Advertisement
ಪರಿಶಿಷ್ಟ ಜಾತಿ, ಪಂಗಡ-ಗಿರಿಜನ ಉಪಯೋಜನೆ (ಎಸ್‌ಸಿಪಿ- ಟಿಎಸ್‌ಪಿ) ಸಂಬಂಧ ರಾಜ್ಯ ಪರಿಷತ್ ಅಧ್ಯಕ್ಷ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ವಿಧಾನಸಭೆಯಲ್ಲಿ ಸಭೆ ನಡೆಯಿತು. ಆ ಬಳಿಕ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಹಿಂದುಳಿದ ವರ್ಗಗಳ ಹಾಲು ಉತ್ಪಾದಕರನ್ನು ಉತ್ತೇಜಿಸಲು ಸಹಾಯಧನ ನೀಡಲು ತೀರ್ಮಾನಿಸಲಾಗಿದೆ ಎಂದರು.
ಕೃಷಿ ಯಂತ್ರೋಪಕರಣ ಖರೀದಿ, ಇನ್ನಿತರ ಹನಿ ನೀರಾವರಿ ವ್ಯವಸ್ಥೆಗೆ ಶೇ.90ರಷ್ಟು ಸಬ್ಸಿಡಿ ನೀಡಲು ತೀರ್ಮಾನಿಸಲಾಗಿದೆ. ಪಶುಸಂಗೋಪನಾ ಇಲಾಖೆಯಡಿ ಹಸು, ಮೇಕೆ, ಕುರಿ ಸಾಕಣೆ ಯೋಜನೆಯಡಿ ಪ್ರತಿ
ಯೂನಿಟ್‌ಗೆ ಶೇ. 90ರಷ್ಟು ಸಹಾಯಧನ ನೀಡಲಾಗುವುದು. ರೇಷ್ಮೆ ಹುಳು ಸಾಕಣೆದಾರರು ಶೆಡ್ ನಿರ್ಮಾಣಕ್ಕೆ ಶೇ.90ರಷ್ಟು ಸಬ್ಸಿಡಿ, ತೋಟಗಾರಿಕೆ ಇಲಾಖೆಯಡಿ ಹನಿ ನೀರಾವರಿ ಹಾಗೂ ಪಾಲಿಹೌಸ್ ನಿರ್ಮಾಣಕ್ಕೆ ಶೇ. 90 ಸಬ್ಸಿಡಿ ನೀಡಲು ತೀರ್ಮಾನಿಸಲಾಗಿದೆ ಎಂದರು. ಮಹಿಳೆಯರಿಗೆ 10 ಸಾವಿರ ರೂ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ “ಬಡವರ ಬಂಧು’ ಯೋಜನೆ ಮಾದರಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಬಡ ಮಹಿಳೆಯರಿಗೆ 10,000 ರೂ. ಸಾಲ ಸೌಲಭ್ಯ ಕಲ್ಪಿಸುವ ವಿನೂತನ ಯೋಜನೆ ಜಾರಿಗೊಳಿಸಲಾಗುವುದು. ಪರಿಶಿಷ್ಟ ಜಾತಿ, ಪಂಗಡದವರ ಸ್ವಸಹಾಯ ಸಂಘಗಳಿಗೆ 2 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಲಾಗುವುದು ಎಂದು ಕಾರ ಜೋ ಳ ಮಾಹಿತಿ ನೀಡಿದರು.
Related Articles
ಪರಿಶಿಷ್ಟ ಜಾತಿ, ಪಂಗಡದವರ ಕಲ್ಯಾಣಕ್ಕಾಗಿ ಪ್ರಸಕ್ತ ವರ್ಷದಲ್ಲಿ ಒಟ್ಟು 30,444 ಕೋಟಿ ರೂ. ವೆಚ್ಚ ಮಾಡುವ ಕ್ರಿಯಾ ಯೋಜನೆಗೆ ಪ.ಜಾ., ಪಂಗಡದ ಅಭಿವೃದ್ಧಿ ಸಂಬಂಧ ರಚನೆಯಾಗಿರುವ ರಾಜ್ಯ ಪರಿಷತ್ ಅನುಮೋದನೆ ನೀಡಿದೆ. ಸಭೆಯ ಅನಂತರ ಮಾತನಾಡಿದ ಯಡಿಯೂರಪ್ಪ, ಪ.ಜಾ., ಪಂಗಡದವರ ಸರ್ವಾಂಗೀಣ ಅಭಿವೃದ್ಧಿಗಾಗಿ ಎಸ್‌ಸಿಪಿ- ಟಿಎಸ್‌ಪಿ ಯೋಜನೆಯಡಿ ಪ್ರಸಕ್ತ ಹಣಕಾಸು ವರ್ಷದಲ್ಲಿ 30,444 ಕೋಟಿ ರೂ. ವೆಚ್ಚ ಮಾಡುವ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಪರಿಶಿಷ್ಟ ಜಾತಿಯವರ ಕಲ್ಯಾಣಕ್ಕೆ 21,602 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ 8,842 ಕೋಟಿ ರೂ. ವಿನಿಯೋಗಿಸಲಾಗುವುದು ಎಂದು ಹೇಳಿದರು.
Advertisement