್ಥರಿಂದ ಮುಚ್ಚಳಿಕೆ ಬರೆಸಿಕೊಂಡು ಮೈಂಡ್‌ಟ್ರೀ ಷೇರುಗಳನ್ನು ವಾಪಸ್‌ ಮಾಡಿ, ಅದೇ ಮೌಲ್ಯದ ಕೆಫೆ ಕಾμ ಡೇ ಷೇರುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಸಾಮಾನ್ಯವಾಗಿ ಆದಾಯ ತೆರಿಗೆ ಇಲಾಖೆಯು ತನಗೆ ಮೇಲ್ನೋಟಕ್ಕೆ ಪಾವತಿಯಾಗಬೇಕಿರುವ ತೆರಿಗೆ ಮೊತ್ತಕ್ಕೆ ಸಮಾನವಾದ ಸ್ವತ್ತನ್ನು ಆರೋಪಿಗಳಿಂದ ಜಪ್ತಿ ಮಾಡುತ್ತದೆ. ಒಂದು ವೇಳೆ ಪ್ರಕರಣ ಅಂತ್ಯಗೊಂಡ ಬಳಿಕ ವ್ಯಕ್ತಿ ತೆರಿಗೆ ಪಾವತಿಸದೇ ಇದ್ದರೆ, ಬಳಸುವ ಉದ್ದೇಶಕ್ಕೆ ಈ ಕ್ರಮವನ್ನು ಆದಾಯ ತೆರಿಗೆ ಇಲಾಖೆ ಅನುಸರಿಸುತ್ತದೆ. ಆದಾಯ ತೆರಿಗೆ ಮೈಂಡ್‌ಟ್ರೀ ಷೇರುಗಳನ್ನು ಬಿಡುಗಡೆ ಮಾಡಿದ ನಂತರದಲ್ಲಿ ಕೆಲವೇ ತಿಂಗಳುಗಳ ಹಿಂದೆ ಎಲ್‌ ಆ್ಯಂಡ್‌ ಟಿ ಕಂಪನಿಗೆ ತನ್ನ ಒಟ್ಟು ಶೇ. 20 ರಷ್ಟು ಷೇರುಗಳನ್ನು ಮಾರಾಟ ಮಾಡಿದ್ದರು. ಇದರಿಂದ ಬಂದ 3200 ಕೋಟಿ ರೂ. ಅನ್ನು ಕಾಫಿ ಡೇ ಸಾಲ ತೀರಿಸಲು ಸಿದ್ದಾರ್ಥ ಬಳಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next