ಗದಗ: ಖಾಸಗಿ ಹಣಕಾಸು ಸಂಸ್ಥೆಯೊಂದು ಕ್ಷಣದಲ್ಲೇ ಲಕ್ಷಾಂತರ ರೂಪಾಯಿ ಸಾಲ ಸೌಲಭ್ಯ ಕಲ್ಪಿಸುವುದಾಗಿ ರಸ್ತೆ ಬದಿಯಲ್ಲೇ ದಾಖಲೆ ಸಂಗ್ರಹಿಸುತ್ತಿದ್ದರಿಂದ ಸಾರ್ವಜನಿಕ ವಲಯದಲ್ಲಿ ಅನುಮಾನ ಹಾಗೂ ಆತಂಕಕ್ಕೆ ಕಾರಣವಾಯಿತು. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಶಹರ ಠಾಣೆ ಪೊಲೀಸರು, ಹಣಕಾಸು ಸಂಸ್ಥೆ ಅಧಿಕಾರಿಗಳನ್ನು ವಶಕ್ಕೆ ಪಡೆದ ಘಟನೆ ನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಆದರೆ, ಇತ್ತೀಚೆಗೆ ಕೆಲ ಖಾಸಗಿ ಹಣಕಾಸು ಸಂಸ್ಥೆಗಳ ವಂಚನೆ ಪ್ರಕರಣಗಳ ಹಿನ್ನೆಲೆಯಲ್ಲಿ ಅನುಮಾನಗೊಂಡ ಸ್ಥಳೀಯರು ಸಂಸ್ಥೆಯ ಅಧಿಕೃತತೆಯನ್ನು ಪ್ರಶ್ನಿಸಿದರೆ, ಮೊಬೈಲ್ ಪ್ಲೇಸ್ಟೋರ್‌ನಲ್ಲಿ ನಮ್ಮ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಅಗತ್ಯ ಮಾಹಿತಿ ಪಡೆದುಕೊಳ್ಳುವಂತೆ ಹಾರಿಕೆ ಉತ್ತರ ನೀಡುತ್ತಿದ್ದರು. ಅಧಿಕಾರಿಗಳ ಈ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಆಗಮಿಸಿದ ಶಹರ ಠಾಣೆ ಪಿಎಸ್‌ಐ ಹಾಗೂ ಸಿಬ್ಬಂದಿ ಖಾಸಗಿ ಹಣಕಾಸು ಸಂಸ್ಥೆಯ ಪ್ರತಿನಿಧಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
Advertisement
ಇಂಡಿಯಾ ಬುಲ್ಸ್ ಸಹಯೋಗದ ಧಾನಿ ಎಂಬ ಸಂಸ್ಥೆ ಇಲ್ಲಿನ ಗಂಗಾಪುರ ಪೇಟೆ ವೃತ್ತದಲ್ಲಿ ಶುಕ್ರವಾರ ಮಧ್ಯಾಹ್ನದಿಂದಲೇ ರಸ್ತೆ ಬದಿಯಲ್ಲಿ ಕುರ್ಚಿ-ಟೇಬಲ್ಗಳನ್ನು ಹಾಕಿಕೊಂಡು ತನ್ನ ಉತ್ಪನ್ನಗಳ ಪ್ರಚಾರದಲ್ಲಿ ತೊಡಗಿತ್ತು. ಅತ್ಯಂತ ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕ ಸಾಲ(ಪರ್ಸನಲ್ ಲೋನ್)ಗಳನ್ನು ಕೆಲವೇ ನಿಮಿಷಗಳಲ್ಲಿ ಮಂಜೂರು ಮಾಡಲಾಗುವುದು. ಅದಕ್ಕೆ ಗ್ರಾಹಕರು ಕೇವಲ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಝೆರಾಕ್ಸ್, ಪಾನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯೊಂದಿಗೆ ಜೋಡಣೆಯಾಗಿರುವ ಮೊಬೈಲ್ ನಂಬರ್ ನೀಡಬೇಕು ಎಂದು ಮಾಹಿತಿ ನೀಡಿ, ಜನರಿಗೆ ಅರ್ಜಿಗಳನ್ನು ವಿತರಿಸುತ್ತಿದ್ದರು. ಹೀಗಾಗಿ ಸುಲಭವಾಗಿ ಸಾಲ ದೊರೆಯುತ್ತದೆ ಎಂದು ಅನೇಕರು ಮುಗಿಬಿದ್ದಿದ್ದರು.
ಅಧಿಕೃತ ಖಾಸಗಿ ಫೈನಾನ್ಸ್ ಸಂಸ್ಥೆ:
ಆದರೆ, ಇದೊಂದು ಮೊಬೈಲ್ ಆಧಾರಿತ ಅಧಿಕೃತ ಖಾಸಗಿ ಫೈನಾನ್ಸ್ ಸಂಸ್ಥೆ ಎಂಬುದು ಪ್ರಾಥಮಿಕ ವಿಚಾರಣೆಯಿಂದ ಗೊತ್ತಾಗಿದೆ. ಈ ಸಂಸ್ಥೆಯ ಹಲವು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಹಯೋಗ ಹೊಂದಿದ್ದು, ಬೆಂಗಳೂರು, ಹುಬ್ಬಳ್ಳಿಯಲ್ಲೂ ಶಾಖೆಗಳನ್ನು ಹೊಂದಿದೆ. ಶೀಘ್ರವೇ ಗದಗಿನಲ್ಲೂ ಶಾಖೆಯೊಂದನ್ನು ಆರಂಭಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಅವರು ಈ ರೀತಿಯ ಅಭಿಯಾನಗಳನ್ನು ನಡೆಸುವ ಮುನ್ನ ಆಯಾ ಠಾಣೆಯಲ್ಲಿ ಪೂರ್ವಾನುಮತಿ ಪಡೆಯಬೇಕಿತ್ತು. ಈ ಕುರಿತು ತಪ್ಪೊಪ್ಪಿಗೆ ಪಡೆದು ಬಿಡುಗಡೆಗೊಳಿಸುವುದಾಗಿ ಶಹರ ಠಾಣೆ ಪಿಎಸ್‌ಐ ಸೋಮೇಶ ಗೆಜ್ಜೆ ಪತ್ರಿಕೆಗೆ ಮಾಹಿತಿ ನೀಡಿದರು.