Advertisement

ಬೀಫ್ ಫೆಸ್ಟ್‌ ವಿರೋಧಿಸಿ ಮಿಲ್ಕ್ ಫೆಸ್ಟ್‌

12:51 PM Jun 12, 2017 | Team Udayavani |

ಬೆಂಗಳೂರು: ಬೀಫ್ ಫೆಸ್ಟ್‌ ವಿರೋಧಿಸಿ ಭಾರತೀಯ ಗೋ ಸಂತತಿ ರಕ್ಷಿಸಲು ಹೊಸನಗರ ರಾಮಚಂದ್ರಾಪುರ ಮಠದ ವತಿಯಿಂದ “ಹಾಲು ಹಬ್ಬ’ ಎಂಬ ಸಾತ್ವಿಕ ಹೋರಾಟ ಆರಂಭಿಸಿರುವುದಾಗಿ ಮಠದ ಪೀಠಾಧಿಪತಿಗಳಾದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.

Advertisement

ಹಂಪಿನಗರದ ಶ್ರೀ ಭಾರತೀ ವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಾಲು ಹಬ್ಬ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಮಿಲ್ಕ್ ಫೆಸ್ಟ್‌ ಮೂಲಕ ಬೀಫ್ ಫೆಸ್ಟ್‌ಗೆ ವಿರುದ್ಧವಾಗಿ ಸಾತ್ವಿಕ ಪ್ರತಿಭಟನೆ ಮಾಡುತ್ತಿದ್ದೇವೆ. ದೇಶದಲ್ಲಿ ಆಗಬೇಕಿರುವುದು ಬೀಫ್ ಫೆಸ್ಟ್‌ ಅಲ್ಲ, ಮಿಲ್ಕ್ ಫೆಸ್ಟ್‌ ಎಂಬುದನ್ನು ಜನರಿಗೆ ಮನವರಿಕೆ ಮಾಡುತ್ತೇವೆ ಎಂದರು.

ಭಾರತೀಯ ಸಂಸ್ಕತಿಯಲ್ಲಿ ಪೂಜನೀಯವಾಗಿರುವ ಗೋವನ್ನು ಕೊಂದು ಮಾಂಸ ಪಡೆಯುವ ಬದಲು ಅವುಗಳಿಗೆ ಆಶ್ರಯ ನೀಡಿ ಹಾಲು, ತುಪ್ಪ, ಮೊಸರು, ಔಷಧ, ಗೊಬ್ಬರ ಸೇರಿದಂತೆ ವಿವಿಧ ಗೋ ಉತ್ಪನ್ನ ಪಡೆದುಕೊಳ್ಳಬೇಕು. ಭಾರತವು “ಲ್ಯಾಂಡ್‌ ಆಫ್ ಬೀಫ್’ ಅಲ್ಲ. “ಲ್ಯಾಂಡ್‌ ಆಫ್ ಮಿಲ್ಕ್’ ಎಂದು ತಿಳಿಸಿದರು.

ಗೋವು ಮತ್ತು ಕತ್ತಿಯ ನಡುವೆ ನಾವಿದ್ದೇವೆ ಎಂಬುದನ್ನು ಗೋವಿನ ಮೇಲೆ ಕತ್ತಿ ಎತ್ತುವ ಕಟುಕರು ಯೋಚನೆ ಮಾಡಬೇಕು. ಗೋವಿನ ಹಾಲು ಆರೋಗ್ಯ ವೃದ್ಧಿಸಿದರೆ, ಗೋಮಾಂಸ ಭಕ್ಷಣೆ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಗೋವುಗಳ ರಕ್ಷಣೆಗೆ ಪೊಲೀಸ್‌ ಲಾಠಿ ಏಟು ತಿನ್ನುವುದಷ್ಟೇ ಅಲ್ಲ, ಜೀವ ತ್ಯಾಗಕ್ಕೂ ಭಾರತೀಯ ಗೋ ಪರಿವಾರದ ಕಾಯರ್ಕತರು, ಭಕ್ತರು ಸಿದ್ಧರಿದ್ದಾರೆ ಎಂದರು.

ಗೋವಿನ ಹಾಲು ಮತ್ತು ಅದರಿಂದ ದೊರೆಯುವ ಇತರ ಉತ್ಪನ್ನದಿಂದ ಆದಾಯ ವೃದ್ಧಿಸಿಕೊಳ್ಳಬಹುದು. ಹೀಗಿದ್ದರೂ ಗೋಹತ್ಯೆ ಮಾಡುತ್ತೇವೆ ಎಂಬುವವರು ಬೆಳಕಿನಿಂದ ದೂರದಲ್ಲಿದ್ದಾರೆ ಎಂದು ಅರ್ಥ. ಹೀಗಾಗಿಯೇ ಬೀಫ್ ಮತ್ತು ಬೀಲಿಫ್ ಮಧ್ಯೆ ಹೋರಾಟ ನಡೆಯುತ್ತಿದೆ. ಭಾರತೀಯರು ಪ್ಯಾಕೇಟ್‌ ಹಾಲು ಸೇವನೆ ಮಾಡುತ್ತಾ ವಿಷವನ್ನು ಹಾಲೆಂದು ಭಾವಿಸಿ ಕುಡಿಯುತ್ತಿದ್ದಾರೆ. ಆದ್ದರಿಂದ ದೇಸಿ ಗೋವಿನ ಹಾಲು ಉಪಯೋಗಿಸುವ ಸಂಕಲ್ಪ ಎಲ್ಲರೂ ಮಾಡಬೇಕು ಎಂದು ಹೇಳಿದರು.

