ಎಚ್.ಡಿ.ಕೋಟೆ: ಗಾಳಿಪಟಕ್ಕೆ ಅಳವಡಿಸಿದ್ದ ದಾರದಲ್ಲಿ ಸಿಲುಕಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮೈನಾ ಪಕ್ಷಿಯನ್ನು ಸಾರ್ವಜನಿಕರು ಹಾಗೂ ಸೆಸ್ಕ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಕೋಟೆ ಪಟ್ಟಣದ ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕ್ ಬಳಿ ಇರುವ ಭಾರೀ ಗಾತ್ರದ ಅರಳಿ ಮರದಕೊಂಬೆಯಲ್ಲಿ ಗಾಳಿಪಟದ ದಾರಕ್ಕೆ
ಮೈನಾ ಪಕ್ಷಿ ತನಗರಿವಿಲ್ಲದಂತೆ ಸುತ್ತಿಕೊಂಡಿತ್ತು. ಪಕ್ಷಿಯ ಕಾಲು ಮತ್ತು ರೆಕ್ಕೆಗೆ ಸಿಲುಕಿಕೊಂಡು ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಪರಿತಪಿಸುತ್ತಿತ್ತು.
ಹಾರಲಾರದೆ ಮರದ ಕೊಂಬೆಯಲ್ಲಿ ಸಿಲುಕಿಕೊಂಡಿದ್ದ ಮೈನಾ ಮೇಲೆ ಕಾಗೆಗಳು ದಾಳಿ ನಡೆಸಲು ಯತ್ನಿಸುತ್ತಿದ್ದವು. ಈ ದೃಶ್ಯ ಗಮನಿಸಿದ ಸಾರ್ವಜನಿಕರು ಕಾಗೆಗಳನ್ನು ಸ್ಥಳದಿಂದ ಓಡಿಸಿ ಪಕ್ಷಿ ರಕ್ಷಣೆಗೆ ಮುಂದಾದರು. ಭಾರೀ ಗಾತ್ರದ ಅರಳಿ ಮರದ ಮಧ್ಯದ ಕೊಂಬೆಗೆ ಸಿಲುಕಿ ಕೊಂಡಿದ್ದ ಮೈನಾ ಪಕ್ಷಿಯ ತಳಭಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿತ್ತು.
ಇದನ್ನೂ ಓದಿ:ಕಬಕ ಗ್ರಾ.ಪಂನಲ್ಲಿ ಗ್ರಾಮ ಸ್ವರಾಜ್ಯ ರಥ ಅಡ್ಡಿ – ಮೂವರು ವಶಕ್ಕೆ
ಪಕ್ಷಿ ರಕ್ಷಿಸಬೇಕಾದರೆ ವಿದ್ಯುತ್ ಲೈನ್ ಕಡಿತಗೊಳಿಸಬೇಕಾಗಿತ್ತು. ಅದರಂತೆ ಸಾರ್ವಜನಿಕರು ಸೆಸ್ಕ್ಗೆಕರೆ ಮಾಡಿ ವಿದ್ಯುತ್ ಸ್ಥಗಿತಗೊಳಿಸಿ ಮೈನಾ ಪಕ್ಷಿಯನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡರು. ಕೂಡಲೇ ಮಾರ್ಗ ದಾಳು (ಲೈನ್‌ಮ್ಯಾನ್) ನೂರುಲ್ಲಾ ವಿದ್ಯುತ್ ಸ್ಥಗಿತಗೊಳಿಸಿದ ಬಳಿಕ ಸ್ಥಳಕ್ಕೆ ಧಾವಿಸಿ ಕಂಬವನ್ನೇರಿದರು. ಅಲ್ಲಿಂದಲೇ ಪಕ್ಷಿ ಸಿಲುಕಿಕೊಂಡಿದ್ದ ಮರದ ಕೊಂಬೆಯನ್ನು ಕತ್ತರಿಸಬೇಕಿತ್ತು. ಕೊಂಬೆ ಕೆಳಗೆ ಬಿದ್ದರೆ ಪಕ್ಷಿಯೂ ಕೆಳಗೆ ಬಿದ್ದು ಸತ್ತು ಹೋಗುವ ಸಾಧ್ಯತೆ ಇತ್ತು.
ಹೀಗಾಗಿ ಸಾರ್ವಜನಿಕರು ಬ್ಲಾಂಕೇಟ್ ಗಳನ್ನು ಬಳಸಿ ಬಲೆಯ ಮಾದರಿಯಲ್ಲಿ ಪಕ್ಷಿ ಬೀಳುವ ಜಾಗಕ್ಕೆ ಅಡ್ಡಗಟ್ಟಿ ಹಿಡಿದು ಕೊಂಡರು. ಲೈನ್‌ಮಾನ್ ಕೊಂಬೆಯನ್ನು ಕತ್ತರಿಸುತ್ತಿದ್ದಂತೆ ಬ್ಲಾಂಕೇಟ್ ಮೇಲೆ ಪಕ್ಷಿ ಬಿದ್ದಿತ್ತು. ಬಳಿಕ ಜನರು ಪಕ್ಷಿಯನ್ನು ಹಿಡಿದುಕೊಂಡು ಕಾಲು ಮತ್ತು ರೆಕ್ಕೆಗೆ ಸಿಲುಕಿದ್ದ ದಾರ ಬಿಡಿಸಿ ಹಾರಿ ಹೋಗಲು ಅನುವು ಮಾಡಿಕೊಟ್ಟರು. ಸಾರ್ವಜನಿಕರು ಹಾಗೂ ಲೈನ್‌ಮ್ಯಾನ್ ಸತತ 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೈನಾ ಪಕ್ಷಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
-ಎಚ್.ಬಿ.ಬಸವರಾಜು