Advertisement
ಕಲಬುರಗಿ ಮಹಾನಗರದಿಂದ 15 ಕಿ.ಮೀ. ದೂರದಲ್ಲಿರುವ ತಾಲೂಕಿನ ಮಿಣಜಗಿಯಲ್ಲೇ ಈ ವಿಶಿಷ್ಟ ಪದ್ಧತಿ ಜಾರಿಯಲ್ಲಿದೆ. ವರ್ಷಕ್ಕೊಮ್ಮೆ ಮಿಣಜಗಮ್ಮ ದೇವಿ ಜಾತ್ರೋತ್ಸವದಲ್ಲಿ ಕುಂಭ-ಕಳಸ (ಬಿಂದಿಗೆ) ಹೊರುವವರು ಮದುವೆಯಾಗಿರಬೇಕು. ಆದರೆ ಋತುಮತಿ ಆಗಿರಬಾರದು. ಅಂದರೆ ಬಾಲ ಮುತ್ತೆçದೆಯೇ ಆಗಿರಬೇಕು ಎಂಬುದು ಪದ್ಧತಿ.
Related Articles
Advertisement
ಕೊನೇ ಘಳಿಗೆಯಲ್ಲಿ ಸಿಕ್ಕ ಬಾಲ ಮುತ್ತೈದೆ!: ದಶಕಗಳ ಹಿಂದೆ ಮಿಣಜಗಮ್ಮ ದೇವಿ ಜಾತ್ರೆಯಲ್ಲಿ ಬಿಂದಿಗೆ ಹೊರಲೆಂದೇ ಮಿಣಜಗಿ ಗ್ರಾಮದಲ್ಲಿ ಬಾಲಕಿಯರಿಗೆ ಮದುವೆ ಮಾಡಿಸಿ ಬಿಂದಿಗೆ ಹೊರಿಸಲಾಗುತ್ತಿತ್ತು. ಬಿಂದಿಗೆ ಹೊತ್ತ ಬಾಲಕಿ ಸಂಸಾರ ಬಹಳ ಚೆನ್ನಾಗಿರುತ್ತದೆ ಎಂಬುದು ಜನರ ನಂಬಿಕೆ. ಇದಕ್ಕೆ ಗ್ರಾಮದ ಹಿರಿಯರು ಹಲವಾರು ಉದಾಹರಣೆ ನೀಡುತ್ತಾರೆ. ಆದರೆ ಬಾಲ್ಯ ವಿವಾಹ ಕಾನೂನಿಗೆ ವಿರುದ್ಧ ಎಂದು ಗೊತ್ತಾದ ನಂತರ ಮದುವೆ ನಿಂತು ಹೋದವು.
ಈಗ ಎಲ್ಲಾದರೂ ಬಾಲ್ಯ ವಿವಾಹವಾದ ಬಾಲ ಮುತ್ತೆçದೆಯನ್ನು ಹುಡುಕಿ ತಂದು ಬಿಂದಿಗೆ ಹೊರಿಸುವುದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಈ ವರ್ಷವಂತೂ ಮದುವೆಯಾಗಿ ಋತುಮತಿಯಾಗದ ಬಾಲಕನ್ಯೆ ಎಲ್ಲೂ ಸಿಗಲಿಲ್ಲ. ಜಾತ್ರೆ ಇನ್ನೂ ಎರಡು ದಿನ ಇರುವಾಗಲೇ ಮದುವೆಯಾದ 3ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ತಂದು ಬಿಂದಿಗೆ ಹೊರಿಸಿ ಜಾತ್ರಾ ಮಹೋತ್ಸವದ ಬಿಂದಿಗೆ ಕಾರ್ಯಕ್ರಮ ಮುಗಿಸಲಾಗಿದೆ.
7 ಹೆಣ್ಣು ಮಕ್ಕಳನ್ನು ಹೊಂದಿದ್ದ ತಂದೆ-ತಾಯಿ, ಮಗಳೊಬ್ಬಳಿಗೆ ಹತ್ತಿರದ ಸಂಬಂಧಿಯೊಬ್ಬರಿಗೆ ಬಾಲ್ಯದಲ್ಲೇ ಮದುವೆ ಮಾಡಿಸಿದ್ದು, ಅದನ್ನು ಪತ್ತೆ ಹಚ್ಚಿ ಬಿಂದಿಗೆ ಹೊರಿಸಲಾಗಿದೆ. ಆದರೆ ಬಾಲಕಿ ಹೆಸರು ಬಹಿರಂಗ ಮಾಡುವುದು ಸೂಕ್ತವಲ್ಲ ಎನ್ನುತ್ತಾರೆ ಗ್ರಾಮಸ್ಥರು. ಮಿಣಿಜಗಮ್ಮ ದೇವಾಲಯದಲ್ಲಿ ಜವುಳ ತೆಗೆಯುವುದು ಸೇರಿದಂತೆ ಇತರ ಕಾರ್ಯಕ್ರಮಗಳು ನಡೆದಿವೆ. ಆದರೆ ಮದುವೆ ಕಾರ್ಯಕ್ರಮಗಳು ಆಗಿಲ್ಲ.
ಪರಿಹಾರಕ್ಕೆ ನಡೆದಿದೆ ಸಜ್ಜು: ಇಂತಹ ಪದ್ಧತಿಯನ್ನು ಕಾಲಾನುಕಾಲದಿಂದ ಆಚರಣೆ ಮಾಡುತ್ತ ಬರಲಾಗಿದೆ. ಇನ್ಮುಂದೆ ಇದು ಕಠಿಣವಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಪರಿಹಾರ ಕಂಡುಕೊಳ್ಳುವುದು ಅಗತ್ಯವಿದೆ ಎನ್ನುತ್ತಾರೆ ಗ್ರಾಮದ ಪ್ರಜ್ಞಾವಂತ ಯುವಕರು-ಹಿರಿಯರು. ನಾಡಿನ ಖ್ಯಾತ ಮಠಾಧೀಶರು ಹಾಗೂ ಜಗದ್ಗುರುಗಳ ಬಳಿ ತೆರಳಿ ಪರಿಹಾರ ಕಂಡುಕೊಳ್ಳಲಾಗುವುದು ಎನ್ನುತ್ತಾರೆ.
ಅಕ್ಕಮಹಾದೇವಿ ವಚನದಂತೆ ಲಿಂಗ ದೀಕ್ಷೆ ಮಾಡಿಕೊಂಡರೆ ಶಿವನೇ ಪತಿ ಎನ್ನುವಂತೆ ಬಾಲಕಿಗೆ ಲಿಂಗ ದೀಕ್ಷೆ ಇಲ್ಲವೇ, ಶಿವದೀಕ್ಷೆ ಕೊಡಿಸಿ, ಅವಳಿಗೆ ಬಿಂದಿಗೆ ಹೊರಿಸಿಕೊಂಡು ಮುನ್ನಡೆಸಿಕೊಂಡು ಹೋದರೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಈಗಾಗಲೇ ನಾನಿದನ್ನು ಪ್ರಸ್ತಾಪಿಸಿದ್ದೇನೆ. ಕಾರ್ಯರೂಪಕ್ಕೆ ಬರಬೇಕಷ್ಟೇ.-ವೇದಮೂರ್ತಿ ಕರಬಸಯ್ಯ ಸ್ವಾಮಿ ಹಿರೇಮಠ, ಮಿಣಜಗಿ * ಹಣಮಂತರಾವ ಭೈರಾಮಡಗಿ