Advertisement

ಮಿಲೆಟ್‌ ಮ್ಯಾನ್‌ ಸತೀಶ್‌ ನಿಧನ; 2 ದಶಕಗಳ ಕಾಲ ದೂರದರ್ಶನದಲ್ಲಿ ಕರ್ತವ್ಯ

07:56 PM Mar 19, 2023 | Team Udayavani |

ಹೈದರಾಬಾದ್‌: ದೇಶದಲ್ಲಿ ಸಿರಿಧಾನ್ಯವನ್ನು ಜನಪ್ರಿಯಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿ “ಮಿಲೆಟ್‌ ಮ್ಯಾನ್‌’ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪಿ.ವಿ.ಸತೀಶ್‌ (77) ಹೈದರಾಬಾದ್‌ನಲ್ಲಿ ಭಾನುವಾರ ನಿಧನರಾಗಿದ್ದಾರೆ.

Advertisement

ಅವರು ದೀರ್ಘ‌ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಮೂಲತಃ ಮೈಸೂರಿನವರಾಗಿದ್ದರೂ, ಅವರ ಶಿಕ್ಷಣ ಮತ್ತು ಕಾರ್ಯಕ್ಷೇತ್ರ ಕರ್ನಾಟಕದಿಂದ ಹೊರಗೇ ಇದ್ದಿತ್ತು. ಸತೀಶ್‌ ಅವರು, ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಸ್ತಾಪುರ ಗ್ರಾಮದಲ್ಲಿ ಡೆಕ್ಕನ್‌ ಡೆವಲಪ್‌ಮೆಂಟ್‌ ಸೊಸೈಟಿ (ಡಿಡಿಎಸ್‌)ಯ ಸಂಸ್ಥಾಪನೆ ಮಾಡಿ, ಅದರ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಸಿರಿಧಾನ್ಯಗಳ ಬೆಳೆ, ಪರಿಸರ ಸಹ್ಯ ಕೃಷಿ, ಆರ್ಥಿಕವಾಗಿ ಮಿತವ್ಯಯಿಯಾಗಿರುವ ಸಿರಿಧಾನ್ಯಗಳ ಬೆಳೆಯನ್ನು ಅವರು ಜನಪ್ರಿಯಗೊಳಿಸಿದ್ದರು. ಜತೆಗೆ ಅದನ್ನು ಡಿಡಿಎಸ್‌ ಮೂಲಕ ವಿತರಿಸುವ ವ್ಯವಸ್ಥೆಯನ್ನೂ ಮಾಡಿದ್ದರು.

ತೆಲಂಗಾಣದ 75 ಗ್ರಾಮಗಳಲ್ಲಿ ಸಿರಿಧಾನ್ಯಗಳ ಬೆಳೆ ಜನಪ್ರಿಯಗೊಳಿಸುವಿಕೆ, ದೇಶಾದ್ಯಂತ ಅದನ್ನು ಪ್ರಚಾರಗೊಳಿಸುವ ನಿಟ್ಟಿನಲ್ಲಿ ಮಿಲೆಟ್‌ ನೆಟ್‌ವರ್ಕ್‌ ಆಫ್ ಇಂಡಿಯಾ (ಎಂಐಎನ್‌ಐ) ಸಂಘಟನೆ ಸ್ಥಾಪಿಸಿದ್ದರು. ದೇಶದ ಮೊದಲ ಸಮುದಾಯ ಆಧಾರಿತ ಮಾಧ್ಯಮ ಟ್ರಸ್ಟ್‌ ಶುರು ಮಾಡಿದ ಹೆಗ್ಗಳಿಕೆ ಅವರದ್ದು.

1945ರಲ್ಲಿ ಮೈಸೂರು ಜಿಲ್ಲೆಯಲ್ಲಿ ಜನಿಸಿದ್ದ ಪಿರಿಯಾಪಟ್ಟಣ ವೆಂಕಟಸುಬ್ಬಯ್ಯ ಅವರು ನವದೆಹಲಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮಾಸ್‌ ಕಮ್ಯುನಿಕೇಷನ್‌ನಿಂದ ಪದವಿ ಪಡೆದಿದ್ದರು. ಎರಡು ದಶಕಗಳ ಕಾಲ ದೂರದರ್ಶನದಲ್ಲಿ ಕೆಲಸ ಮಾಡಿದ್ದರು. 1970ರಲ್ಲಿ ಜನಪ್ರಿಯವಾಗಿದ್ದ ಸ್ಯಾಟಲೈಟ್‌ ಇನ್‌ಸ್ಟ್ರಕ್ಷನಲ್‌ ಟೆಲಿವಿಷನ್‌ ಎಕ್ಸ್‌ಪರಿಮೆಂಟ್‌ (ಎಸ್‌ಐಟಿಇ) ಅನ್ನು ಸಿದ್ಧಪಡಿಸಿ ಪ್ರಸಾರ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಅವರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next