ಬೆಂಗಳೂರು: ಸಾಕ್ಷ್ಯಚಿತ್ರಕ್ಕೆ 3.60 ಕೋಟಿ, ಊಟಕ್ಕೆ 3 ಕೋಟಿ, ಕಾಫಿ, ಟೀಗೆ 35 ಲಕ್ಷ… ಜಿಎಸ್‌ಟಿಗೇ 5 ಕೋಟಿ ರೂ…! ಇದು ವಿಧಾನಸೌಧದ ಅದ್ಧೂರಿ ವಜ್ರಮಹೋತ್ಸವ ನಡೆಸಲು ಬೇಕಾಗುವ ಹಣದ ಪ್ರಸ್ತಾವಿಕ ವೆಚ್ಚ. ವಿಧಾನಸಭೆ ಸಚಿವಾಲಯವು ಹಣಕಾಸು ಇಲಾಖೆಗೆ ಈ ಪ್ರಸ್ತಾಪವನ್ನು ಸಲ್ಲಿಸಿದ್ದು, ಸರ್ಕಾರ ಇನ್ನೂ ಒಪ್ಪಿಲ್ಲ. ಇದರ ನಡುವೆಯೇ ಕೋಟಿ ಕೋಟಿಗಳ ಅದ್ಧೂರಿ ವೆಚ್ಚಗಳು “ಚಿನ್ನದ ನಾಣ್ಯ ಮತ್ತು ಬೆಳ್ಳಿ ತಟ್ಟೆ’ಗಿಂತ ತುಸು ಹೆಚ್ಚೇ ಸದ್ದು ಮಾಡುತ್ತಿವೆ.
ಪ್ರತಿಪಕ್ಷಗಳ ಶಾಸಕರು ಮತ್ತು ಸಾರ್ವಜನಿಕರ ಕಡೆಯಿಂದ ಚಿನ್ನದ ನಾಣ್ಯ ಮತ್ತು ಬೆಳ್ಳಿ ತಟ್ಟೆಗಳನ್ನು ಉಡುಗೊರೆಯಾಗಿ ನೀಡುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದ್ಧೂರಿ ಕೊಡುಗೆ ಪ್ರಸ್ತಾಪವನ್ನು ಕೈಬಿಡಲಾಗಿದೆ. ಇದರ ನಡುವೆಯೇ, ಇದೇ ತಿಂಗಳ 25 ಮತ್ತು 26ರಂದು ನಡೆಯಲಿರುವ ವಜ್ರಮಹೋತ್ಸವಕ್ಕಾಗಿ ಬೇಕಾಗುವ “ಕೋಟ್ಯಂತರ’ ಹಣದ ಅಂದಾಜು ಪಟ್ಟಿ ಸಿದ್ಧ ಮಾಡಿರುವ ವಿಧಾನ ಸಭೆ ಸಚಿವಾಲಯ, ಇದನ್ನು ಸರ್ಕಾರಕ್ಕೆ ಕಳುಹಿಸಿದೆ.
ವೈಭವೋಪೇತ ಸಾಕ್ಷ್ಯಚಿತ್ರ!: ಉದಯವಾಣಿಗೆ ದೊರೆತ ಅಧಿಕೃತ ಮಾಹಿತಿ ಪ್ರಕಾರ ಎರಡು ದಿನಗಳ ವಿಶೇಷ ಅಧಿವೇಶನದ ಸಂದರ್ಭದಲ್ಲಿ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ವಿಧಾನಸೌಧ ಕಟ್ಟಡದ ಕುರಿತು ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಲಾಗಿದ್ದು, ಅದರ ವೆಚ್ಚ 1 ಕೋಟಿ ರೂ. ಎಂದು ತೋರಿಸಲಾಗಿದೆ. ಶಾಸನ ಸಭೆಗಳು ನಡೆದು ಬಂದ ಹಾದಿಯ ಕುರಿತು ಪ್ರಸಿದ್ಧ ನಿರ್ದೇಶಕ ಟಿ.ಎನ್. ಸೀತಾರಾಮ್ ನಿರ್ದೇಶನ ಮಾಡಿರುವ ಸಾಕ್ಷ್ಯ ಚಿತ್ರಕ್ಕೆ 1.58 ಕೋಟಿ ರೂ., ಇನ್ನು ಮಾಸ್ಟರ್ ಕಿಶನ್ ನಿರ್ದೇಶನದಲ್ಲಿ ಸಿದ್ಧಗೊಂಡಿರುವ ವಿಧಾನಸೌಧ ತ್ರಿಡಿ ವಚ್ಯುìವಲ್ ರಿಯಾಲಿಟಿ ಸಾಕ್ಷ್ಯಚಿತ್ರಕ್ಕೆ 1.02 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ.
