Advertisement

ರಾಗಿ ಖರೀದಿ ಕೇಂದ್ರ: 1,966 ರೈತರು ನೋಂದಣಿ

09:22 PM Mar 04, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ರೈತರ ಅನುಕೂಲಕ್ಕಾಗಿ ರಾಗಿ ಬೆಳೆಗೆ ಬೆಂಬಲ ಬೆಲೆ ಘೋಷಿಸಿದರೂ ಖರೀದಿ ಕೇಂದ್ರಗಳ ತೆರೆಯುವುದು ವಿಳಂಬ ಹಾಗೂ ಪಹಣಿಯಲ್ಲಿನ ಹಲವು ಲೋಪದೋಷಗಳಿಂದ ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ಬೆಲೆ ಜಿಲ್ಲೆಯ ರೈತರ ಕೈ ತಪ್ಪಿದ್ದು ಲಕ್ಷಾಂತರ ರೈತರು ಇರುವ ಜಿಲ್ಲೆಯಲ್ಲಿ ರಾಗಿ ಮಾರಾಟಕ್ಕೆ ಖರೀದಿ ಕೇಂದ್ರಗಳಲ್ಲಿ ಇದುವರೆಗೂ ಕೇವಲ 1,966 ಮಂದಿ ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದಾರೆ.

Advertisement

ಜಿಲ್ಲೆಯಲ್ಲಿ 1.54 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಖುಷ್ಕಿ ಹಾಗೂ ನೀರಾವರಿ ಇದ್ದು, ಕಳೆದ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಕೈಕೊಟ್ಟರೂ ಹಿಂಗಾರು ಕೈ ಹಿಡಿದ ಪರಿಣಾಮ ರಾಗಿ ಬೆಳೆ ಹೆಚ್ಚಾಗಿ ಬೆಳೆದಿದ್ದರು. ಆದರೆ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ ರಾಗಿಗೆ 3,150 ರೂ. ಬೆಂಬಲ ಬೆಲೆ ಘೋಷಿಸಿದರೂ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸುವುದು ವಿಳಂಬ ಆದ್ದರಿಂದ ಈಗಾಗಲೇ ರೈತರು ಮಾರುಕಟ್ಟೆಯಲ್ಲಿ ರಾಗಿ ಮಾರಾಟ ಮಾಡಿರುವುದರಿಂದ ಖರೀದಿ ಕೇಂದ್ರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ರೈತರ ನೋಂದಣಿ ಆಗಿಲ್ಲ.

1,966 ಮಂದಿ ಮಾತ್ರ ನೋಂದಣಿ: ಜಿಲ್ಲೆಯಲ್ಲಿ ರಾಗಿ ಖರೀದಿ ಕೇಂದ್ರಗಳಲ್ಲಿ ರೈತರು ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು ಇದುವರೆಗೂ ಕೇವಲ 1,966 ಮಂದಿ ರೈತರು ಮಾತ್ರ ರಾಗಿ ಮಾರಾಟಕ್ಕೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದು, ನೋಂದಣಿಗೆ ಇನ್ನೂ ಮಾ.15 ರ ವರೆಗೂ ಮಾತ್ರ ಕಾಲವಕಾಶ ನೀಡಲಾಗಿದೆ. ರಾಗಿಯನ್ನು ತಂದು ಖರೀದಿ ಕೇಂದ್ರಗಳಲ್ಲಿ ಮಾರಾಟಕ್ಕೆ ಮಾ.31ರ ವರೆಗೂ ಅವಕಾಶ ನೀಡಲಾಗಿದೆ. ಕಳೆದ ಫೆ.29ಕ್ಕೆ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪೋರ್ಟಲ್‌ನಲ್ಲಿ ನೋಂದಣಿ ಆಗಿರುವ ಪ್ರಕಾರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ 241, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 698, ಚಿಂತಾಮಣಿ ತಾಲೂಕಿನಲ್ಲಿ 345, ಗೌರಿಬಿದನೂರ ತಾಲೂಕಿನಲ್ಲಿ 106 ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ 576 ರೈತರು ರಾಗಿ ಮಾರಾಟಕ್ಕೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ಪ್ರಚಾರದ ಕೊರತೆ: ಸಾಮಾನ್ಯವಾಗಿ ರಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕಾದರೆ ಚುನಾಯಿತ ಜನಪ್ರತಿನಿದಿಗಳ ಮೂಲಕ ಉದ್ಘಾಟಿಸಿ ಸಾಂಕೇತಿಕವಾಗಿ ರೈತರಿಂದ ಖರೀದಿ ಮಾಡಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರಾಗಿಯನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆಯಂತೆ ಖರೀದಿ ಕೇಂದ್ರಗಳನ್ನು ಆರಂಭಿಸಿದರೂ ಜಿಲ್ಲೆಯಲ್ಲಿ ಅದರ ಬಗ್ಗೆ ಸೂಕ್ತ ಪ್ರಚಾರ ಮಾಡಿಲ್ಲ. ಎಪಿಎಂಸಿ ಮಾರುಕಟ್ಟೆಗಳಲ್ಲಿ ಕಾಟಾಚಾರಕ್ಕೆ ಬ್ಯಾನರ್‌ಗಳನ್ನು ಅಳವಡಿಸಿರುವುದು ಬಿಟ್ಟರೆ ಗ್ರಾಪಂ ಮಟ್ಟದಲ್ಲಿ ಸೂಕ್ತ ಪ್ರಚಾರ ನಡೆಯದಿರುವುದು ಎದ್ದು ಕಾಣುತ್ತಿದ್ದು,

ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರಗಳ ಸ್ಥಾಪನೆಗೆ ನಿಗದಿಪಡಿಸಿರುವ ವೇಳಾ ಪಟ್ಟಿ ಅತ್ಯಂತ ಅವೈಜ್ಞಾನಕವಾಗಿರುವುದರಿಂದ ಬಹಳಷ್ಟು ರೈತರು ಈಗಾಗಲೇ ರಾಗಿ ಕಾಟಾವು ಮಾಡಿ ಕೈಗೆ ಬಂದ ಬೆಲೆಗೆ ಕ್ವಿಂಟಲ್‌ 2000, 2500 ರೂ.ಗೆ ಈಗಾಗಲೇ ಮಾರಾಟ ಮಾಡಿರುವುದರಿಂದ ಖರೀದಿ ಕೇಂದ್ರಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ರಾಗಿ ಖರೀದಿ ಆಗುತ್ತಿಲ್ಲ ಎನ್ನುವ ಮಾತು ಅಧಿಕಾರಿಗಳ ವಲಯದಲ್ಲಿಯೇ ಕೇಳಿ ಬರುತ್ತಿದೆ. ಇನ್ನೂ ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟ ತಾಲೂಕುಗಳ ರಾಗಿ ಖರೀದಿ ಕೇಂದ್ರಗಳನ್ನು ತಾಲೂಕಿನ ಕೇಂದ್ರ ಸ್ಥಾನದಲ್ಲಿ ಅದರಲ್ಲೂ ಎಪಿಎಂಸಿ ಆವರಣದಲ್ಲಿ ತೆರೆಯದೇ ನಗರದ ಹೊರ ಭಾಗದಲ್ಲಿ ತೆರೆಯಲಾಗಿದೆಯೆಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ.

