ದಾವಣಗೆರೆ: ನಾಗರ ಪಂಚಮಿ ಹೆಸರಿನಲ್ಲಿ ಹಾಲನ್ನು ಅಪವ್ಯಯ ಮಾಡದೆ ಅದನ್ನು ಮಕ್ಕಳಿಗೆ ನೀಡುವ ಹಬ್ಬವನ್ನಾಗಿಸಬೇಕು ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಶುಕ್ರವಾರ ಕೊಂಡಜ್ಜಿ ರಸ್ತೆಯಲ್ಲಿರುವ ಪಿಎಲ್‌ಇ ಟ್ರಸ್ಟ್‌ನ ಬಿಜೆಎಂ ಸ್ಕೂಲ್, ಜಿಎನ್‌ಬಿ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ನಾಗರ ಪಂಚಮಿ ಪ್ರಯುಕ್ತ 21ನೇ ವರ್ಷದ ಕಲ್ಲ ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು… ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಗರ ಪಂಚಮಿ ಹೆಸರಿನಲ್ಲಿ ಪೌಷ್ಟಿಕಾಂಶಯುಕ್ತ ಹಾಲನ್ನು ಕಲ್ಲ ನಾಗರಕ್ಕೆ, ಹುತ್ತಕ್ಕೆ, ಬೆಳ್ಳಿ ನಾಗಪ್ಪನಿಗೆ ಎಂದು ಎರೆಯದೆ ಬಡ ಮಕ್ಕಳಿಗೆ, ರೋಗಿಗಳಿಗೆ, ಅನಾಥರಿಗೆ ನೀಡುವುದರಿಂದ ಉಪಯೋಗವಾಗುತ್ತದೆ. ಜಾತಿ, ಧರ್ಮ, ಬೇಧಭಾವವಿಲ್ಲದೇ ಎಲ್ಲ ಮಕ್ಕಳೂ ಒಟ್ಟಾಗಿ ಸೇರಿ ಕುಡಿಯುತ್ತಾರೆ. ಎಲ್ಲ ಮಕ್ಕಳೂ ಒಂದೇ ತಾಯಿಯ ಮಕ್ಕಳಂತೆ ಬಾಳುತ್ತಾರೆ ಎಂದರು.
ಪೌಷ್ಟಿಕಾಂಶಯುಕ್ತ ತಾಯಿಯ ಹಾಲು ಉತ್ತಮ, ಆಕಳ ಹಾಲು ಪವಿತ್ರ. ಅಂತಹ ಹಾಲನ್ನು ಅಪವ್ಯಯ ಮಾಡದೆ ಹಸಿದವರಿಗೆ ನೀಡಿ. ಅದರಿಂದ ದೇವರು ಮೆಚ್ಚುತ್ತಾನೆ. ಕಲ್ಲಿಗೆ, ಹುತ್ತಕ್ಕೆ ಹಾಕಿದರೆ ದೇವರು ಖಂಡಿತಾ ಮೆಚ್ಚುವುದಿಲ್ಲ. ನಿಜವಾದ ಹಾವು ಕಂಡರೆ ಕೊಲ್ಲು ಎನ್ನುವ ಜನರು ಕಲ್ಲ ನಾಗರಕ್ಕೆ ಹಾಲನ್ನು ಎರೆಯುವ ಮೌಡ್ಯತೆಗೆ ಕಡಿವಾಣ ಹಾಕುವ ಕೆಲಸವನ್ನು ಬಸವಣ್ಣನವರು ಮಾಡಿದರು ಎಂದು ಸ್ಮರಿಸಿದರು.
ತಾವು ಕಳೆದ 20 ವರ್ಷದಿಂದ ನಾಗರ ಪಂಚಮಿ ಪ್ರಯುಕ್ತ ಕಲ್ಲ ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು… ಸಪ್ತಾಹ ನಡೆಸಿಕೊಂಡು ಬರುತ್ತಿದ್ದು, ದಾವಣಗೆರೆಯಲ್ಲಿ ಪ್ರಾರಂಭಿಸಲಾದ ಸಪ್ತಾಹ ಕಾರ್ಯಕ್ರಮವನ್ನು ಬೆಳಗಾವಿ ಇತರೆಡೆಯೂ ನಡೆಸುತ್ತಿರುವುದಾಗಿ ತಿಳಿಸಿದರು. ರಾಜ್ಯ ಸರ್ಕಾರ ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಹಾಲು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಎಲ್ಲರೂ ಮೆಚ್ಚುವ ಕಾರ್ಯ. ಲಕ್ಷಾಂತರ ಮಕ್ಕಳ ಆರೋಗ್ಯ ಸುಧಾರಿಸುವುದಲ್ಲದೆ, ಆರೋಗ್ಯವಂತರಾಗಿ ಬಾಳುತ್ತಾರೆ. ಬುದ್ಧಿಶಕ್ತಿಯೂ ಕೂಡಾ ಬೆಳೆಯುತ್ತದೆ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ. ಉದೇಶ್ ಮಾತನಾಡಿ, ಬಹಳ ವರ್ಷಗಳಿಂದಲೂ ಜನರು ಮೂಢನಂಬಿಕೆ, ವ್ರತ ಆಚರಿಸುತ್ತಾ ಬಂದಿದ್ದಾರೆ. ಭಕ್ತಿಯ ಹೆಸರಲ್ಲಿ ಪೌಷ್ಟಿಕಾಂಶಯುಕ್ತ ಹಾಲನ್ನು ಕಲ್ಲು ನಾಗರಕ್ಕೆ, ಹುತ್ತಕ್ಕೆ ಹಾಕುವ ಮೂಲಕ ಅಪವ್ಯಯ ಮಾಡುತ್ತಿದ್ದಾರೆ. ಹಾವು ಎಂದಿಗೂ ಹಾಲು ಕುಡಿಯುವುದಿಲ್ಲ. ಹುಳ ಹುಪ್ಪಟೆ ಮಾತ್ರ ತಿನ್ನುತ್ತದೆ. ಇಂತಹ ಮೂಢನಂಬಿಕೆಗಳು ದೂರವಾಗಬೇಕು. ಜನರಲ್ಲಿ ಜಾಗೃತಿ ಮೂಡಬೇಕು ಎಂದರು.
ಅಭಿಯೋಗ ಇಲಾಖೆ ಉಪ ನಿರ್ದೇಶಕ ಎಸ್ .ವಿ. ಪಾಟೀಲ್ ಮಾತನಾಡಿ, ಕಲ್ಲ ನಾಗರಕ್ಕೆ, ಹುತ್ತಕ್ಕೆ ಹಾಲನ್ನು ಹಾಕಿ ಅಪವ್ಯಯ ಮಾಡುವ ಇಂತಹ ಗೊಡ್ಡು ಸಂಪ್ರದಾಯಗಳನ್ನು ದೂರಮಾಡುವ, ಜಾಗೃತಿ ಮೂಡಿಸುವ ಕಾರ್ಯಕ್ರಮ ಎಂದು ಸಂತಸ ವ್ಯಕ್ತಪಡಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯಕುಮಾರ್, ಶಾಲಾ ಕಾರ್ಯದರ್ಶಿ ಕೆ.ಎಸ್. ಮಂಜುನಾಥ ಅಗಡಿ, ಪರಿಸರ ಸಂರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಗಿರೀಶ್ ದೇವರಮನಿ ಇತರರು ಇದ್ದರು.