ವಿಶೇಷವೆಂದರೆ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೇ ಆಗ 1.5 ಕೋಟಿ ರೂ. ವೆಚ್ಚ ಮಾಡಲಾಗಿತ್ತು ಎನ್ನಲಾಗಿದ್ದು, ಈಗ ಸಾಕ್ಷ್ಯ ಚಿತ್ರಕ್ಕೆ ಈ ಪ್ರಮಾಣದ ಹಣ ಬೇಕೇ ಎಂಬ ಪ್ರಶ್ನೆ ಮೂಡಿದೆ. ಇನ್ನು ವಿಧಾನಸೌಧ ಹಾಗೂ ಆವರಣದಲ್ಲಿರುವ ಗಣ್ಯರ ಪ್ರತಿಮೆಗಳಿಗೆ ಮಾಲಾರ್ಪಣೆ, ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕರ ಕೊಠಡಿ, ವಿಧಾನಸೌಧದ ಮುಖ್ಯ ದ್ವಾರಗಳ ಹೂವಿನ ಅಲಂಕಾರಕ್ಕೆ 75 ಲಕ್ಷ ರೂ.ಗಳ ಅಂದಾಜು ವೆಚ್ಚದ ಪಟ್ಟಿ ಮಾಡಲಾಗಿದೆ. ಸರ್ಕಾರದ ಸಾಧನೆ ಬಿಂಬಿಸುವ 3ಡಿ ಮ್ಯಾಪಿಂಗ್ ಪ್ರದರ್ಶನಕ್ಕೆ 3.04 ಕೋಟಿ ರೂ., ಎರಡು ದಿನದ ಮಧ್ಯಾಹ್ನದ ಊಟಕ್ಕೆ 10 ಸಾವಿರ ಜನರಿಗೆ 3.75 ಕೋಟಿ, ಕಾಫಿ, ಟೀಗೆ 35 ಲಕ್ಷ ರೂ. ವೆಚ್ಚವಾಗಲಿದೆ ಎಂದು ವಿಧಾನಸಭೆ ಸಚಿವಾಲಯ ಹಣಕಾಸು ಇಲಾಖೆಗೆ ನೀಡಿರುವ ಪ್ರಸ್ತಾವನೆಯಲ್ಲಿ ತಿಳಿಸಿದೆ.
ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮದ ವೇದಿಕೆ ನಿರ್ಮಾಣಕ್ಕೆ 3.50 ಕೋಟಿ, ಶಾಸಕರು ಹಾಗೂ ಎರಡೂ ಸದನಗಳ ಸಿಬ್ಬಂದಿಗೆ ನೆನಪಿನ ಕಾಣಿಕೆ ನೀಡಲು 3 ಕೋಟಿ, ಎರಡು ದಿನಗಳ ಕಾರ್ಯಕ್ರಮ ಪ್ರಚಾರಕ್ಕಾಗಿ 2 ಕೋಟಿ, ಕಾರ್ಯಕ್ರಮದ ಫೋಟೊ ಹಾಗೂ ವಿಡಿಯೋ ಮಾಡುವುದಕ್ಕೆ 75 ಲಕ್ಷ ವೆಚ್ಚ ಮಾಡುವುದಾಗಿ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಇದಕ್ಕಿಂತಲೂ ವಿಶೇಷ ಏನೆಂದರೆ, ಎರಡು ದಿನ ನಡೆಯುವ ಕಾರ್ಯಕ್ರಮದಲ್ಲಿ ಸ್ವಚ್ಚತೆ ಕಾಪಾಡಲು ನೇಮಕಗೊಳ್ಳುವ ಸಿಬ್ಬಂದಿಗೆ 50 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದೂ ಸಚಿವಾಲಯದ ಪ್ರಸ್ತಾವನೆಯಲ್ಲಿದೆ. ಇದರ ಜತೆಯಲ್ಲೇ ವಿಧಾನಸೌಧ ನಿರ್ಮಾಣ ಮಾಡಿರುವ ಮಾಜಿ ಮುಖ್ಯಮಂತ್ರಿಗಳ ಸವಿ ನೆನಪಿಗಾಗಿ ಕೆಂಗಲ್ ಹನುಮಂತಯ್ಯ, ಕೆ.ಸಿ. ರೆಡ್ಡಿ ಹಾಗೂ ಕಡಿದಾಳ ಮಂಜಪ್ಪ ಅವರ ಕುಟುಂಬದವರಿಗೆ ಸನ್ಮಾನ ಮಾಡಲು ಹಾಗೂ ರಾಜ್ಯದಲ್ಲಿ ಸುದೀರ್ಘ ರಾಜಕೀಯದಲ್ಲಿ ಸೇವೆ ಸಲ್ಲಿಸಿರುವ ಒಬ್ಬ ಗಣ್ಯರಿಗೆ ಸನ್ಮಾನ ಮಾಡಲು 10 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜು ಪಟ್ಟಿ ನೀಡಿದ್ದಾರೆ.