Advertisement

ಒಟ್ಟು 1,604 ಕ್ವಿಂಟಲ್‌ ರಾಗಿ ಖರೀದಿ: ಜಿಲ್ಲೆಯಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ಮಾರುಕಟ್ಟೆ ಸಹಯೋಗದೊಂದಿಗೆ ಜಿಲ್ಲೆಯ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ತೆರೆದಿರುವ ರಾಗಿ ಖರೀದಿ ಕೇಂದ್ರಗಳಲ್ಲಿ ಇದುವರೆಗೂ ಒಟ್ಟು 1,604 ಕ್ವಿಂಟಲ್‌ ರಾಗಿ ಖರೀದಿ ಮಾಡಲಾಗಿದೆ. ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಒಟ್ಟು 43, ಚಿಂತಾಮಣಿಯಲ್ಲಿ 1, ಶಿಡ್ಲಘಟ್ಟ ತಾಲೂಕಿನಲ್ಲಿ 62 ರೈತರು ಮಾತ್ರ ರಾಗಿ ಖರೀದಿ ಕೇಂದ್ರಗಳಿಗೆ ಆಗಮಿಸಿ ರಾಗಿಯನ್ನು ಬೆಂಬಲ ಬೆಲೆಗೆ ಮಾರಾಟ ಮಾಡಿ ಹೋಗಿದ್ದಾರೆ. ಉಳಿದಂತೆ ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ತಾಲೂಕುಗಳಲ್ಲಿ ರೈತರು ಖರೀದಿ ಕೇಂದ್ರಗಳಿಗೆ ಆಗಮಿಸಿ ರಾಗಿ ಮಾರಾಟ ಮಾಡಿಲ್ಲ. ಚಿಂತಾಮಣಿ ತಾಲೂಕಿನಲ್ಲಿ 345 ಮಂದಿ ರೈತರು ಹೆಸರು ನೋಂದಣಿ ಮಾಡಿಸಿದ್ದರು ಒಬ್ಬ ರೈತರು ಮಾತ್ರ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿದ್ದಾರೆ.

ಜಿಲ್ಲೆಯಲ್ಲಿ ರೈತರಿಗೆ ಪಹಣಿಯದ್ದೇ ಸಮಸ್ಯೆ: ಜಿಲ್ಲೆಯಲ್ಲಿ ರೈತರಿಗೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರಗಳಲ್ಲಿ ರಾಗಿ ಮಾರಾಟಕ್ಕೆ ಆಸಕ್ತಿ ಇದ್ದರೂ ಪಹಣಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮಾಡಿರುವ ಎಡವಟ್ಟುನಿಂದ ಬಹಳಷ್ಟು ರೈತರು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಭರಪೂರ ರಾಗಿ ಬೆಳೆದಿದ್ದರೂ ರೈತರ ಪಹಣಿಗಳಲ್ಲಿ ಸಮರ್ಪಕವಾಗಿ ಬೆಳೆ ವಿವರ ನಮೂದಾಗದ ಕಾರಣ ಖರೀದಿ ಕೇಂದ್ರಗಳಲ್ಲಿ ಪಹಣಿ ನೀಡುವುದು ಕಡ್ಡಾಯ ಆಗಿರುವುದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಕೃಷಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಬಂದಿರುವ ಇಳುವರಿಯಂತೆ ಈ ವರ್ಷ 28 ಸಾವಿರ ಕ್ವಿಂಟಲ್‌ ರಾಗಿ ಖರೀದಿಗೆ ಅವಕಾಶ ಇದೆ. ಆದರೆ ಕೊನೆಯವರೆಗೂ ಎಷ್ಟು ರೈತರು ಬಂದು ಮಾರಾಟ ಮಾಡುತ್ತಾರೋ? ಎಷ್ಟು ಕ್ವಿಂಟಲ್‌ ರಾಗಿ ಖರೀದಿ ಆಗುತ್ತದೆ ಎಂಬುದನ್ನು ಈಗಲೇ ಹೇಳಕ್ಕೆ ಆಗುವುದಿಲ್ಲ. ಕೊನೆಯಲ್ಲಿ ಗೊತ್ತಾಗುತ್ತದೆ. ಫೆ.29ರ ತನಕ ಒಟ್ಟು 1,966 ಮಂದಿ ರೈತರು ರಾಗಿ ಮಾರಾಟಕ್ಕೆ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ 106 ಮಂದಿ ರೈತರು 1,604 ಕ್ವಿಂಟಲ್‌ನಷ್ಟು ರಾಗಿ ಮಾರಾಟ ಮಾಡಿದ್ದಾರೆ.
-ಸೋಮಶಂಕರಪ್ಪ, ಪ್ರಭಾರಿ ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

ರೈತರ ನೋಂದಣಿ (ಫೆ.29ಕ್ಕೆ)
ಬಾಗೇಪಲ್ಲಿ 241
ಚಿಕ್ಕಬಳ್ಳಾಪುರ 698
ಚಿಂತಾಮಣಿ 345
ಗೌರಬಿದನೂರು 106
ಶಿಡ್ಲಘಟ್ಟ 576
ಗುಡಿಬಂಡೆ 00

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next