ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬರಗಾಲದ ಪರಿಣಾಮ ಈ ವರ್ಷ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟಕ್ಕೆ ಜಿಲ್ಲೆಯ ಅನ್ನದಾತರು ತೀವ್ರ ನಿರಾಸಕ್ತಿ ತೋರಿದ್ದು, ಕಳೆದ ವರ್ಷದಲ್ಲಿ ನೋಂದಣಿ ಆಗಿದ್ದರ ಪೈಕಿ ಈ ವರ್ಷ ಅರ್ಧದಷ್ಟು ಕೂಡ ನೋಂದಣಿ ಆಗಿಲ್ಲ ಕಳೆದ ವರ್ಷ ಜಿಲ್ಲೆಯ ನೋಂದಣಿ ಕೇಂದ್ರಗಳಲ್ಲಿ ಬರೋಬ್ಬರಿ 8,738 ರೈತರು ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟಕ್ಕೆ ಸಮ್ಮತಿ ನೀಡಿ ಬರೋಬ್ಬರಿ 1,23,306 ಕ್ವಿಂಟಲ್ ರಾಗಿ ಮಾರಾಟಕ್ಕೆ ನೋಂದಾಯಿಸಿಕೊಂಡಿದ್ದರು. ಆದರೆ ಈ ವರ್ಷ 3,814 ರೈತರು ಮಾತ್ರ ರಾಗಿ ಮಾರಾಟಕ್ಕೆ ಹೆಸರು ನೋಂದಾಯಿಸಿಕೊಂಡಿದ್ದು, ಕೇವಲ 86,729 ಕ್ವಿಂಟಲ್ ರಾಗಿ ಮಾರಾಟಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಜಿಲ್ಲಾದ್ಯಂತ ಫೆ.5 ರವರೆಗೂ ಜಿಲ್ಲೆಯ ನೋಂದಣಿ ಕೇಂದ್ರಗಳಲ್ಲಿ ಜಿಲ್ಲೆಯ ರೈತರು ರಾಗಿ ಮಾರಾಟಕ್ಕೆ ಹೆಸರು ನೋಂದಾಯಿಸಿಕೊಂಡಿರುವ ಪ್ರಕಾರ ಚಿಂತಾಮಣಿಯಲ್ಲಿ 457, ಗುಡಿಬಂಡೆಯಲ್ಲಿ 674, ಶಿಡ್ಲಘಟ್ಟದಲ್ಲಿ 904, ಬಾಗೇಪಲ್ಲಿ 314, ಚಿಕ್ಕಬಳ್ಳಾಪುರ ದಲ್ಲಿ 1,124 ರೈತರು ಹಾಗೂ ಗೌರಿಬಿದನೂರು ತಾಲೂಕಿನಲ್ಲಿ 341 ರೈತರು ರಾಗಿ ಮಾರಾಟಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಇದೇ ಸಮಯಕ್ಕೆ ಕಳೆದ ವರ್ಷ ಜಿಲ್ಲೆಯಲ್ಲಿ 8,738 ರೈತರು ನೋಂದಣಿ ಮಾಡಿಸಿಕೊಳ್ಳುವ ಮೂಲಕ ರಾಗಿ ಮಾರಾಟಕ್ಕೆ ಒಪ್ಪಿಗೆ ಸೂಚಿಸಿದ್ದರು.
ಆದರೆ ಈ ವರ್ಷ ಜಿಲ್ಲಾದ್ಯಂತ ತೀವ್ರ ಬರಗಾಲ ಆವರಿಸಿರುವ ಪರಿಣಾಮ ಕಳೆದ ವರ್ಷ ಇದ್ದ ರಾಗಿಯನ್ನು ಬೆಂಬಲ ಬೆಲೆಗೆ ಮಾರಾಟ ಮಾಡಿರುವ ರೈತರು ಈ ವರ್ಷ ರಾಗಿ ಬೆಳೆ ಕೈ ಕೊಟ್ಟಿರು ಪರಿಣಾಮ ಉತ್ಪಾದನೆ ಕೂಡ ಕುಸಿತ ಕಂಡಿ ರುವುದರಿಂದ ಜಿಲ್ಲಾದ್ಯಂತ ಬೆಂಬಲ ಬೆಲೆ ಯೋಜನೆ ಯಡಿ ರಾಗಿ ಖರೀದಿ ಮಾಡುವ ಆಹಾರ ಇಲಾಖೆ ಕಾರ್ಯಕ್ರಮಕ್ಕೆ ರೈತರಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ.
ಅನ್ಯ ಜಿಲ್ಲೆ ಗಳ ರೈತರಿಂದ ರಾಗಿ ಖರೀದಿ: ಈಗಾಗಲೇ ಜಿಲ್ಲೆಯಲ್ಲಿ ಕಳೆದ ವರ್ಷ ರೈತರಿಂದ ಖರೀದಿಸಿದ್ದ ರಾಗಿ ನ್ಯಾಯಬೆಲೆ ಅಂಗಡಿಗಳ ಮೂಲಕ ಈಗಾಗಲೇ ಜಿಲ್ಲೆಯಲ್ಲಿ ಕಳೆದ ವರ್ಷ ರೈತರಿಂದ ಖರೀದಿಸಿದ್ದ ರಾಗಿ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಿದ್ದು, ಸದ್ಯ ತುಮಕೂರು ಮತ್ತಿತರ ಜಿಲ್ಲೆಗಳಿಂದ ರಾಗಿ ಖರೀದಿ ಪಡಿತರದಾರರಿಗೆ ಆಹಾರ ಇಲಾಖೆ ವಿತರಿಸುತ್ತಿದೆ. ಸದ್ಯ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟಕ್ಕೆ ರೈತರು ಮುಂದಾಗಿಲ್ಲ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ರಾಗಿ ವಿತರಣೆಗೆ ಕೊರತೆಯಾದರೆ ಅನಿರ್ವಾಯವಾಗಿ ಅಕ್ಕಿ ವಿತರಿಸಬೇಕಾಗುತ್ತದೆ. ಇದು ಆಹಾರ ಇಲಾಖೆಗೆ ಈಗಲೇ ತಲೆ ನೋವಾಗಿ ಪರಿಣಮಿಸಿದೆ. ಇನ್ನೂ ಕೇಂದ್ರ ಸರ್ಕಾರ ರಾಗಿಗೆ ಕ್ವಿಂಟಲ್ 3,846 ನಿಗದದಿಪಡಿಸಿದೆ. ಆದರೆ, ಮಾರುಕಟ್ಟೆಯಲ್ಲಿ ಅದಕ್ಕಿಂತ ಉತ್ತಮ ದರ ರೈತರಿಗೆ ಸಿಗುತ್ತಿದೆ.
– ಕಾಗತಿ ನಾಗರಾಜಪ್ಪ