ಎರಡು ದಿನಗಳ ಕಾರ್ಯಕ್ರಮಕ್ಕೆ ಒಚ್ಚು 26.87 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಪ್ರಸ್ತಾವನೆಯಲ್ಲಿದೆ. ಇದರಲ್ಲಿ ಜಿಎಸ್ ಟಿಯೇ 5 ಕೋಟಿ ರೂ. ಇದೆ. ಎಲ್ಲ ಸೇವೆಗಳಿಗೂ ಶೇ.28ರ ತೆರಿಗೆ ಹಾಕಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಸಾಕ್ಷ್ಯಚಿತ್ರಗಳು
1. ಶಾಸನಸಭೆ ನಡೆದು ಬಂದ ದಾರಿ ನಿರ್ದೇಶಕ – ಟಿ.ಎನ್.ಸೀತಾರಾಂ ವೆಚ್ಚ – 1.58 ಕೋಟಿ ರೂ.
2. ವಿಧಾನಸಭೆ ಕಟ್ಟಡ ನಿರ್ದೇಶಕ- ಗಿರೀಶ್ ಕಾಸರವಳ್ಳಿ ವೆಚ್ಚ – 1 ಕೋಟಿ ರೂ.
3. ವಿಧಾನಸೌಧದ ತ್ರಿಡಿ ಎಫೆಕ್ಟ್ ನಿರ್ದೇಶಕ – ಮಾಸ್ಟರ್ ಕಿಶನ್ ವೆಚ್ಚ – 1.02 ಕೋಟಿ ರೂ
ಕೋಟಿ ಲೆಕ್ಕಾಚಾರ
ಹೂವು-ಹಾರ ಗಣ್ಯರ ಪ್ರತಿಮೆಗಳು, ದ್ವಾರ, ಕೊಠಡಿಗಳ ಅಲಂಕಾರ 75 ಲಕ್ಷ ರೂ.
ಸರ್ಕಾರದ ಸಾಧನೆ ಬಿಂಬಿಸಲು 3ಡಿ ಮ್ಯಾಪಿಂಗ… 3.04 ಕೋಟಿ ರೂ
ಎರಡು ದಿನದ ಊಟ (ಮಧ್ಯಾಹ್ನ ಮಾತ್ರ) 3.75 ಕೋಟಿ ರೂ
ಶಾಸಕರು, ಸಿಬ್ಬಂದಿಗೆ ನೆನಪಿನ ಕಾಣಿಕೆ ಕೋಟಿ ರೂ
ಎರಡು ದಿನದ ಕಾಫಿ/ಟೀ 35 ಲಕ್ಷ ರೂ
ವೇದಿಕೆ ನಿರ್ಮಾಣ 3.50 ಕೋಟಿ ರೂ
ಕಾರ್ಯಕ್ರಮ ಪ್ರಚಾರ 02 ಕೋಟಿ ರೂ
ಫೋಟೋ/ವಿಡಿಯೋ 75ಲಕ್ಷ ರೂ
ಸ್ವತ್ಛತಾ ಸಿಬ್ಬಂದಿಗೆ 50 ಲಕ್ಷ ರೂ
ಜಿಎಸ್‌ಟಿ(ಶೇ.28) 05 ಕೋಟಿ ರೂ
ಇನ್ವೆಸ್ಟ್ ಕರ್ನಾಟಕ ಕಾರ್ಯ ಕ್ರ ಮಕ್ಕೆ ಒಂದೇ ದಿನಕ್ಕೆ 54 ಕೋಟಿ ರೂಪಾಯಿ ವೆಚ್ಚ ಮಾಡಿದ್ದರು. ನಮ್ಮ ರಾಜ್ಯದ ಭವ್ಯ ಇತಿಹಾಸ ಸಾರುವ ಈ ಕಾರ್ಯಕ್ರಮಕ್ಕೆ 26 ಕೋಟಿ ಖರ್ಚು ಮಾಡೋದು ಜಾಸ್ತಿನಾ? ವೃಥಾ ವಿವಾದ ಸೃಷ್ಟಿಸಲಾಗುತ್ತಿದೆ
● ಕೆ ಬಿ ಕೋಳಿವಾಡ, ಸ್ಪೀಕರ್