Advertisement

ಮನಸೆಳೆದ ಸಾಂಸ್ಕೃತಿಕ ಕಲಾವೈಭವ

10:19 AM Jan 31, 2020 | mahesh |

ಬೆಳ್ತಂಗಡಿಯ ಭಾಲಾವಲೀಕಾರ್‌ ರಾಜಾಪುರ ಸಾರಸ್ವತ ಸಂಘ ಸಂಸ್ಥೆಗಳ ಕೇಂದ್ರೀಯ ಸಮಿತಿ ಆಶ್ರಯದಲ್ಲಿ ನಡೆದ ಶಿವಪುರ ಸುಬ್ಬಣ್ಣ ನಾಯಕ್‌ ಸಂಸ್ಮರಣೆಯಲ್ಲಿ ಬಡಗುತಿಟ್ಟಿನ ಯಕ್ಷಗಾನ ಪರಂಪರೆಯನ್ನು ಉಳಿಸಿಕೊಂಡು ಬಂದು ಸಂಪ್ರದಾಯದ ಚೌಕಟ್ಟಿನಲ್ಲಿ ಸುಂದರವಾಗಿಸಬಹುದಾದ ತಂಡದಿಂದಲೇ ಪ್ರದರ್ಶನ ಏರ್ಪಡಿಸಿದ್ದು ಒಂದು ಉತ್ತಮ ಬೆಳವಣಿಗೆ ಆಯಿತು. ಕಲಾಶ್ರೀ ಬಾಲಕಿಯರ ಯಕ್ಷಗಾನ ಮೇಳ – ಚೇರ್ಕಾಡಿಯವರಿಂದ “ಪ್ರಮೀಳಾರ್ಜುನ’ ಪ್ರದರ್ಶಿತವಾಯಿತು. ಇದರ ಪ್ರಮುಖ ರೂವಾರಿಗಳು ಶಶಿಕಲಾ ಪ್ರಭು ಮಂಜುನಾಥ ಪ್ರಭು ದಂಪತಿ.

Advertisement

ಅಪ್ಪಟ ಹಾರಾಡಿ ಶೈಲಿಯಲ್ಲಿ ಪ್ರದರ್ಶಿತವಾದ ಯಕ್ಷಗಾನದಲ್ಲಿ ಅರ್ಜುನ ಮತ್ತು ಪ್ರಮೀಳೆಯಾಗಿ ಪಾತ್ರವಹಿಸಿದವರು ನಿಮಿಷಾ ಹಾಗೂ ವೈಷ್ಣವಿ. ಇಬ್ಬರೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು. ಯಕ್ಷಗಾನ ಶೈಲಿಯ ಶ್ರುತಿಬದ್ಧ ಮಾತುಗಾರಿಕೆ, ಹಾರಾಡಿ ಶೈಲಿಯ ನೃತ್ಯ ಹಾಗೂ ನಿಲುವು, ಗತ್ತು, ಗಾಂಭೀರ್ಯ , ರಥದ ಕುಣಿತ , ಆಹಾರ್ಯ ಎಲ್ಲವೂ ಸಂಪ್ರದಾಯದ ಚೌಕಟ್ಟಿನಲ್ಲಿರುವುದನ್ನು ಗಮನಿಸಬಹುದಾಗಿತ್ತು. ಅಶ್ವದ ಬೆಂಗಾವಲಿಗೆ ಹೊರಡುವ ಅರ್ಜುನನು ‘ಕಾಲಪಾಳಯದಂತೆ’ ಪದಕ್ಕೆ ವಿಶಿಷ್ಟ ಕುಣಿತದ ಕ್ರಮವು ಇಂದು ಕಣ್ಮರೆಯಾಗಿದ್ದು ಈ ತಂಡದಲ್ಲಿ ನೋಡುವಂತಾದ್ದು ಕಲಾ ಪ್ರೇಮಿಗಳ ಸೌಭಾಗ್ಯ. ಯಕ್ಷಗಾನ ಕಾರ್ಯಕ್ರಮಗಳಿಗೆ ಸಾಮಾನ್ಯವಾಗಿ ವೇಷಭೂಷಣಗಳನ್ನು ಬಾಡಿಗೆಗೆ ತರುವುದೇ ಜಾಸ್ತಿ. ಆಗ ಎದುರಾಗುವ ಸಮಸ್ಯೆ ಎಂದರೆ ಕೆಲವೊಮ್ಮೆ ಪಾತ್ರಕ್ಕೆ ಸರಿಯಾದ ವೇಷಭೂಷಣ ದಿರಿಸುಗಳು ಸಿಗದೆ ಇದ್ದಾಗ ಯಾವುದೋ ಒಂದನ್ನು ಬಳಸಿ ಪಾತ್ರವನ್ನು ನಿರ್ವಹಿಸಬೇಕಾದ ಅನಿವಾರ್ಯತೆ. ಇದನ್ನು ಮನಗಂಡು ಶಶಿಕಲಾ ಪ್ರಭುಗಳು ವೇಷಭೂಷಣಗಳನ್ನು ತಾವೇ ತಯಾರಿಸಿಕೊಳ್ಳುವ ಕ್ರಮ ಶ್ರಮ ಮೆಚ್ಚಬೇಕಾದ್ದು. ಹೆಸರಾಂತ ಕಲಾವಿದರ ಕಾರ್ಯಕ್ರಮಗಳೊಂದಿಗೆ ಇಂತಹ ಪ್ರಯೋಗಗಳು ಅಲ್ಲಲ್ಲಿ ನಡೆಯುತ್ತಾ ಇದ್ದರೆ ಯಕ್ಷಗಾನದ ಮೂಲಕ್ರಮಗಳನ್ನು ಮುಂದಿನ ಪೀಳಿಗೆಗೆ ಕೊಂಡಿಯಾಗಿ ಮುಂದುವರೆಯಲು ಸಹಾಯ ಆಗಬಹುದು

Advertisement

Udayavani is now on Telegram. Click here to join our channel and stay updated with the latest news.

Next