ಮನುಷ್ಯನನ್ನು ಬಹಳಷ್ಟು ವಿಧದಲ್ಲಿ ಅನುಕರಿಸುವ ರೋಬೋಟ್ ಒಬ್ಬಳು ಸಿಂಗಾಪುರದಿಂದ, ಭಾರತಕ್ಕೆ ಬಂದಿದ್ದಾಳೆ. ರೋಬೋಟ್‌ಗೆ ಸ್ತ್ರೀ- ಪುರುಷ ಎಂಬ ಲಿಂಗ ಇರುತ್ತದೆಯೇ ಎಂಬುದು ಈ ಸಮಯದಲ್ಲಿ ಏಳಬಹುದಾದ ಪ್ರಶ್ನೆ. ಇರುವುದಿಲ್ಲ ನಿಜ. ಆದರೆ ಈ ರೋಬೋಟ್ ಹೆಸರು ಸೋಫಿಯಾ. ಅದಕ್ಕೂ ಮಿಗಿಲಾಗಿ ಹಳೆಯ ಜಮಾನಾದ ಖ್ಯಾತ ಹಾಲಿವುಡ್ ತಾರೆ ಆಡ್ರೆ ಹೆಪ್‌ಬರ್ನ್ ಅವರಂತೆಯೇ ಈ ರೋಬೋಟ್‌ಅನ್ನು ವಿನ್ಯಾಸಗೊಳಿಸಲಾಗಿದೆ. ಸೋಫಿಯಾ ನಡೆಯಬಲ್ಲಳು, ಮಾತಾಡಬಲ್ಲಳು ಅ ಲ್ಲದೆ ಮನುಷ್ಯ ರೀತಿ ಭಾವನೆಗಳನ್ನು ವ್ಯಕ್ತಪಡಿಸಬಲ್ಲ ಸಾಮರ್ಥ್ಯವನ್ನೂ ಹೊಂದಿರುವಳು. ಅಂದ ಹಾಗೆ ಆಕೆ ಭಾರತಕ್ಕೆ ಬಂರಿರುವುದು ತಾಜ್‌ಮಹಲ್ ನೋಡಲಲ್ಲ ಅಥವಾ ಆನೆಯ ಮೇಲೆ ಸವಾರಿ ಹೋಗಲೂ ಅಲ್ಲ. ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದಿದ್ದಳು. ಅಲ್ಲಿ ಅವಳೇ ಕೇಂದ್ರಬಿಂದು.
ಸೋಫಿಯಾ ಮನುಷ್ಯನ ವರ್ತನೆಗಳನ್ನು ಗ್ರಹಿಸುತ್ತಾ ದಿನದಿಂದ ದಿನಕ್ಕೆ ಬುದ್ಧಿವಂತಳಾಗುತ್ತಿದ್ದಾಳೆ. ತಾನು ಕಲಿತದ್ದನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುತ್ತಲೂ ಇದ್ದಾಳೆ. ಇದೀಗ ಆಕೆ ಹೊಸದಾಗಿ ಕಲಿತಿರುವ ಕೌಶಲ್ಯವೆಂದರೆ ಚಿತ್ರ ಬಿಡಿಸುವುದು. ಕಲಾವಿದರು ನೀಡಿದ ಸೂಚನೆಗಳನ್ನು ಗ್ರಹಿಸಿ ಆಕೆ ಈ ಕೌಶಲ್ಯವನ್ನು ಸಂಪಾದಿಸಿದ್ದಾಳೆ. ಗುಂಪಿನಲ್ಲಿ ಯಾರಾದರೂ ತನ್ನ ಬಗ್ಗೆ ಮಾತಾಡಿದರೆ ಸೋಫಿಯಾ ಅದನ್ನು ಗ್ರಹಿಸಬಲ್ಲಳು. ಸೋಫಿಯಾ ಹುಟ್ಟಿ ಎರಡು ವರ್ಷಗಳೇ ಆಗಿವೆ. ಅಂದಿನಿಂದ ಇಂದಿನವರೆಗೆ ಹೊಸತನ್ನು ಕಲಿಯುತ್ತಳೇ ಬಂದಿದ್ದಾಳೆ.
ಅವಳ ಸೃಷ್ಟಿಯ ಅಸಂಖ್ಯ ಮಂದಿಯ ಪರಿಶ್ರಮವಿದೆ. ಆಕೆ ಇದುವರೆಗೂ ಭೇಟಿ ಮಾಡಿರುವ ಪ್ರತಿಯೊಬ್ಬರೂ ಅವಳ ಮೇಲೆ ಒಂದಿಲ್ಲೊಂದು ಪ್ರಭಾವ ಬೀರಿದ್ದಾರೆ. ಸೋಫಿಯಾಳ ತಲೆಯ ಭಾಗದಲ್ಲಿ ಏನಿಲ್ಲವೆಂದರೂ 60 ಮೋಟಾರ್‌ಗಳು ಕೆಲಸ ಮಾಡುತ್ತಿರುತ್ತವೆಯಂತೆ. ಆಕೆ ಪ್ರತಿಭಾವಂತ ಮಿಮಿಕ್ರಿ ಕಲಾವಿದೆಯೂ ಹೌದು. ಎದುರಿನ ವ್ಯಕ್ತಿಯ ಮುಖಭಾವ, ಮಾತಿನ ಧಾಟಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಅದನ್ನು ಅವಲು ನಕಲು ಮಾಡಬಲ್ಲಳು.
ರೋಬೋಟ್‌ಗಳಲ್ಲಿ ಹಲ ಪ್ರಕಾರಗಳಿವೆ. ಅವುಗಳಲ್ಲಿ ಸೋಫಿಯ “ಸೋಷಿಯಲ್ ಇಂಟೆಲಿಜೆನ್ಸ್’ ಪ್ರಕಾರಕ್ಕೆ ಸೇರುತ್ತಾಳೆ. ಅಂದರೆ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಅವರ ಉಪಯೋಗ ಹೆಚ್ಚು. ಆರೋಗ್ಯ ಕ್ಷೇತ್ರ, ಶಿಕ್ಷಣ, ಮನರಂಜನೆ ಮುಂತಾದ ಕ್ಷೇತ್ರಗಳಲ್ಲಿ ಸೋಫಿಯಾಳ ಪರಿಣತಿಯನ್ನು ಚೆನ್ನಾಗಿ ಬಳಸಿಕೊಳ್ಳಬಹುದು. ಭವಿಷ್ಯದ ಯಂತ್ರ ಮಾನವರು ಹೇಗಿರಬಹುದು ಎಂಬುದಕ್ಕೆ ಸೋಫಿಯಾಳಿಗಿಂತ ಸ್ಪಷ್ಟ ನಿದರ್ಶನ ಬೇಕಿಲ್ಲ.