Advertisement

ಇತ್ತೀಚೆಗೆ ಪುರಭವನದ ಮುಂದೆ ಹಮ್ಮಿಕೊಂಡಿದ್ದ ಬೀಫ್ ಫೆಸ್ಟ್‌ ತಡೆದ ಎಲ್ಲ ಕಾರ್ಯಕರ್ತರು ಅಭಿನಂದನಾರ್ಹರು. ಅಂದು ಬೆಳಗ್ಗೆ ಸಾಮಾಜಿಕ ತಾಣದಲ್ಲಿ ಆರಂಭವಾದ “ಸ್ಟಾಪ್‌ ಬೀಫ್ ಫೆಸ್ಟ್‌’ ಅಭಿಯಾನ ಮುಂದಿನ 5 ಗಂಟೆಯಲ್ಲಿ ಪ್ರಪಂಚದಾದ್ಯಂತ ಟ್ರೆಂಡ್‌ ಆಗಿತ್ತು.  ಪುರಭವನದ ಮುಂದೆ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡಿ ಬಂಧಿತರಾದವರು ನಿಜವಾದ ಗೋ ಸೇವೆ ಮಾಡುವವರು ಎಂದು ಹೇಳಿದರು.

ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಡಾ.ಮಲ್ಲೇಪುರಂ ಜಿ. ವೆಂಕಟೇಶ್‌ ಮಾತನಾಡಿ, 21ನೇ ಶತಮಾನದಲ್ಲಿ ಔಷಧ, ಆಹಾರ ಸೇರಿ ಎಲ್ಲವೂ ವಿಷವಾಗಿದೆ. ಆದರೂ ಅವುಗಳನ್ನು ನಾವು ಸೇವಿಸುತ್ತಿದ್ದೇವೆ. ಅನ್ನದಲ್ಲಿ ಶಕ್ತಿಯಿಲ್ಲ. ರಾಗಿಗೆ ಬೆಲೆಕೊಡುತ್ತಿಲ್ಲ. ಗೋವಿನಿಂದಲೇ ಎಲ್ಲದರ ಸಂರಕ್ಷಣೆಯಾಗಲಿದೆ. ಈ ನಿಟ್ಟಿನಲ್ಲಿ ಗೋವುಗಳ ರಕ್ಷಣೇಗೆ ಒತ್ತು ನೀಡುವ ಅಗತ್ಯವಿದೆ ಎಂದರು.

ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಹಾಲು ಕರೆಯುವ ಮೂಲಕ ಹಾಲು ಹಬ್ಬಕ್ಕೆ ಚಾಲನೆ ನೀಡಿದರು. ವಸತಿ ಸಚಿವ ಎಂ. ಕೃಷ್ಣಪ್ಪ, ಸಿದ್ಧಾರೂಢಮಠದ ಆರೂಢಭಾರತಿ ಸ್ವಾಮೀಜಿ, ಗುಳೇದಗುಡ್ಡ ಒಪ್ಪತ್ತೇಶ್ವರ ಮಠದ ಒಪ್ಪತೇಶ್ವರ ಸ್ವಾಮೀಜಿ, ಬಿಬಿಎಂಪಿ ಸದಸ್ಯ ಆನಂದ ಹೊಸೂರ್‌, ಗೋ ಸೇನೆ ಅಧ್ಯಕ್ಷ ಶಂಕರ್‌ ಗುರೂಜಿ, ನಟಿ ಸುಕೃತ ರಾವ್‌ ಮೊದಲಾದವರು ಉಪಸ್ಥಿತರಿದ್ದರು.

ಗಮನ ಸೆಳೆದ ಗೋ ಉತ್ಪನ್ನಗಳು: ದೇಸಿ ಗೋವಿನ ಹಾಲು, ತುಪ್ಪ, ಬೆಣ್ಣೆಯಿಂದ ತಯಾರಿಸಿದ ಉತ್ಪನ್ನಗಳು, ಗೋಮೂತ್ರದಿಂದ ತಯಾರಿಸಿ ಔಷಧ ಮಾರಾಟ ಮತ್ತು ಪ್ರದರ್ಶನ ಹಾಲು ಹಬ್ಬದಲ್ಲಿ ಗಮನಸೆಳೆಯಿತು. ಬರ್ಫಿ, ಮೈಸೂರು ಪಾಕ್‌, ಲಸ್ಸಿ,  ಹಲ್ವಾ ಸೇರಿದಂತೆ ವಿವಿಧ ಸಿಹಿ ತಿಂಡಿಗಳನ್ನು ಹಬ್ಬಕ್ಕೆ ಬಂದವರು ಸವಿದರು. ಗೋವಿನ ಸಗಣಿ ತಟ್ಟಿ ನಿರ್ಮಿಸಿದ್ದ ಬೆರಣಿಯನ್ನು ಕೂಡ ಪ್ರದರ್ಶನಕ್ಕೆ ಇಡಲಾಗಿತ್ತು. ಹಾಲು ಹಬ್ಬಕ್ಕೆ ಬಂದವರಿಗೆ ಉಚಿತವಾಗಿ ದೇಸಿ ಹಾಲು ವಿತರಣೆ ಮಾಡಿದ್ದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next